ಶಿಗ್ಗಾಂವಿ: ಉತ್ತಮ ಶಿಕ್ಷಣ, ಒಳ್ಳೆಯ ಆರೋಗ್ಯವನ್ನು ಜನರ ಮನೆ ಬಾಗಿಲಿಗೆ ಒದಗಿಸುವ ನಿಟ್ಟಿನಲ್ಲಿ ಕೆಎಲ್‌ಇ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಅದರ ಭಾಗವಾಗಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಸೆಟಲೈಟ್ ಪಾಲಿಕ್ಲಿನಿಕ್ ಪ್ರಾರಂಭಿಸಲಾಗುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ಮುಂದಿನ ಹಂತದಲ್ಲಿ ಕೊಪ್ಪಳ, ಕಲಘಟಗಿ ಮತ್ತು ಧಾರವಾಡದಲ್ಲಿ ಆಸ್ಪತ್ರೆ ವಿಸ್ತರಣೆಗೊಂಡು ಅಲ್ಲಿಯೂ ಉತ್ತಮ ಆರೋಗ್ಯ ಸೇವೆ ಒದಗಿಸುವ ಗುರಿ ಹೊಂದಲಾಗಿದೆ. ಸ್ಥಳೀಯವಾಗಿ ಗುಣಮಟ್ಟದ ಚಿಕಿತ್ಸೆ ಒದಗಿಸಲಾಗುವುದು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಸಂಸ್ಥೆಯ ವಾಹನ ಮೂಲಕ ಹುಬ್ಬಳ್ಳಿಯ ಹತ್ತಿರವಿರುವ ಕೆಎಲ್‌ಇ ಸಂಸ್ಥೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುವುದು ಎಂದರು.
ಈಗಾಗಲೇ ಹುಬ್ಬಳ್ಳಿಯ ಗಬ್ಬೂರು ಬಳಿ ಒಂದು ಸಾವಿರ ಹಾಸಿಗೆಯ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಪ್ರಾರಂಭವಾಗಿದ್ದು, ಅಲ್ಲಿಯೂ ಶಿಕ್ಷಣದ ಜತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ ಎಂದರು.ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಕೋರೆಯವರ ನೇತೃತ್ವದಲ್ಲಿ ಶಿಕ್ಷಣ, ಆರೋಗ್ಯ ಸೇವೆಯ ಜತೆಗೆ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸ್ಪರ್ಧಾತ್ಮಕ ಯುಗದಲ್ಲಿ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸೆಟಲೈಟ್ ಕ್ಲಿನಿಕ್ ಪ್ರಾರಂಭಿಸಲಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೊ. ನಿತಿನ್ ಗಂಗಾನೆ, ಡಾ. ಪ್ರೊ. ವಿ.ಡಿ. ಪಾಟೀಲ ಮಾತನಾಡಿದರು. ಡಾ. ಅರುಣಕುಮಾರ, ಡಾ. ಎಂ.ಸಿ. ಕೊಳ್ಳಿ, ಡಾ. ಎಂ.ಜಿ. ಹಿರೇಮಠ, ಡಾ. ಪಿ.ಆರ್. ಪಾಟೀಲ, ಡಾ. ಬಸವರಾಜ ಸಜ್ಜನ, ಟಿ.ವಿ. ಸುರಗೀಮಠ, ಭರಮಜ್ಜ ನವಲಗುಂದ, ಜಯಣ್ಣ ಹೆಸರೂರ ಇತರರಿದ್ದರು.