ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟದಿದ್ದಲ್ಲಿ ಕೊಡಗು ಬಂದ್ ಎಚ್ಚರಿಕೆ

KannadaprabhaNewsNetwork |  
Published : Aug 05, 2025, 11:49 PM IST
ಎಚ್ಚರಿಕೆ.  | Kannada Prabha

ಸಾರಾಂಶ

ಮಾನವ ಸರಪಳಿ ಮತ್ತು ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಹೆಚ್ಚಿನ ಸಂಖ್ಯೆ ರೈತರು ಪಾಲ್ಗೊಂಡರು.

ಕನ್ನಡಪ್ರಬ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು, ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಕಾಡು ಪ್ರಾಣಿಗಳ ಹಾವಳಿಯನ್ನ ಶಾಶ್ವತವಾಗಿ ತಡೆಗಟ್ಟದಿದ್ದಲ್ಲಿ ಕೊಡಗು ಬಂದ್ ಗೆ ಕರೆ ನೀಡುವ ಮೂಲಕ ಬೃಹತ್ ಹೋರಾಟ ಮಾಡಬೇಕಾಗುತ್ತದೆ ಎಂದು ಕೊಡಗು ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಎಚ್ಚರಿಸಿದರು.

ಮಾನವ ಹಾಗೂ ವನ್ಯಜೀವಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ತಿತಿಮತಿಯಲ್ಲಿ ರೈತ ಸಂಘದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಮಾನವ ಸರಪಳಿ ಹಾಗೂ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ರೈತರು ಕಾರ್ಮಿಕರು ಪಾಲ್ಗೊಂಡಿದ್ದರು.

ನಂತರ ಅರಣ್ಯ ಭವನದ ಆವರಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡು ಕಾಡು ಪ್ರಾಣಿಗಳ ಹಾವಳಿಯನ್ನ ಶಾಶ್ವತವಾಗಿ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಶಾಲಾ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿ:

ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮಾತನಾಡಿ, ನಿರಂತರ ಕೃಷಿ ಫಸಲುಗಳನ್ನು ನಾಶ ಮಾಡುವುದರ ಮೂಲಕ ಕಾರ್ಮಿಕರು, ಬೆಳೆಗಾರರು, ಶಾಲಾ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅರಣ್ಯ ಇಲಾಖೆ ಯಾವುದೇ ಶಾಶ್ವತ ಯೋಜನೆಗಳನ್ನು ರೂಪಿಸದೆ ಕಾಟಾಚಾರಕ್ಕೆ ಅವೈಜ್ಞಾನಿಕ ಕಾಮಗಾರಿಗಳನ್ನು ಮಾಡುವುದರ ಮೂಲಕ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದು ಯೋಜನೆಯ ಹಣವನ್ನು ಅಧಿಕಾರಿಗಳು ಭ್ರಷ್ಟಾಚಾರದ ಮೂಲಕ ಕಬಳಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕಾಡು ಪ್ರಾಣಿಗಳ ಹಾವಳಿ ಮಿತಿಮೀರಲು ಕಾರಣವಾಗಿದೆ ಎಂದು ಆರೋಪಿಸಿ ಜಿಲ್ಲೆಯ ಜನರ ತಾಳ್ಮೆಯನ್ನು ಪರೀಕ್ಷೆ ಮಾಡದೆ ಕಾಡುಪ್ರಾಣಿಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟದಿದ್ದಲ್ಲಿ ಬೃಹತ್ ಹೋರಾಟದೊಂದಿಗೆ ಕೊಡಗು ಬಂದ್ ಗೆ ಕರೆ ನೀಡುವ ಮೂಲಕ ಜಿಲ್ಲೆಯ ಜನರನ್ನ ಒಗ್ಗೂಡಿಸಿ ಬೃಹತ್ ಪ್ರತಿಭಟನೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ರೈತರು ಕಾಡುಪ್ರಾಣಿಗಳ ಹಾವಳಿಯಿಂದ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನ ಸೆಳೆದರು.

ಕಾರ್ಮಿಕ ಸಂಘಟನೆಯ ಮುಖಂಡ ಪಿ ಆರ್ ಭರತ್ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಮಿತಿಮೀರಲು ಅರಣ್ಯ ಇಲಾಖೆ ಅಧಿಕಾರಿಗಳೇ ಕಾರಣ

ವರ್ಷವಿಡೀ ಕಷ್ಟಪಟ್ಟು ಬೆಳೆದ ಕೃಷಿ ಫಸಲುಗಳು ಕಾಡು ಪ್ರಾಣಿಗಳ ಪಾಲಾಗುತ್ತಿದ್ದು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಹೊಟ್ಟೆಪಾಡಿನ ಜೀವನಕ್ಕಾಗಿ ಕೆಲಸಕ್ಕೆ ತೆರಳುವ ಕಾರ್ಮಿಕರು ಕಾಡು ಪ್ರಾಣಿಗಳ ಹಾವಳಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ

ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರು ರಸ್ತೆಯಲ್ಲಿ ನಡೆದಾಡಲು ಸಾಧ್ಯವಾಗದಂತಹ ಸ್ಥಿತಿ ಎದುರಾಗಿದ್ದರು ಅರಣ್ಯ ಇಲಾಖೆ ಹಾಗೂ ಸರ್ಕಾರಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅವೈಜ್ಞಾನಿಕ ಯೋಜನೆಗಳಿಂದ ಪ್ರಾಣಿಗಳು ನಿರಂತರ ಕಾಡಿನಿಂದ ನಾಡಿನತ್ತ ಬರುತ್ತಿದ್ದು ಮನುಷ್ಯ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಅರಣ್ಯ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಅಧಿಕಾರಿಗಳು ದುಡ್ಡು ಮಾಡುವ ದಂದೆಯಲ್ಲಿ ತೊಡಗಿಸಿಕೊಂಡಿದ್ದಾರೆ

ಕಾಡುಪ್ರಾಣಿಗಳ ಹಾವಳಿಯನ್ನ ಶಾಶ್ವತವಾಗಿ ತಡೆಗಟ್ಟದಿದ್ದಲ್ಲಿ ಕೊಡಗು ಜಿಲ್ಲೆಯಲ್ಲಿ ಬೃಹತ್ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈಲ್ವೆ ಬ್ಯಾರಿಕೇಡ್‌ ಅಳವಡಿಕೆ:

ಕೊಡಗು ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ಮಾತನಾಡಿ ಒಂದು ತಿಂಗಳ ಹಿಂದೆ ಕೊಡಗು ಜಿಲ್ಲೆಗೆ ಆಗಮಿಸಿದ್ದು ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗಿದ್ದು ಕಾಡುಪ್ರಾಣಿಗಳ ಹಾವಳಿ ಹಾಗೂ ಇಲಾಖೆಗೆ ಸಂಬಂಧಪಟ್ಟ ಮಾಹಿತಿಗಳನ್ನು ಪಡೆದುಕೊಂಡಿದ್ದು ಕಾಡು ಪ್ರಾಣಿಗಳ ಹಾವಳಿ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಯೋಜನೆಗಳನ್ನು ರೂಪಿಸಲಾಗಿದೆ. 1. 90 ಸಾವಿರ ಹೆಕ್ಟರ್ ಅರಣ್ಯ ವ್ಯಾಪ್ತಿ ಇದ್ದು ಸುತ್ತ 900 ಕಿಲೋಮೀಟರ್ ವಿಸ್ತೀರ್ಣ ಇದೆ. ನಾಗರಹೊಳೆ ವ್ಯಾಪ್ತಿ ಸೇರದಂತೆ ಸುಮಾರು 421 ಕಿಲೋ ಮೀಟರ್ ಈಪಿಟಿ ಮಾಡಲಾಗಿದೆ. ಇದರಲ್ಲಿ 433ಕಿ. ಮಿ. ಸೋಲಾರ್ ಬೇಲಿ ಮಾಡಲಾಗಿದೆ, ಇದರೊಂದಿಗೆ 141 ಕಿಲೋಮೀಟರ್ ರೈಲ್ವೆ ಬ್ಯಾರಿಕೇಡ್‌ ಅಳವಡಿಸಲಾಗಿದೆ.

ನಾಗರಹೊಳೆ ವ್ಯಾಪ್ತಿಯಲ್ಲಿ 105 ಕಿ.ಮೀ. ಬ್ಯಾರಿಕೇಡ್ ಅಳವಡಿಸಲಾಗಿದೆ. ಬಾಕಿ ಉಳಿದಿರುವ ಕಾರ್ಯ ಯೋಜನೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು ಸೂಕ್ತ ವರದಿ ನೀಡುವಂತೆ ಸೂಚಿಸಲಾಗಿದೆ.

ಇದರೊಂದಿಗೆ ರೇಡಿಯೋ ಕಾಲರ್ ಸೇರಿದಂತೆ ವಿನೂತನ ತಂತ್ರಜ್ಞಾನದ ಎಐ ಕ್ಯಾಮೆರಾ ಗಳನ್ನ ಅಳವಡಿಸಿ ಕಾಡು ಪ್ರಾಣಿಗಳ ಹಾವಳಿ ಬಗ್ಗೆ ನಿಗಾ ವಹಿಸಲಾಗಿದ್ದು ಕಾಲಕಾಲಕ್ಕೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ.

ರೈತ ಸಂಘದವರು ಸಭೆ ನಡೆಸಿ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಶಾಶ್ವತ ಯೋಜನೆಗಳನ್ನು ರೂಪಿಸಲು ಲಿಖಿತ ಮನವಿ ನೀಡಿದ್ದು

ವೈಜ್ಞಾನಿಕ ಯೋಜನೆಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.

ವನಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಮಾತನಾಡಿ ಶಾಶ್ವತ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಸಕ ಪೊನ್ನಣ್ಣನವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರೊಂದಿಗೆ ಮಾತುಕತೆ ನಡೆಸಿ ಕೊಡಗು ಜಿಲ್ಲೆಯ ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈಗಾಗಲೇ ಸರ್ಕಾರ ಆನೆಗಳ ಪುನರ್ವಸತಿಗಾಗಿ 2000 ಎಕರೆ ಭೂಮಿಯಲ್ಲಿ ಕಾರ್ಯ ಯೋಜನೆ ರೂಪಿಸುತ್ತಿದ್ದು ಹಂತಹಂತವಾಗಿ ಬಗ್ಗೆ ಹರಿಯಲಿದೆ ಎಂದು ಹೇಳಿದ ಸಂದರ್ಭ ಆಕ್ರೋಶಗೊಂಡ ರೈತರು ಇನ್ನು ಎಷ್ಟು ವರ್ಷ ಕಾಯಬೇಕು. ಇನ್ನು ಎಷ್ಟು ಜನ ಬಲಿಯಾಗಬೇಕು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕೊಡಗಿನ ಜನರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಂಕೇತ್ ಪೂವಯ್ಯ ಅವರನ್ನೇ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಗಂಭೀರ ಚರ್ಚೆ:

ಮಳೆಯ ನಡುವೆಯೂ ಮೂರು ಗಂಟೆ ಕಾಲ ನಡೆದ ಸಭೆಯಲ್ಲಿ ಕಾಡು ಪ್ರಾಣಿಗಳ ಹಾವಳಿಯ ಬಗ್ಗೆ ಸುದೀರ್ಘ ಗಂಭೀರ ಚರ್ಚೆ ನಡೆಯಿತು.

ಇದೇ ಸಂದರ್ಭ ಹಲವು ಬೇಡಿಕೆಗಳನ್ನು ಮುಂದಿಟ್ಟು ಅರಣ್ಯ ಇಲಾಖೆ ಹಾಗು ಸರ್ಕಾರಕ್ಕೆ ತಲುಪಿಸಲು ಮನವಿ ಪತ್ರವನ್ನು ನೀಡಲಾಯಿತು

ಈ ಸಂದರ್ಭ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿ ಸೀಮಾ, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ವಿರಾಜಪೇಟೆ ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ಕೊಡಗು ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಪ್ರಧಾನ ಸಂಚಾಲಕ ಪುಚ್ಚಿಮಾಡ ಸುಭಾಸ್ ಸುಬ್ಬಯ್ಯ, ಸಹ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ,

ಜಿಲ್ಲಾ ಖಜಾಂಚಿ ಇಟ್ಟೀರ ಸಭಿತ ಭೀಮಯ್ಯ, ವಿರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿ ಕುಮಾರ್, ಸೋಮವಾರಪೇಟೆ ಹೂವಯ್ಯ,ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಅಲೆಮಾಡ ಮಂಜು ಸಂಪತ್ ಸೇರಿದಂತೆ ಕಾರ್ಮಿಕ ಸಂಘಟನೆ ಪ್ರಮುಖರು ಸೇರಿದಂತೆ ಬೆಳೆಗಾರರು,ವಿದ್ಯಾರ್ಥಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ