ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆ

KannadaprabhaNewsNetwork |  
Published : Nov 14, 2025, 03:45 AM IST
ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷರು ಮಾತನಾಡುತ್ತಿರುವುದು | Kannada Prabha

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಬಗ್ಗೆ ಸುಳ್ಳು ಮಾಹಿತಿ ನೀಡುವುದರೊಂದಿಗೆ ಭಕ್ತಾದಿಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಹುನ್ನಾರ ನಡೆಸಿರುವ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ ಎಂದು ನಟರಾಜ ಬಾದಾಮಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ ಶ್ರೀ ಕ್ಷೇತ್ರ ಧರ್ಮಸ್ಥಳ ಬಗ್ಗೆ ಸುಳ್ಳು ಮಾಹಿತಿ ನೀಡುವುದರೊಂದಿಗೆ ಭಕ್ತಾದಿಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಹುನ್ನಾರ ನಡೆಸಿರುವ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ ನ ರಾಜ್ಯ ಸಂಘಟನಾ ಅಧ್ಯಕ್ಷರಾದ ನಟರಾಜ ಬಾದಾಮಿ ಆಗ್ರಹಿಸಿದ್ದಾರೆ. ಅವರು ಕುಶಾಲನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಬಗ್ಗೆ ಖಂಡನೆ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ನೇಮಕ ಮಾಡಿ ಸಮಗ್ರ ತನಿಖೆ ನಡೆದಿದೆ. ಮೇಲ್ನೋಟಕ್ಕೆ ಕೆಲವು ವ್ಯಕ್ತಿಗಳು ದುರುದ್ದೇಶದಿಂದ ಕ್ಷೇತ್ರದ ಮೇಲೆ ಅಪಚಾರ ಎಸಗುವ ಯತ್ನ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.ನಿಕಟ ಪೂರ್ವ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಪಿ ಅಭಿಮನ್ಯು ಕುಮಾರ್ ಮಾತನಾಡಿ ಹಲವು ವರ್ಷಗಳಿಂದ ಶ್ರೀ ಕ್ಷೇತ್ರದ ಮೇಲೆ ವಿನಾಕಾರಣ ಆರೋಪಗಳನ್ನು ಹೊರಿಸುವುದರೊಂದಿಗೆ ಧರ್ಮಾಧಿಕಾರಿಗಳ ಮೇಲೆ ನಿಂದನೆ ಮತ್ತು ಕ್ಷೇತ್ರದ ಭಕ್ತಾದಿಗಳ ಭಾವನೆಗಳಿಗೆ ಧಕ್ಕೆ ತಂದಿರುವುದು ಸರಿಯಲ್ಲ. ಈ ಸಂಬಂಧ ಸಂಬಂಧಿಸಿದ ಆರೋಪಿಗಳ ಮೇಲೆ ಪ್ರತಿ ಜಿಲ್ಲೆಗಳಲ್ಲಿ ದೂರು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಚಿಂತನೆ ಹರಿಸಬೇಕಾಗಿದೆ ಎಂದು ಹೇಳಿದರು. ವೇದಿಕೆಯ ಕೊಡಗು ಜಿಲ್ಲಾ ಅಧ್ಯಕ್ಷರಾದ ಎ ಟಿ ರಂಗಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿಕೆಗಳು ಮತ್ತು ಕೈಗೊಂಡ ನಿರ್ಣಯಗಳ ಅನುಷ್ಠಾನದ ಕುರಿತು ಚರ್ಚಿಸಲಾಯಿತು. 2025 26 ನೇ ಸಾಲಿನ ಸಮಗ್ರ ಕಾರ್ಯಕ್ರಮದ ತಾಲೂಕು ವರದಿಯನ್ನು ಯೋಜನಾಧಿಕಾರಿಗಳು ಮಂಡಿಸಿದರು. ವಾರ್ಷಿಕ ಕ್ರಿಯಾ ಯೋಜನೆಗಳ ಗುರಿ ಸಾಧನೆ ಬಗ್ಗೆ ಚರ್ಚೆ ನಡೆಯಿತು. ಪೋಷಕರ ತರಬೇತಿ ಕಾರ್ಯಾಗಾರ, ನವ ಜೀವನ ಸಮಿತಿಯ ಬಲವರ್ಧನೆ ಮತ್ತು ಹಲವು ವಿಚಾರಗಳ ಬಗ್ಗೆ ವೇದಿಕೆ ಸದಸ್ಯರು ಚರ್ಚಿಸಿದರು. ಇದೇ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಡಾ.ಅನನ್ಯ ಅವರು ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಧಾನಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು. ಎಂಟನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಅಂಗವಾಗಿ ಕೊಡಗು ಜಿಲ್ಲೆಯಲ್ಲಿ ಕೇಂದ್ರದ ಮೂಲಕ 9 ದಿನಗಳ ಕಾಲ ಮಾಹಿತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವೇದಿಕೆಯ ಸದಸ್ಯರು ಹಾಗೂ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಚಂದ್ರಮೋಹನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷರಾದ ಅರುಣ್ ಬಾನಂಗಡ, ಉಪಾಧ್ಯಕ್ಷರಾದ ವಿ ಡಿ ಪುಂಡರಿಕಾಕ್ಷ, ಖಜಾಂಚಿ ಶಾಂತ ಮಲ್ಲಪ್ಪ, ಕರಾವಳಿ ಜನಜಾಗೃತಿ ವೇದಿಕೆಯ ಸಂಯೋಜಕರಾದ ಗಣೇಶ್ ಆಚಾರ್ಯ, ವೇದಿಕೆ ಕಾರ್ಯದರ್ಶಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರಾದ ಲೀಲಾವತಿ ಮತ್ತು ಜನಜಾಗೃತಿ ಜಿಲ್ಲಾ ವ್ಯಾಪ್ತಿಯ ಮಡಿಕೇರಿ ವಿರಾಜಪೇಟೆ ಕುಶಾಲನಗರ ಸೋಮವಾರಪೇಟೆ ಪಿರಿಯಾಪಟ್ಟಣ ಮತ್ತು ಅರಕಲಗೂಡು ತಾಲೂಕುಗಳ ಸದಸ್ಯರು ಮತ್ತು ಯೋಜನಾಧಿಕಾರಿಗಳು ಇದ್ದರು.

PREV

Recommended Stories

ಸುಪ್ರೀಂನಲ್ಲಿ ರಾಜ್ಯಕ್ಕೆ ಮೇಕೆದಾಟು ವಿಜಯ - ಯೋಜನೆ ಪ್ರಶ್ನಿಸಿದ್ದ ತಮಿಳುನಾಡು ಅರ್ಜಿ ವಜಾ
ಹಾರನ್‌ ಮಾಡಿದ್ದಕ್ಕೆ ಸಿಟ್ಟಿಗೆದ್ದು ಬೈಕ್‌ಗೆ ಕಾರು ಗುದ್ದಿಸಿದವ ಸೆರೆ