ಕನ್ನಡಪ್ರಭ ವಾರ್ತೆ ಚೇಳೂರು ತಾಲ್ಲೂಕಿನ ಪಾಪಾಗ್ನಿ ನದಿ ದಡದಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಕೋದಂಡರಾಮಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವವು ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.ನೂತನ ರಥದ ಆಕರ್ಷಣೆ:
ಬ್ರಹ್ಮ ರಥೋತ್ಸವಕ್ಕೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ತಹಸೀಲ್ದಾರ್ ಶ್ವೇತಾ ಬಿ.ಕೆ. ಹಾಗೂ ಪಿಡಿಒ ಗೌಸ್ ಪೀರ್ ಅವರು ಜಂಟಿಯಾಗಿ ಚಾಲನೆ ನೀಡಿ, ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಚೋಳರ ಕಾಲದ ಈ ಪುರಾತನ ದೇವಾಲಯದ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ರಥೋತ್ಸವದ ಪ್ರಮುಖ ಆಕರ್ಷಣೆಯಾಗಿ ಕಲಾತಂಡಗಳಿಂದ ನಡೆದ ವೀರಗಾಸೆ ಕುಣಿತ ನೋಡುಗರ ಗಮನ ಸೆಳೆಯಿತು. ಇದರೊಂದಿಗೆ ವೀರಗಾಸೆ ಹಾಗೂ ವಿವಿಧ ಕಲಾತಂಡಗಳ ಪ್ರದರ್ಶನ ಮೆರುಗು ನೀಡಿದವು. ನೆರೆಯ ಆಂಧ್ರಪ್ರದೇಶ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ರಥಕ್ಕೆ ಹಣ್ಣು-ಜವನ ಅರ್ಪಿಸಿ ಪುನೀತರಾದರು.ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ಪಿ.ವಿ. ರಾಮಾಂಜನೆಯ್ಯರೆಡ್ಡಿ, ಕೆಡಿಎಸ್ಎಸ್ ಜಿಲ್ಲಾ ಸಂಚಾಲಕ ಕಡ್ಡಿಲು ವೆಂಕಟರವಣಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಕೆ. ಆನಂದ್, ಕರವೇ ಅಧ್ಯಕ್ಷ ಕೆ.ಜಿ. ವೆಂಕಟರವಣಪ್ಪ ಭಾಗವಹಿಸಿದ್ದರು. ಅಲ್ಲದೆ, ಕಂದಾಯ ನಿರೀಕ್ಷಕ (ಆರ್.ಐ) ಈಶ್ವರ್, ಪಿಡಿಒ ಕೆ. ವೆಂಕಟಾಚಲಪತಿ, ಪ್ರಮುಖರಾದ ಸುರೇಂದ್ರ, ಜಾಲರಿ,ಸಾವಕಾರ ಶ್ರೀನಿವಾಸ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು. ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತ್ ಕಲ್ಪಿಸಿತ್ತು. ಫೆ. 6ರ ತನಕ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಉತ್ಸವಗಳು ಮುಂದುವರಿಯಲಿವೆ.