ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಸಂಘದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ
ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿವೆ ಎಂದು ತಲೆಕೆಡಿಸಿಕೊಳ್ಳಬಾರದು, ಕೃತಕ ಬುದ್ಧಿಮತ್ತೆಯ ಜಮಾನದಲ್ಲಿ ಅಂಕಕ್ಕಿಂತ ಜ್ಞಾನಕ್ಕೆ ಹೆಚ್ಚು ಬೆಲೆ ಇದೆ ಎಂಬುದನ್ನು ಅರಿಯಬೇಕೆಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಪಂಚಮಸಾಲಿ ಭವನದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಸಂಘ ಆಯೋಜಿಸಿದ್ದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಮಕ್ಕಳಿಗೆ ಜ್ಞಾನಾರ್ಜನೆಯ ಜತೆಗೆ ಧಾರ್ಮಿಕ ಸಂಸ್ಕಾರ ನೀಡಬೇಕಿದೆ ಎಂದರು.ವಿದ್ಯಾರ್ಥಿಗಳು ನಿರಂತರ ಪರಿಶ್ರಮಪಟ್ಟು ಅಭ್ಯಾಸ ಮಾಡಿದಾಗ, ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಿದೆ. ಮಕ್ಕಳು ತಂದೆ-ತಾಯಿ, ಗುರುಗಳನ್ನು ಆದರ್ಶವಾಗಿಸಿಕೊಂಡು ಜೀವನದಲ್ಲಿ ಯಶಸ್ಸು ಪಡೆಯಬೇಕೆಂದು ಹೇಳಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಹತ್ತು ಹಲವಾರು ಹೋರಾಟ ಮಾಡುವ ಜತೆಗೆ ಪಾದಯಾತ್ರೆ ಮಾಡಿದ್ದರೂ, ಎಲ್ಲ ಸರ್ಕಾರಗಳು ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿವೆ. ರಾಜ್ಯದ ಎಲ್ಲ ಹಳ್ಳಿಗಳಲ್ಲಿ ಪ್ರವಾಸ ಮಾಡಿ ಸಮಾಜವನ್ನು ಜಾಗೃತಗೊಳಿಸುತ್ತೇವೆ. ಮುಂಬರುವ ಚುನಾವಣೆಯಲ್ಲಿ ಸಮಾಜದ 25 ಜನ ಶಾಸಕರು ಆಯ್ಕೆಯಾಗುವಂತೆ ರಾಜಕೀಯ ಪ್ರಜ್ಞೆ ಮೂಡಿಸುತ್ತೇವೆಂದರು.
ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ, ಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ರಾಕೇಶಯ್ಯ ರಾಮಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಪಂಚಮಸಾಲಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರವಿ ಉತ್ತಂಗಿ, ಯುವ ಘಟಕದ ಅಧ್ಯಕ್ಷ ಕಿಚಡಿ ಕೊಟ್ರೇಶ, ಅಂಗಡಿ ವೀರಣ್ಣ ಮಾತನಾಡಿದರು. ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ವಿ.ಬಿ. ಜಗದೀಶ ಅಧ್ಯಕ್ಷತೆ ವಹಿಸಿದ್ದರು.
ಪಂಚಮಸಾಲಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡುವ ಜತೆಗೆ ಮಾರ್ಗದರ್ಶನ ಅಗತ್ಯವಿದೆ. ಸಮಾಜ ಸಂಘಟನೆಯ ವಿಚಾರದಲ್ಲಿ ಕೀಳು ರಾಜಕೀಯವನ್ನು ಬೆರೆಸಿ ಮಕ್ಕಳ ಭವಿಷ್ಯ ಹಾಳು ಮಾಡಬಾರದು ಎಂದು ಪಂಚಮಸಾಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದರು.