ಸಿರಿಗೆರೆ: ಸಾಧನೆಯ ಶಿಖರದ ಕನಸು ಹೊತ್ತವರಿಗೆ ಅಕ್ಷರ ಜ್ಞಾನವೇ ಆಧಾರ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ನೂತನ ಕುಲಸಚಿವ ಡಾ.ಎಚ್.ವಿಶ್ವನಾಥ್ ಹೇಳಿದರು.
ಬಡವರು, ಶೋಷಿತರ ಜೊತೆಗೆ ಎಲ್ಲರೂ ಹೆಚ್ಚು ಹೆಚ್ಚು ಅಕ್ಷರ ಜ್ಞಾನ ಪಡೆದು ಜೀವನದಲ್ಲಿ ಮುಂದೆ ಬರಬೇಕು ಎಂಬುದು ಬಾಬಾ ಸಾಹೇಬ್ ಅಂಬೇಡ್ಕರ್, ಬಾಬು ಜಗಜೀವನ್ ರಾಮ್, ಫುಲೆ, ಗಾಂಧೀಜಿ, ವಿವೇಕಾನಂದರ ಆಶಯವಾಗಿತ್ತು. ಹಾಗಾಗಿ ಎಲ್ಲರೂ ಕೂಡ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಹಲವು ರೀತಿಯ ದಾಸ್ಯಗಳಿಂದ ಮುಕ್ತಿ ಕಾಣಬೇಕು ಎಂದರು.
ನಾನು ಏನೇ ಸಾಧನೆ ಮಾಡಿದ್ದರೂ ಅದಕ್ಕೆಲ್ಲ ಮೂಲ ಕಾರಣ ಅಕ್ಷರ ಜ್ಞಾನ ಸಂಪಾದನೆಯೇ ಆಗಿದೆ. ಅತ್ಯಂತ ಹಿಂದುಳಿದ ಸಮುದಾಯ ಮತ್ತು ಕಡುಬಡತನದಲ್ಲಿ ಹುಟ್ಟಿದ ಏನಾದರೂ ಸಾಧಿಸಲೇಬೇಕು. ಈ ಮೂಲಕ ಸಮುದಾಯಕ್ಕೂ ಕೊಡುಗೆ ಕೊಡಬೇಕು ಎಂಬ ಹಠದಿಂದ ಜ್ಞಾನದ ಕಡೆಗೆ ಹೆಚ್ಚು ಒತ್ತನ್ನು ಕೊಟ್ಟು ಹಲವು ಪದವಿಗಳನ್ನು ಸಂಪಾದನೆ ಮಾಡಿದೆ. ಪರಿಶ್ರಮವು ಇಂದು ನನ್ನನ್ನು ಭಾರತದ 3ನೇ ಪ್ರತಿಷ್ಠಿತ ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವನನ್ನಾಗಿ ಮಾಡಿರುವುದು ಅತ್ಯಂತ ಹರ್ಷದ ಸಂಗತಿಯಾಗಿದೆ ಎಂದು ತಿಳಿಸಿದರು.ದ್ಯಾಪನಹಳ್ಳಿ ನಿವೃತ್ತ ಶಿಕ್ಷಕರಾದ ಮಲ್ಲಿಕಾರ್ಜುನಪ್ಪ, ಚವಲಿಹಳ್ಳಿ ನಿವೃತ್ತ ಶಿಕ್ಷಕರಾದ ಕರಿಯಪ್ಪ, ಭರಮಸಾಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ. ದುರ್ಗೇಶ್ ಪೂಜಾರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹರಾಜು ಎಸ್ಸಿ ಸೆಲ್ ಪ್ರಧಾನ ಕಾರ್ಯದರ್ಶಿ ಶಿವಣ್ಣ ಎಸ್ಟಿ ಸೆಲ್ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಸಮುದಾಯದ ಮುಖಂಡರಾದ ರಾಜು ಸೀಗೇಹಳ್ಳಿ, ಅಂಜಿನಪ್ಪ, ವೀರಬಸಪ್ಪ ಹಾಗೂ ಭರಮಸಾಗರ ಹೋಬಳಿಯ ಮಾದಿಗ ಸಮಾಜದ ಬಂಧುಗಳು, ಶಿಕ್ಷಣ ಪ್ರೇಮಿಗಳು ಹಾಗೂ ಇತರೆ ಗಣ್ಯ ಮುಖಂಡರು ಹಾಜರಿದ್ದರು.