ಜ್ಞಾನ ವಿಕಾಸ ಕೇಂದ್ರ ಮಹಿಳಾ ಸ್ವಾವಲಂಬನೆಗೆ ಸಹಕಾರಿ: ವಿಶಾಲಾಕ್ಷಮ್ಮ ,ಎಂ.ಎಸ್.

KannadaprabhaNewsNetwork |  
Published : Nov 24, 2025, 01:15 AM IST
ತರೀಕೆರೆಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆ, ಮಹಿಳೆಯರ ಸ್ವಾವಲಂಬಿ ಜೀವನ ನಿರ್ವಹಣೆಗೆ ಮಹಿಳಾ ಸಬಲೀಕರಣದಂತಹ ಕಾರ್ಯಕ್ರಮ ಅವಶ್ಯಕ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜ್ಞಾನ ವಿಕಾಸ ಕೇಂದ್ರದ ಕಾರ್ಯಕ್ರಮ ಮಹಿಳೆಯರ ಸ್ವಾವಲಂಬಿ ಮತ್ತು ಸ್ವಾಭಿಮಾನಿ ಬದುಕಿಗೆ ಸಹಕಾರಿ ಎಂದು ಚಿಕ್ಕಮಗಳೂರು ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ವಿಶಾಲಾಕ್ಷಮ್ಮ ಎಂ.ಎಸ್.ಹೇಳಿದ್ದಾರೆ.

- ತರೀಕೆರೆಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಹಿಳೆಯರ ಸ್ವಾವಲಂಬಿ ಜೀವನ ನಿರ್ವಹಣೆಗೆ ಮಹಿಳಾ ಸಬಲೀಕರಣದಂತಹ ಕಾರ್ಯಕ್ರಮ ಅವಶ್ಯಕ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜ್ಞಾನ ವಿಕಾಸ ಕೇಂದ್ರದ ಕಾರ್ಯಕ್ರಮ ಮಹಿಳೆಯರ ಸ್ವಾವಲಂಬಿ ಮತ್ತು ಸ್ವಾಭಿಮಾನಿ ಬದುಕಿಗೆ ಸಹಕಾರಿ ಎಂದು ಚಿಕ್ಕಮಗಳೂರು ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ವಿಶಾಲಾಕ್ಷಮ್ಮ ಎಂ.ಎಸ್.ಹೇಳಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನಿಂದ ಪಟ್ಟಣದ ಯು.ಎಸ್.ಕನ್ವೆನ್.ಷನ್ ಹಾಲ್ ನಲ್ಲಿ ಮಹಿಳಾಜ್ಞಾನವಿಕಾಸ ಕಾರ್ಯಕ್ರಮದಡಿ ನಡೆದ ತಾಲೂಕು ಮಟ್ಟದ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿ, ಮಹಿಳೆ ನಿಶ್ಚಿಂತೆಯಿಂದ ತನ್ನ ಬದುಕು ಕಟ್ಟಿಕೊಳ್ಳಲು ಲೋಕ ಜ್ಞಾನ ಹೊಂದಿರಬೇಕು. ಈ ಕಾರಣದಿಂದ ಮಹಿಳಾ ಜ್ಞಾನ ವಿಕಾಸ ಕೇಂದ್ರ ಮಹಿಳೆಯರಿಗೆ ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಸಾಮಾಜಿಕ ಜ್ಞಾನದ ಮಾಹಿತಿ ನೀಡಿ ಜಾಗೃತಿಗೊಳಿಸುವ, ನಿರ್ಗತಿಕರರಿಗೆ ಮನೆ ರಚನೆಯ ವಾತ್ಸಲ್ಯ ಕಾರ್ಯಕ್ರಮ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಮ್ಮ ಸಮಾಜಕ್ಕೆ ಮಾದರಿ ಎಂದು ತಿಳಿಸಿದರು.

ಪೊಲೀಸ್‌ ಸಬ್ ಇನ್‌ಸ್ಪೆಕ್ಟರ್‌ ಆನಂದ್ ಪಾವಸ್ಕರ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಪೋಕ್ಸೊ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು, ಮಹಿಳೆಯರು ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ. ಹೆಣ್ಣು ಮಕ್ಕಳು ವಯಸ್ಸಿಗೆ ಬಾರದೆ ವಿವಾಹ ಮಾಡುವುದರಿಂದ ದೈಹಿಕವಾಗಿ ಸೊರಗುವರು. ಇದರಿಂದ ಅನೇಕ ಕಾಯಿಲೆಗೆ ತುತ್ತಾಗುತ್ತಾರೆ, ಸರ್ಕಾರ 18 ವಯಸ್ಸಿನೊಳಗಿನ ಹೆಣ್ಣು ಮಕ್ಕಳಿಗೆ ವಿವಾಹ ಮಾಡದಂತೆ ಕಾನೂನು ರೂಪಿಸಿದೆ. 18 ವರ್ಷದೊಳಗಿನ ಮಕ್ಕಳಿಗೆ ದ್ವಿಚಕ್ರ ವಾಹನ ನೀಡುವುದು ಅಪರಾಧ. ಆಕಸ್ಮಿಕ ಘಟನೆಗಳು ಸಂಭವಿಸಿದಾಗ ಪೋಷಕರ ಮೇಲೆ ಪ್ರಕರಣ ದಾಖಲು ಹಾಗೂ ದಂಡ ವಿಧಿಸಲಾಗುವುದು. ಇಂದಿನ ಮಕ್ಕಳು ಮೊಬೈಲ್ ಗಳ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಮಹಿಳೆಯರು ಮತ್ತು ಪೋಷಕರು ಈ ಸಂಬಂಧ ಗಂಭೀರವಾಗಿ ಆಲೋಚಿಸಬೇಕು ಎಂದು ತಿಳಿಸಿದರು. ಗ್ಲಾಸಿ ಕಿಡ್ಸ್ ಸದ್ವಿದ್ಯಾ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರು ಹರ್ಷಿಣಿ ಕುಮಾರ್ ಮಾತನಾಡಿ, ಹಿಂದೆ ನಾಲ್ಕು ಗೋಡೆಗ ಳೊಳಗೆ ಬಂಧಿತರಾಗಿದ್ದ ಮಹಿಳೆಯರು ಇಂದು ಅಂಗಳದಿಂದ ಬಾಹ್ಯಾಕಾಶದವರೆಗೆ ಗುರುತಿಸಿಕೊಂಡು ಸಮಾಜದ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯ ತೋರಿಸುತ್ತಿದ್ದಾರೆ. ಮಹಿಳೆಯರು ಜ್ಞಾನ-ವಿಜ್ಞಾನ, ಕಾರ್ಮಿಕ ಕ್ಷೇತ್ರ, ಸೇವಾ ಕ್ಷೇತ್ರ, ಉದ್ಯಮ, ಪುರುಷರಿಗಷ್ಟೇ ಎಂದೇ ನಂಬಲಾದ ವೃತ್ತಿಗಳಲ್ಲೂ ಸ್ಥಾನವನ್ನು ನಿರ್ಮಿಸಿ ಕೊಂಡಿದ್ದಾರೆ. ಮಹಿಳೆಯರು ಶಿಕ್ಷಣ, ಉದ್ಯೋಗ, ವೈಜ್ಞಾನಿಕ ಸಂಶೋಧನೆ, ಸಮಾಜಸೇವಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.ಮನೆ ಕೆಲಸ ಮಾತ್ರ ಮಹಿಳೆ ಕೆಲಸ ಎಂಬ ನಂಬಿಕೆ ಕಾಣೆಯಾಗುತ್ತಿದೆ. ಮಹಿಳೆಯರು ಪುರುಷರಂತೆ ಸಮಾನಾಗಿ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ವ್ಯಾಪಾರ, ಕೈಗಾರಿಕೆ ಯಂತಹ ಸ್ವಯಂ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಉತ್ತಮ ಸ್ಥಾನಮಾನ ಗಳಿಸಿದ್ದಾರೆ ಎಂದು ಹೇಳಿದರು.ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿ ಈ ಹಿಂದೆ ನಾಲ್ಕು ಗೋಡೆಗಳ ಮದ್ಯೆ ಬಂಧಿಯಾಗಿದ್ದ ಮಹಿಳೆಯರು ಮಾತೃಶ್ರೀ ಹೇಮಾವತಿ ಅಮ್ಮನ ಕನಸಿನ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಸೇರಿ ಇಂದು ಪುರುಷರಷ್ಟೇ ಸಮಾನಳು ಎಂದು ನಿರೂಪಿಸಿದ್ದಾರೆ.

ಪ್ರತಿಯೊಂದಕ್ಕೂ ಪುರುಷನನ್ನು ಅವಲಂಬಿಸದೆ ಸ್ವಾವಲಂಬಿ ಬದುಕು ನಡೆಸಲು ಈ ಕಾರ್ಯಕ್ರಮ ನೆರವಾಗಿದೆ ಮಾತೃ ಶ್ರೀಯವರ ಅತ್ಯಂತ ಕಾಳಜಿ ದುರ್ಬಲ ವರ್ಗದ ನಿರ್ಗತಿಕ ಕುಟುಂಬಗಳಿಗೆ ಪ್ರತಿ ತಿಂಗಳು ನೀಡುವ ಮಾಸಾಶನ, ಮನೆಯೆ ಇಲ್ಲದೆ ಗುಡಿಸಿನಲ್ಲಿ ವಾಸ ಮಾಡುವ ಅತ್ಯಂತ ಬಡ ಕುಟುಂಬಗಳಿಗೆ ವಾತ್ಸಲ್ಯ ಕಾರ್ಯಕ್ರಮ, ಪೌಷ್ಟಿಕ ಆಹಾರ ಮೇಳಗಳು, ಆರೋಗ್ಯ, ಕಾನೂನು, ತರಬೇತಿ ಸೇರಿದಂತೆ ಇತರೆ ಕಾರ್ಯಕ್ರಮ ಅವರಿಗೆ ಬಡವರ ಬಗೆಗಿನ ಕಾಳಜಿ ತೋರಿಸುತ್ತದೆ ಎಂದು ತಿಳಿಸಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲೆಯಾದ್ಯಂತ ಸಹಸ್ರಾರು ಸಂಘಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆ ಯುತ್ತಿದೆ. ಕೇವಲ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿ ಅವರನ್ನು ಆರ್ಥಿಕವಾಗಿ ಅಭಿವೃದ್ಧಿ ಜೊತೆಗೆ ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ, ಕುಟುಂಬ ನಿರ್ವಹಣೆ, ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಮಹಿಳೆಯರಿಗೆ ಅಗತ್ಯ ಕಾರ್ಯಕ್ರಮ ರೂಪಿಸಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವಂತೆ ಮಾಡುವುದೇ ಆಗಿದೆ. ಮಹಿಳೆಯರು ಸಂಘದ ಧ್ಯೇಯೋದ್ದೇಶ ಅರಿತು ವ್ಯವಹರಿಸುವುದು ಬಹಳ ಮುಖ್ಯ ಎಂದು ತಿಳಿಸಿದರು.ಪುರಸಭೆ ಉಪಾಧ್ಯಕ್ಷೆ ಗೀತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಗ್ರಾಮಾಭಿವೃದ್ಧಿ ಯೋಜನೆ ನಮ್ಮ ಸಮಾಜಕ್ಕೆ, ಮಹಿಳೆಯರಿಗೆ ಸ್ಪೂರ್ತಿದಾಯಕ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಶ್ಲಾಘನೀಯ ಎಂದು ತಿಳಿಸಿದರು.ತಾಲೂಕು ಯೋಜನಾಧಿಕಾರಿ ಕುಸುಮಾಧರ್ ಮಾತನಾಡಿದರು.ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸವಿತ, ಸೇವಾಪ್ರತಿನಿಧಿ ದ್ರಾಕ್ಷಾಯಿಣಿ, ತಾಲೂಕಿನ ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಸೇವಾಪ್ರತಿನಿಧಿಗಳು ಸಂಘದ ಸದಸ್ಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸದಸ್ಯರಿಗೆ ರಂಗೋಲಿ ಸ್ಪರ್ಧೆ, ಹೂ ಗುಚ್ಛ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.-

23ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ನಿಂದ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಚಿಕ್ಕಮಗಳೂರು ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿಶಾಲಾಕ್ಷಮ್ಮ ಎಂ.ಎಸ್. ಉದ್ಘಾಟಿಸಿದರು. ಪುರಸಭೆ ಉಪಾಧ್ಯಕ್ಷೆ ಗೀತಾ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ