ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕಾಂಗ್ರೆಸ್ ಪಕ್ಷ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಎಸ್.ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ ಅವರು, ಪರಿಶಿಷ್ಟರ ಭಾವನೆಗೆ ವಿರುದ್ಧವಾದ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಅವರನ್ನು ಸಂಸತ್ ಸ್ಥಾನದಿಂದ ತಕ್ಷಣ ವಜಾಗೊಳಸಬೇಕೆಂದು ಒತ್ತಾಯಿಸಿದರು.ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿದ್ದುಕೊಂಡು ದೇಶದ ಬಗ್ಗೆ ಗೌರವಯುತವಾಗಿ ನಡೆದುಕೊಳ್ಳದೆ ವಿದೇಶದಲ್ಲಿ ಅಗೌರವದ ಮಾತುಗಳನ್ನಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆದಿವಾಸಿ, ಹಿಂದುಳಿದ ವರ್ಗಗಳಿಗೆ ಸೀಮಿತವಾಗಿರುವ ಮೀಸಲಾತಿಯನ್ನು ತೆಗೆದು ಹಾಕುವುದಾಗಿ ಅಮೆರಿಕಾದಲ್ಲಿ ಹೇಳಿಕೆ ನೀಡಿದ್ದು, ಇದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದರು.
ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯ ಸ್ಥಾನವನ್ನು ರದ್ದುಪಡಿಸುವಂತೆ ಒತ್ತಾಯಿಸಿದ ಮನವಿ ಪತ್ರವನ್ನು ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ಲೋಕಸಭೆಯ ಸ್ಪೀಕರ್‌ಗೆ ಸಲ್ಲಿಸಿದರು.
ಎಸ್.ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷೆ ಮಂಜುಳ ಕೆ.ಆರ್, ರಾಜ್ಯ ಸದಸ್ಯ ಪ್ರಭಾಕರ್ ಕೆ.ಆರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಎಸ್.ಟಿ ಮೋರ್ಚಾದ ವಿರಾಜಪೇಟೆ ಮಂಡಲ ಅಧ್ಯಕ್ಷ ಮುತ್ತುರಾಜ್, ಕಾರ್ಯಕಾರಿಣಿ ಸದಸ್ಯ ಅಪ್ಪಾಜಿ, ಎಸ್.ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ, ಮಡಿಕೇರಿ ನಗರಸಭೆಯ ಬಿಜೆಪಿ ಸದಸ್ಯರುಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.