ಕೆಎಂಎಫ್‌ ನಂದಿನಿ ದೇಶದ ನಂ.4 ಬ್ರ್ಯಾಂಡ್‌!

KannadaprabhaNewsNetwork |  
Published : Jun 29, 2025, 01:35 AM ISTUpdated : Jun 29, 2025, 07:50 AM IST
KMF Milk Price Hike

ಸಾರಾಂಶ

ಕರ್ನಾಟಕ ಸಹಕಾರಿ ಹಾಲು ಮಹಾಮಂಡಳ (ಕೆಎಂಎಫ್‌)ದ ಬ್ರ್ಯಾಂಡ್‌ ‘ನಂದಿನಿ’ ಆಹಾರ ಮತ್ತು ಪಾನೀಯ ಉತ್ಪನ್ನಗಳ ಮೌಲ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದೆ.

  ಬೆಂಗಳೂರು :  ಕರ್ನಾಟಕ ಸಹಕಾರಿ ಹಾಲು ಮಹಾಮಂಡಳ (ಕೆಎಂಎಫ್‌)ದ ಬ್ರ್ಯಾಂಡ್‌ ‘ನಂದಿನಿ’ ಆಹಾರ ಮತ್ತು ಪಾನೀಯ ಉತ್ಪನ್ನಗಳ ಮೌಲ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಶ್ರೇಯಾಂಕದಲ್ಲಿ ಜಿಗಿತ ಕಂಡಿದ್ದು, 38ನೇ ಸ್ಥಾನಕ್ಕೆ ಏರಿಕೆಯಾಗಿದೆ. ದೇಶದ ಪ್ರಮುಖ ಬ್ರ್ಯಾಂಡ್‌ಗಳ ಪೈಪೋಟಿಯ ನಡುವೆಯೂ ‘ನಂದಿನಿ’ ನಾಲ್ಕನೆಯ ಸ್ಥಾನ ಕಾಯ್ದುಕೊಂಡಿದೆ.

ವಿಶ್ವದ ಪ್ರಮುಖ ಬ್ರ್ಯಾಂಡ್‌ ಮೌಲ್ಯಮಾಪನ ಸಂಸ್ಥೆಯಾದ ಬ್ರ್ಯಾಂಡ್‌ ಫೈನಾನ್ಸ್‌ ತನ್ನ 2025ರ ವರದಿ ಬಿಡುಗಡೆ ಮಾಡಿದ್ದು, 2024ರಲ್ಲಿ 43ನೇ ಸ್ಥಾನದಲ್ಲಿದ್ದ ನಂದಿನಿ ಈ ಬಾರಿ ನೂರು ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಏರಿದೆ. ಭಾರತೀಯ ಬ್ರ್ಯಾಂಡ್‌ಗಳ ಅಗ್ರ ನೂರರಲ್ಲಿ ನಂದಿನಿ ಬ್ರ್ಯಾಂಡ್‌ ಮೌಲ್ಯವು 1,079 ಮಿಲಿಯನ್‌ಗೆ (107.9 ಕೋಟಿ ರು.) ಏರಿಕೆಯಾಗಿದೆ. ಇದು ಹಿಂದಿನ ವರ್ಷಕ್ಕಿಂತ 139 ಮಿಲಿಯನ್‌ (13.90 ಕೋಟಿ ರು.)ಗಿಂತ ಹೆಚ್ಚು.

ಇನ್ನು ಆಹಾರ ಮತ್ತು ಪಾನೀಯಗಳ ವಿಭಾಗದಲ್ಲಿ ನಂದಿನಿ ದೇಶದಲ್ಲೇ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದೆ. ಮೊದಲ ಮೂರು ಸ್ಥಾನದಲ್ಲಿ ಅಮುಲ್‌, ಮದರ್‌ ಡೇರಿ ಮತ್ತು ಬ್ರಿಟಾನಿಯಾ ಇದ್ದರೆ, ಐದನೇ ಸ್ಥಾನದಲ್ಲಿ ಡಾಬರ್‌ ಇದೆ. ನಂದಿನಿ ಬ್ರ್ಯಾಂಡ್‌ ನಿರಂತರ ಕಾರ್ಯಕ್ಷಮತೆ ಮತ್ತು ಮೌಲ್ಯವೃದ್ಧಿಯಿಂದ ಬೆಳೆದಿದ್ದು, ದೇಶದಲ್ಲೇ ಖ್ಯಾತಿಯನ್ನು ಗಳಿಸಿದೆ.

ಬ್ರ್ಯಾಂಡ್‌ ಫೈನಾನ್ಸ್‌ ಮೌಲ್ಯಮಾಪನ ಸಂಸ್ಥೆ ಬ್ರ್ಯಾಂಡ್‌ಗಳ ಆರ್ಥಿಕ ಸದೃಢತೆ, ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್‌ಗಳ ಮೌಲ್ಯಮಾಪನ ಅಳೆಯುವ ಸಂಸ್ಥೆಯಾಗಿದೆ. ಇದರ ಕೇಂದ್ರ ಕಚೇರಿ ಲಂಡನ್‌ನಲ್ಲಿದ್ದು ಈ ಸಂಸ್ಥೆ 25ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆ ವಾರ್ಷಿಕ 6 ಸಾವಿರಕ್ಕೂ ಹೆಚ್ಚು ಬ್ರ್ಯಾಂಡ್‌ಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸುತ್ತದೆ. ಬ್ರ್ಯಾಂಡ್‌ ಫೈನಾನ್ಸ್‌ ವಿವಿಧ ಬ್ರ್ಯಾಂಡ್‌ಗಳ ಆರ್ಥಿಕ ಮೌಲ್ಯವನ್ನು ಅಳೆಯುವುದರಿಂದ ಕಂಪನಿಗಳು ಕಾರ್ಯತಂತ್ರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಸಂಸ್ಥೆ ವರದಿ ನೆರವಾಗುತ್ತದೆ. ಕೋಟ್‌...

ಇನ್ನಷ್ಟು ಬಲಪಡಿಸುತ್ತೇವೆ: ಕೆಎಂಎಫ್‌

ನಂದಿನಿಯ ಬೆಳವಣಿಗೆ ಹಾಗೂ ಗೌರವಪೂರ್ಣ ಸ್ಥಾನಕ್ಕೆ ಗ್ರಾಹಕರು, ನಿಷ್ಠಾವಂತರಾದ ಹಾಲು ಉತ್ಪಾದಕರು, ವಿಶ್ವಾಸಾರ್ಹ ಪಾಲುದಾರರು ಮತ್ತು ಸಮರ್ಪಿತ ತಂಡಗಳ ನಿರಂತರ ಬೆಂಬಲ ಮತ್ತು ನಂಬಿಕೆ ಕಾರಣ. ಪ್ರತಿದಿನವೂ ನಾವು ಮೌಲ್ಯ, ಪೋಷಣೆ ಮತ್ತು ವಿಶ್ವಾಸಾರ್ಹತೆ ಒದಗಿಸಲು ನಿಸ್ಸಂದೇಹವಾಗಿ ಬದ್ಧರಾಗಿದ್ದೇವೆ. ನಂದಿನಿಯ ಪರಂಪರೆಯನ್ನು ಇನ್ನಷ್ಟು ಬಲಪಡಿಸಲು ಮತ್ತು ಹೊಸ ಮೈಲಿಗಲ್ಲುಗಳನ್ನು ತಲುಪಲು ನಾವು ಒಂದಾಗಿ ಮುಂದುವರೆಯುತ್ತೇವೆ ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಹೇಳಿದ್ದಾರೆ.--

* ಭಾರತದ ಅಗ್ರ-100 ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಕಳೆದ ವರ್ಷ 43ನೇ ಸ್ಥಾನದಲ್ಲಿದ್ದ ನಂದಿನಿ.

* ಬ್ರ್ಯಾಂಡ್‌ ಮೌಲ್ಯ 107.9 ಕೋಟಿ ರು.ಗೆ ಏರಿಕೆ, ಕಳೆದ ವರ್ಷಕ್ಕಿಂತ 13.90 ಕೋಟಿ ಹೆಚ್ಚಳ.

* ಆಹಾರ, ಪಾನೀಯ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಕಳೆದ ವರ್ಷವೂ 4ನೇ ಸ್ಥಾನ ಪಡೆದಿದ್ದ ನಂದಿನಿ.

* ಆಹಾರ, ಪಾನೀಯ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಅಮುಲ್‌, ಮದರ್‌ ಡೇರಿ, ಬ್ರಿಟಾನಿಯಾಗೆ ಕ್ರಮವಾಗಿ ಮೊದಲ 3 ಸ್ಥಾನ.

* 25 ದೇಶಗಳ 6000ಕ್ಕೂ ಹೆಚ್ಚು ಬ್ರ್ಯಾಂಡ್‌ಗಳ ಮೌಲ್ಯಮಾಪನ ನಡೆಸುವ ಬ್ರ್ಯಾಂಡ್‌ ಫೈನಾನ್ಸ್‌ ಸಂಸ್ಥೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ