- ರಂಭಾಪುರಿ ಪೀಠದಲ್ಲಿ ೩೪ನೇ ವರ್ಷದ ಶ್ರಾವಣ ತಪೋನುಷ್ಠಾನ, ಶ್ರೀ ರೇಣುಕ ವಿಜಯ ಪುರಾಣ ಪ್ರವಚನ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಜೀವನದ ಕೆಲವು ಸಮಸ್ಯೆಗಳಿಗೆ ನಾವು ನಡೆದು ಬಂದ ದಾರಿ ಹಾಗೂ ತೆಗೆದುಕೊಂಡ ನಿರ್ಧಾರಗಳೇ ಕಾರಣವಾಗಿರುತ್ತವೆ. ಅನುಭವದಿಂದ ಸಿಗುವ ಜ್ಞಾನ ಸಂಪತ್ತು ಓದಿನಿಂದ ಸಿಗುವುದಿಲ್ಲವೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.
ರಂಭಾಪುರಿ ಪೀಠದಲ್ಲಿ ನಡೆಯುತ್ತಿರುವ ೩೪ನೇ ವರ್ಷದ ಶ್ರಾವಣ ತಪೋನುಷ್ಠಾನ ಹಾಗೂ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾನವೀಯತೆ ಎಂಬುದು ಆಕಾಶ ದಷ್ಟು ವಿಸ್ತಾರ. ಸಮುದ್ರದಷ್ಟೇ ವಿಶಾಲ. ಕೆಲವು ಹನಿಗಳು ಅಪವಿತ್ರಗೊಂಡರೆ ಸಮುದ್ರವೇ ಅಪವಿತ್ರವಾಗುವುದಿಲ್ಲ. ಸಂಕಷ್ಟ ಗಳನ್ನು ಎದುರಿಸಿದ ಮನುಷ್ಯ ಜೀವನದಲ್ಲಿ ಉನ್ನತಿ ಹೊಂದಲು ಸಾಧ್ಯ. ಗಾಢಾಂಧಕಾರದಲ್ಲಿ ಮುಳುಗಿದ ಮನುಷ್ಯನನ್ನು ಎಚ್ಚರಿಸಿ ಜಾಗೃತಿ ಉಂಟು ಮಾಡಿದ ಶ್ರೇಯಸ್ಸು ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ವೀರಶೈವ ಧರ್ಮ ಆದರ್ಶ ಮೌಲ್ಯಗಳನ್ನು ಉಳಿಸಿ ಬೆಳೆಸಿಕೊಂಡು ಬರುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದರು.ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಹುಟ್ಟು-ಸಾವು ನಮ್ಮ ಕೈಯಲ್ಲಿ ಇಲ್ಲ. ಆದರೆ ಬದುಕು ಮಾತ್ರ ನಮ್ಮ ಕೈಯಲ್ಲಿದೆ. ನದಿ ಸಮುದ್ರ ಗಳನ್ನು ಸೇತುವೆ ಮೂಲಕ ಗುಡ್ಡ ಬೆಟ್ಟಗಳನ್ನು ಸುರಂಗ ಮಾರ್ಗ ನಿರ್ಮಿಸಿ ದಾಟಬಹುದು. ಆದರೆ ಮನದ ಮಧ್ಯೆ ನಿರ್ಮಾಣಗೊಂಡ ಸ್ವಾರ್ಥದ ಗೋಡೆಗಳನ್ನು ದಾಟುವುದು ಸುಲಭದ ಕೆಲಸವಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾನವೀಯ ಸಂಬಂಧಗಳನ್ನು ಬೆಸೆಯುವ ಮಹತ್ಕಾರ್ಯ ನಿರ್ವಹಿಸಿದರೆಂದರು.
ಸಮಾರಂಭದಲ್ಲಿ ಆಲಮೇಲ ಚಂದ್ರಶೇಖರ ಶಿವಾಚಾರ್ಯರು, ಹನುಮಾಪುರ ಡಾ.ಸೋಮಶೇಖರ ಶಿವಾಚಾರ್ಯರು, ಅಹಿರಸಂಗದ ಮಲ್ಲಿಕಾರ್ಜುನ ಶಿವಾಚಾರ್ಯರು, ತೊಗರ್ಸಿ ಮಳೆಮಠದ ಮಹಾಂತ ಶಿವಾಚಾರ್ಯರು, ನೀಲೂರು ಹಿರೇಮಠದ ಶಿವಬಸವ ಶಿವಾಚಾರ್ಯರು ಮತ್ತು ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಅಫಜಲಪುರ ತಾಲೂಕಿನ ನೀಲೂರು ಗ್ರಾಮದ ಸಕಲ ಸದ್ಭಕ್ತರು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಗೌರವ ಸಮರ್ಪಿಸಿದರು.ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರು ವೇದಘೋಷ ಮಾಡಿ, ವಿಠಲಾಪುರ ಹಿರೇಮಠದ ಗಂಗಾಧರ ಸ್ವಾಮಿ ಪ್ರಾರ್ಥಿಸಿದರು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.
ಬೆಳಿಗ್ಗೆ ಲೋಕ ಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿದರು. ಶ್ರಾವಣ ಅಂಗವಾಗಿ ಕ್ಷೇತ್ರದ ಎಲ್ಲಾ ದೈವಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.೩೧ಬಿಹೆಚ್‌ಆರ್ ೪:ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಅಫಜಲಪುರ ತಾಲೂಕಿನ ನೀಲೂರು ಗ್ರಾಮದ ಸಕಲ ಸದ್ಭಕ್ತರು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಗೌರವ ಸಮರ್ಪಿಸಿದರು.