ಕನ್ನಡಪ್ರಭ ವಾರ್ತೆ ಕುಶಾಲನಗರ
ಕೊಡಗು ವಿಶ್ವವಿದ್ಯಾಲಯ ಉಳಿಸಿ ಅಭಿವೃದ್ಧಿಗೊಳಿಸುವ ಸಂಬಂಧ ಸಂಪುಟದಲ್ಲಿ ಪ್ರಸ್ತಾಪ ಮಾಡುವುದರೊಂದಿಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ರಾವ್ ಹೇಳಿದರು.ಅವರು ಕುಶಾಲನಗರದಲ್ಲಿ ಕನ್ನಡ ಸ್ನೇಹ ಸಿರಿ ಬಳಗದ ಅವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಅಂಗವಾಗಿ ಕಳೆದ ಒಂದು ವರ್ಷದಿಂದ ಹಮ್ಮಿಕೊಂಡು ಬರಲಾದ ಕಾರ್ಯಕ್ರಮಗಳ ಪೈಕಿ 50ನೇ ಸಂಭ್ರಮಾಚರಣೆಯ ಕುಶಲ್ಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದಲ್ಲಿ ಕೆಲವು ವಿವಿಗಳ ನಿರ್ವಹಣೆ ಕೊರತೆ ಹಾಗೂ ಸ್ಥಳೀಯ ಜನರ ಇಚ್ಛಾಶಕ್ತಿ ಇಲ್ಲದ ಹಿನ್ನೆಲೆಯಲ್ಲಿ ವಿಲೀನಗೊಳಿಸುವ ಪ್ರಸ್ತಾವನೆ ಇರುವುದಾಗಿ ಹೇಳಿದ ಅವರು ಕೊಡಗು ಜಿಲ್ಲೆಗೆ ವಿಶೇಷ ಆದ್ಯತೆಯೊಂದಿಗೆ ವಿವಿ ರದ್ಧತಿ ಪ್ರಸ್ತಾವನೆ ಕೈಬಿಡುವಂತೆ ಮಾಡುವ ಭರವಸೆ ದಿನೇಶ್ ಗುಂಡೂರಾವ್ ವ್ಯಕ್ತಪಡಿಸಿದರುಅಂದಿನ ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲ್ ನಂತರ ತನ್ನ ತಂದೆಯವರು ಹಾಗೂ ಮುಖ್ಯಮಂತ್ರಿಗಳಾಗಿದ್ದ ಆರ್ ಗುಂಡುರಾಯರು ಕುಶಾಲನಗರದಲ್ಲಿ ಅನೇಕ ಅಭಿವೃದ್ಧಿ ಜನಪರ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುವ ಕಾಳಜಿ ವಹಿಸಿದ್ದರು ಎಂದು ಸ್ಮರಿಸಿದರು.
ಇದೀಗ ತನ್ನ ಕರ್ತವ್ಯ ತಾನು ಮಾಡುವುದಾಗಿ ಭರವಸೆ ನೀಡಿ ಕುಶಾಲನಗರ ತಾಲೂಕು ಆಸ್ಪತ್ರೆಗೆ 100 ಹಾಸಿಗೆಗಳ ಆಸ್ಪತ್ರೆಯ ಬೇಡಿಕೆ ಇದ್ದು ಅದನ್ನು ತಾನು ಈಡೇರಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.ಇದರಿಂದ ಕುಶಾಲನಗರ ಸೇರಿದಂತೆ ಅಕ್ಕಪಕ್ಕದ ತಾಲೂಕುಗಳ ಜನರಿಗೆ ಆರೋಗ್ಯ ಸೇವೆ ದೊರೆಯುತ್ತದೆ. ಈ ಸಂಬಂಧ ಈ ಬಜೆಟ್ ನಲ್ಲಿ ಇದನ್ನು ಸೇರ್ಪಡೆಗೊಳಿಸಿ ಅನುದಾನ ಮೀಸಲಿರಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಹೇಳಿದರು.
ಪೊನ್ನಂಪೇಟೆ ತಾಲೂಕಿಗೆ ಶೀಘ್ರದಲ್ಲಿ ನೂತನ ತಾಲೂಕು ಆಸ್ಪತ್ರೆ ನಿರ್ಮಾಣದ ಬಗ್ಗೆಯೂ ಅವರು ಭರವಸೆ ವ್ಯಕ್ತಪಡಿಸಿದರು.ಸರಕಾರದ ಅನೇಕ ಕಾರ್ಯ ಯೋಜನೆಗಳು ಇಲಾಖೆ ಮೂಲಕ ನಡೆಯುತ್ತಿದ್ದು ಕೊಡಗು ಜಿಲ್ಲೆಯ ಬಗ್ಗೆ ವಿಶೇಷ ಆಸಕ್ತಿ ವಹಿಸಲಾಗುವುದು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಎಂ ಪಿ ಅಪ್ಪಚ್ಚು ರಂಜನ್ ಕೂಡಿಗೆ ಕ್ರೀಡಾ ಶಾಲೆಗೆ ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರ ಹೆಸರನ್ನು ಇಡುವಂತೆ ಪ್ರಸ್ತಾಪಿಸಿದ ಮೇರೆಗೆ ಪ್ರತಿಕ್ರಿಯಿಸಿದ ಸಚಿವರು ಈ ಸಂಬಂಧ ಕ್ರಮಕ್ಕೆ ಮುಂದಾಗುವುದಾಗಿ ತಮ್ಮ ಅಭಿಪ್ರಾಯ ನೀಡಿದರು.ಇದೇ ಸಂದರ್ಭ ಮಾತನಾಡಿದ ಕೊಡಗು ಮೈಸೂರು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಿಂದಿನ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್ ಮತ್ತು ಆರ್ ಗುಂಡುರಾವ್ ಅವರು ಕೊಡಗು ಹಾಸನ ಮೈಸೂರು ಜಿಲ್ಲೆಗಳಿಗೆ ನೀಡಿದ ನೀರಾವರಿ ವ್ಯವಸ್ಥೆ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಕನ್ನಡಿಗರು ಸದಾ ಸ್ಮರಣೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.
ಕೊಡಗು ಪ್ರಗತಿಗಾಗಿ ಕೇಂದ್ರ ಸರ್ಕಾರದ ಮೂಲಕ ಯೋಜನೆಗಳನ್ನು ರೂಪಿಸಿದೆ ಬಜೆಟ್ ನಲ್ಲಿ ಪ್ರವಾಸೋದ್ಯಮಕ್ಕಾಗಿ ಹೆಚ್ಚಿನ ಒತ್ತು ನೀಡಲಾಗಿದೆ. ಜಿಲ್ಲೆಯ 50 ಸ್ಥಳಗಳನ್ನು ಗುರುತಿಸಿ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ಹೋಂ ಸ್ಟೇ ಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವುದು ಸೇರಿದಂತೆ ಕುಶಾಲನಗರದಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣ ಮತ್ತಿತರ ವಿಷಯಗಳು ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಪೂರಕ ಯೋಜನೆಗಳು ಬರಲಿವೆ ಎಂದರು.ಕೊಡಗು ವಿವಿ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಲೋಕಸಭಾ ಸದಸ್ಯರು ಅದನ್ನು ಉಳಿಸಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಶಾಸಕರು ಸಚಿವರು ಸರಕಾರದ ಮೂಲಕ ಪ್ರಯತ್ನ ನಡೆಸಬೇಕಾಗಿದೆ. ಜಿಲ್ಲೆಯಲ್ಲಿ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ ಪಂಗಡ ಬಡ ಮಕ್ಕಳಿಗೆ ಕೊಡಗು ವಿಶ್ವವಿದ್ಯಾಲಯ ಮೂಲಕ ಅನುಕೂಲವಾಗಲಿದೆ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಉನ್ನತ ಶಿಕ್ಷಣದ ಅಗತ್ಯತೆ ಇದೆ ಎಂದು ಅವರು ಹೇಳಿದರು. ಮಾಜಿ ಸಚಿವ ಅಪ್ಪಚ್ಚು ರಂಜನ್ ಮತ್ತು ತಾವು ಈ ಸಂಬಂಧ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಹೇಳಿದರು.
ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅವರು ಮಾತನಾಡಿ, ಕುಶಾಲನಗರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಯೋಜನೆ ಮೂಲಕ ಕೊಡಗು ಸೇರಿದಂತೆ ಮೂರು ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಹಾಗೂ ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಅಂದಿನ ಮುಖ್ಯಮಂತ್ರಿ ಆರ್ ಗುಂಡುರಾಯರ ಕೊಡುಗೆ ಅಪಾರವಾಗಿದೆ ಎಂದರು.ಈ ಯೋಜನೆಗಳಿಗೆ ಪೂರಕವಾದಂತೆ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಕಾಲುವೆ ಅಭಿವೃದ್ಧಿಗೆ ಸರ್ಕಾರದಿಂದ 150 ಕೋಟಿ ಹಣ ಬಿಡುಗಡೆಯಾಗಿದೆ. ಕಾಲುವೆ ಮತ್ತಿತರ ಕೆಲಸಗಳ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಕುಶಾಲನಗರದಲ್ಲಿ ಕಂದಾಯ ಭವನದ ನಿರ್ಮಾಣಕ್ಕೆ ಸರ್ಕಾರದಿಂದ ಎಂಟು ಕೋಟಿ ರು. ನಿಗದಿಯಾಗಿದೆ. ಕುಶಾಲನಗರ ಬಸವನಹಳ್ಳಿ ಬಳಿ ರಸ್ತೆ ಸಾರಿಗೆ ಡಿಪೋ ಕಾಮಗಾರಿ ಅಭಿವೃದ್ಧಿ ಪಥದಲ್ಲಿದೆ.
ಕಲಾಭವನ ಒಳಚರಂಡಿ ವ್ಯವಸ್ಥೆ ಮತ್ತು ಕುಶಾಲ ನಗರ ಪಟ್ಟಣಕ್ಕೆ ನಿರಂತರ ನೀರು ಒದಗಿಸುವ ಯೋಜನೆಗೆ ಈಗಾಗಲೇ 45 ಕೋಟಿ ರು. ಗಳ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ಒದಗಿಸಿದರು.ಮಾಜಿ ಸಚಿವರಾದ ಅಪ್ಪಚ್ಚು ರಂಜನ್ ಅವರು ಮಾತನಾಡಿ, ಹಿರಿಯರ ಸ್ಮರಣೆ ಮಾಡುವುದು ಉತ್ತಮ ಬೆಳವಣಿಗೆ ಎಂದರಲ್ಲದೆ ಆ ಗುಂಡೂರಾಯರು ಹಲವು ಅಭಿವೃದ್ಧಿ ಕೆಲಸ ಮಾಡಿದ್ದು ಪ್ರಸಕ್ತ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ ಕೈಗಾರಿಕಾ ಬಡಾವಣೆ ಕ್ರೀಡಾಶಾಲೆ ಮತ್ತಿತರ ಜನಪರ ಕೆಲಸಗಳು ಇಂದಿಗೂ ಜನರ ಸ್ಮರಣೆಯಲ್ಲಿದೆ ಎಂದರು. ವೀರೇಂದ್ರ ಪಾಟೀಲ್ ಅವರ ಮೂಲಕ ರೈತರಿಗೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕೊಡಗು ವಿವಿಯನ್ನು ಎಲ್ಲರ ಪ್ರಭಾವ ಬಳಸಿ ಉಳಿಸುವ ಅಗತ್ಯತೆ ಇದೆ ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಪುತ್ರ ಹಾಗೂ ಮಾಜಿ ಶಾಸಕರಾದ ಕೈಲಾಸ್ನಾಥ್ ವೀರೇಂದ್ರ ಪಾಟೀಲ್ ಅವರು ಮಾತನಾಡಿದರು.
ಕನ್ನಡ ಸಿರಿ ಸ್ನೇಹ ಬಳಗದ ಜಿಲ್ಲಾ ಅಧ್ಯಕ್ಷ ಬಿ ಎಸ್ ಲೋಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಅಂಗವಾಗಿ ಕಳೆದ ಒಂದು ವರ್ಷದಿಂದ ಹಮ್ಮಿಕೊಂಡ ಕಾರ್ಯಕ್ರಮಗಳು ಹಾಗೂ ಪ್ರಸ್ತುತ 50ನೇ ಕಾರ್ಯಕ್ರಮದ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.ಊರಿನ ಪ್ರಗತಿಯ ಸರದಾರ ಮಾಜಿ ಮುಖ್ಯಮಂತ್ರಿ ದಿ. ಆರ್ ಗುಂಡುರಾವ್ ಅವರ ನುಡಿ ನಮನ ಹಾಗೂ ರೈತರ ಜೀವನಾಡಿ ಹಾರಂಗಿ ಜಲಾಶಯದ ನಿರ್ಮಾತೃ ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲ್ ಅವರ ಜನ್ಮ ಶತಮಾನೋತ್ಸವ ಸವಿನೆನಪಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬೆಳಗ್ಗೆ ಕಾವೇರಿ ಸೇತುವೆಯ ಬಳಿ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ತಹಸೀಲ್ದಾರ್ ಕಿರಣ್ ಜಿ ಗೌರಯ್ಯ, ಡಿ ವೈ ಎಸ್ ಪಿ ಗಂಗಾಧರಪ್ಪ ಮತ್ತಿತರ ಗಣ್ಯರು ಮೆರವಣಿಗೆಗೆ ಚಾಲನೆ ನೀಡಿದರು.ಕಳಸ ಹೊತ್ತ ಮಹಿಳೆಯರೊಂದಿಗೆ ಮೆರವಣಿಗೆ ಸಭಾಂಗಣಕ್ಕೆ ತಲುಪಿತು.
ಕಾರ್ಯಕ್ರಮದಲ್ಲಿ ನಾಡಿಗಾಗಿ ಸೇವೆ ಸಲ್ಲಿಸಿದ ಗಣ್ಯರ ಹೆಸರಿನಲ್ಲಿ ನಿರ್ಮಾಣವಾಗಿದ್ದ ಮೈಲಾರ ಶೆಟ್ಟಿ ದ್ವಾರವನ್ನು ಉದ್ಯಮಿ ನಾಗೇಂದ್ರ ಪ್ರಸಾದ್ ವರದರಾಜ ಶೆಟ್ಟಿ ಮುಖ್ಯದ್ವಾರವನ್ನು ಉದ್ಯಮಿ ಎಸ್ ಕೆ ಸತೀಶ್ ಉದ್ಘಾಟಿಸಿದರು.ಕಾರ್ಯಕ್ರಮದ ಹೊರ ಭಾಗದಲ್ಲಿ ತೆರೆಯಲಾದ ಪುಸ್ತಕ ಮತ್ತು ಕೃಷಿ ಉಪಕರಣಗಳ ಮಳಿಗೆಯನ್ನು ನಿವೃತ್ತ ಶಿಕ್ಷಕ ನಜೀರ್ ಅಹ್ಮದ್ ಉದ್ಘಾಟಿಸಿದರು.
ಸಮಾರಂಭದಲ್ಲಿ ನಾಡಿಗೆ ಸೇವೆ ಸಲ್ಲಿಸಿದ ಗಣ್ಯರಿಗೆ ಕುಶಲ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಚಿವರಾದ ದಿನೇಶ್ ಗುಂಡೂರಾವ್, ಹಿರಿಯರಾದ ವಿ ಎನ್ ವಸಂತಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ ಪಿ ಶಶಿಧರ್ ಮಾಜಿ ಶಾಸಕ ಕೈಲಾಸ್ ನಾಥ್ ವೀರೇಂದ್ರ ಪಾಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ ಪಿ ಚಂದ್ರಕಲಾ, ವಿ ಎಸ್ ಎಸ್ ಎನ್ ಅಧ್ಯಕ್ಷ ಟಿ ಆರ್ ಶರಣ ಕುಮಾರ್ ಉದ್ಯಮಿ ಎಂ ಕೆ ದಿನೇಶ್ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಸುವರ್ಣ ಸಂಭ್ರಮ ಕವಿಗೋಷ್ಠಿ ನಡೆಯಿತು.ಈ ಸಂದರ್ಭ ಕನ್ನಡ ಸಿರಿ ಸ್ನೇಹ ಬಳಗದ ಪ್ರಮುಖರಾದ ಎಂಡಿ ರಂಗಸ್ವಾಮಿ, ಕೆ ಕೆ ನಾಗರಾಜ ಶೆಟ್ಟಿ ಉ.ರ ನಾಗೇಶ್ ಶಿಕ್ಷಕರಾದ ಗಾಯತ್ರಿ, ಮಾಲಾಮೂರ್ತಿ ಮತ್ತಿತರರು ಇದ್ದರು.
ಶಕ್ತಿಪತ್ರಿಕೆ ಉಪಸಂಪಾದಕ ಕುಡೆಕಲ್ ಸಂತೋಷ್ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯನ್ನು ಪ್ರಾಂಶುಪಾಲರಾದ ಪಿ ಎಸ್ ಜಾನ್ ಕವಿತೆ ಹಾಡುವ ಮೂಲಕ ಚಾಲನೆ ನೀಡಿದರು. ಜಿಲ್ಲೆ ಸೇರಿದಂತೆ ನೆರೆ ಜಿಲ್ಲೆಯ ಸುಮಾರು 35 ಕ್ಕೂ ಅಧಿಕ ಕವಿ ಕವಯತ್ರಿಯರು ಈ ಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮ ಕವನ ವಾಚಿಸಿದರು.