ಹೊಸಪೇಟೆ: ಜ್ಞಾನವೇ ವ್ಯಕ್ತಿಯ ನಿಜವಾದ ಆಸ್ತಿ. ಮಾಹಿತಿ ಜ್ಞಾನವಾಗಿ, ಜ್ಞಾನ ತಿಳಿವಳಿಕೆಯಾಗಿ ಪರಿವರ್ತನೆಯಾಗಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಸುಬ್ರಮಣ್ಯ ಎಚ್.ಎನ್. ಹೇಳಿದರು.ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಮಾಹಿತಿಹಕ್ಕು ಕಾಯ್ದೆ 2005 ರ ಜಾಗೃತಿ ಮತ್ತು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷವಾಗಿ ತನಿಖೆ ಹಾಗೂ ವಿಚಾರಣೆಯಲ್ಲಿರುವ ಮಾಹಿತಿಯನ್ನು ನೀಡುವ ಸಂದರ್ಭದಲ್ಲಿ ಎಚ್ಚರಿಕೆ ಅಗತ್ಯ ಎಂದರು.
ಹಂಪಿ ವಿವಿಯ ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಮಾತನಾಡಿ,ಇಂದಿನ ಕಾಲಘಟ್ಟದಲ್ಲಿ ಕಾನೂನುಗಳ ಅರಿವು ಪ್ರತಿಯೊಬ್ಬರಿಗೂ ಅತ್ಯಂತ ಅಗತ್ಯವಾಗಿದೆ. ಸರಳವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹಾಗೂ ಮುಂದೆ ಸಂಭವಿಸಬಹುದಾದ ದೊಡ್ಡ ಅನಾಹುತಗಳನ್ನು ತಪ್ಪಿಸಲು ಕಾನೂನಿನ ಕುರಿತು ಸಮಗ್ರ ತಿಳುವಳಿಕೆ ಇರಬೇಕು ಎಂದರು.ಸರ್ಕಾರಿ ನೌಕರರು ತಮ್ಮ ಸೇವಾ ಸವಲತ್ತುಗಳು, ಸೇವಾ ಭಡ್ತಿ ಹಾಗೂ ಆಡಳಿತಾತ್ಮಕ ನಿಯಮಗಳಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಅರಿವು ಹೊಂದಿರಬೇಕು. ಕೆಲವು ಸಂದರ್ಭಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಳಕೆ ಆಗುತ್ತಿದೆ. ಯಾವುದೇ ಸಂದರ್ಭದಲ್ಲಿ ಮಾಹಿತಿಯನ್ನು ಕೇಳಿದರೂ ಅದನ್ನು ನೀಡಲು ಸದಾ ಸಿದ್ಧರಾಗಿರಬೇಕು ಎಂದು ಸಲಹೆ ನೀಡಿದರು.
ಮಾಹಿತಿ ಕೇಂದ್ರದ ಮುಖ್ಯಸ್ಥೆ ಶಕುಂತಲಾ ಚೌಡನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಕುಲಸಚಿವ ಬಿ. ಗುರುಬಸಪ್ಪ ಸ್ವಾಗತಿಸಿದರು. ಆರ್.ವಿ.ದೇಶಪಾಂಡೆ ನಿರೂಪಿಸಿದರು. ಸಹಾಯಕ ಕುಲಸಚಿವ ಎಚ್. ಶ್ರೀನಿವಾಸ ವಂದಿಸಿದರು.