ಕೊಡವ ಬಲ್ಯ ನಮ್ಮೆ ಸಂಪನ್ನ

KannadaprabhaNewsNetwork | Published : Apr 1, 2025 12:51 AM
ಚಿತ್ರ :  31ಎಂಡಿಕೆ3 : ಕೊಡವ ಬಲ್ಯ ನಮ್ಮೆಯಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು.  | Kannada Prabha

ಕೊಡವ ಬಲ್ಯ ನಮ್ಮೆಯ ಎರಡನೇ ದಿನ ವಿಚಾರಗೋಷ್ಠಿ, ಅಕಾಡೆಮಿ ಪ್ರಶಸ್ತಿ, ಪುಸ್ತಕ ಪ್ರಶಸ್ತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಅಮ್ಮತ್ತಿ ಕೊಡವ ಸಮಾಜದಲ್ಲಿ ಕೊಡವ ಬಲ್ಯ ನಮ್ಮೆಯ ಎರಡನೇ ದಿನ ವಿಚಾರಗೋಷ್ಠಿ, ಅಕಾಡೆಮಿ ಗೌರವ ಪ್ರಶಸ್ತಿ, ಪುಸ್ತಕ ಪ್ರಶಸ್ತಿ ಕಾರ್ಯಕ್ರಮ ನಡೆಯಿತು.

‘ಕೊಡವ ಉಡುಪುರ ಭೀರ್ಯ’ ವಿಷಯವಾಗಿ ಕವಯಿತ್ರಿ ಮೂವೆರ ರೇಖ ಪ್ರಕಾಶ್ ವಿಷಯ ಮಂಡಿಸಿ ಕೊಡವ ಪುರುಷರ ಹಾಗೂ ಸ್ತ್ರೀಯರ ಉಡುಗೆ-ತೊಡುಗೆಗಳ ವಿಶೇಷತೆ, ವಿನ್ಯಾಸ, ಹಿರಿಮೆಗಳ ಮೇಲೆ ಬೆಳಕು ಚೆಲ್ಲಿದರು. ಇಂದಿನ ಬಾಲಕರು ದಾಡಿ ಬಿಡುತ್ತಿರುವ ಶೈಲಿಗೆ ವಿಷಾದ ವ್ಯಕ್ತಿಪಡಿಸಿದ ಅವರು ಕೊಡವರ ಪದ್ಧತಿಯಂತೆ ದಾಡಿ ಬಿಡುವುದರ ಬಗ್ಗೆ ತಿಳಿ ಹೇಳಿದರು. ಬಾಲಕಿಯರು, ಸ್ತ್ರೀಯರು ಕೊಡವ ಸೀರೆಯ ಉಡುಗೆಗೆ ಆದ್ಯತೆ ಕೊಡುವಂತೆ ಹೇಳಿದರು.

ವಿಚಾರ ಮಂಡನೆಯನ್ನು ಸಾಹಿತಿ-ಸಂಶೋಧಕ ಮೂಕೊಂಡ ನಿತಿನ್ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ಸಾಹಿತಿ ಬಾಚಮಡ ಡಿ. ಗಣಪತಿ ಜ್ಞಾಪಕಾರ್ಥ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪ ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಮಂಡೇಪಂಡ ಸುಗುಣ ಮುತ್ತಣ್ಣ, ಮಾದಾಪುರ ಕೊಡವ ಸಮಾಜದ ಅಧ್ಯಕ್ಷರಾದ ಮಂಡೇಪಂಡ ಮನು ಮೇದಪ್ಪ ಆಗಮಿಸಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಮುಖ್ಯ ವೇದಿಕೆಯಲ್ಲಿ ಒಟ್ಟು ಆರು ಜನರಿಗೆ ಗೌರವ ಪ್ರಶಸ್ತಿ ಹಾಗೂ ನಾಲ್ಕು ಜನರಿಗೆ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೊಡವ ಬಲ್ಯ ನಮ್ಮೆಯ ಭವ್ಯ ವೇದಿಕೆಯಲ್ಲಿ ಸಾಧಕರುಗಳಾದ, ಕೊಡವ ಸಂಸ್ಕೃತಿ, ಪಾಟ್-ಪಡಿಪು ಕ್ಷೇತ್ರದ ಸಾಧಕರಾದ ಕೋಡಿಮಣಿಯಂಡ ತಮ್ಮಣಿ ಬೋಪಯ್ಯ, ಕೊಡವ ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದ ಸಾಧಕರಾದ ಕಾಟಿಮಡ ಜಿಮ್ಮಿ ಅಣ್ಣಯ್ಯ, ಕೊಡವ ಜಾನಪದ ಕ್ಷೇತ್ರದಲ್ಲಿ ಚೇನಂಡ ರಘು ಉತ್ತಪ್ಪ, ದಾನ-ಧರ್ಮ ಹಾಗೂ ಸಮಾಜ ಸೇವೆಯಲ್ಲಿ ಕೈಬುಲಿರ ಪಾರ್ವತಿ ಬೋಪಯ್ಯ, ಕೊಡವ ಆಟ್-ಪಾಟ್ ಸಂಸ್ಕೃತಿ ಕ್ಷೇತ್ರದಲ್ಲಿ ಚೀಯಕಪೂವಂಡ ಬಿ. ದೇವಯ್ಯ, ಕೊರೋನ ಹಾಗೂ ಭೂಕುಸಿತದಂತಹ ಕಷ್ಟದ ಕಾಲದಲ್ಲಿ ಜನಸೇವೆಗೈದು ಬದುಕು ಕಟ್ಟಿದ ಕೊಡವ ಪರಿಶಿಷ್ಟ ವರ್ಗದ ಹೀರಕುಟ್ಟಡ ಟಸ್ಸಿ ಸದನ್ ಇವರುಗಳಿಗೆ ತಲಾ 50 ಸಾವಿರ ರು., ಶಾಲು, ಹಾರ, ಪ್ರಶಸ್ತಿ ಫಲಕ, ಹೂಗುಚ್ಚ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಪುಸ್ತಕ ಪ್ರಶಸ್ತಿ ಪ್ರದಾನ: ಕೊಡವ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ವರು ಸಾಹಿತಿಗಳಾದ ಮೂಪಾಜೆ ನಿಗಂಟು ಕರ್ತೃ ಮಚ್ಚಮಡ ಲಾಲ ಕುಟ್ಟಪ್ಪ, ಕೊಡವ ಸಂಸ್ಕೃತಿರ ಅಧ್ಯಯನ ನಡೆಸಿ ಬರೆದ ಪುಸ್ತಕ ಕರ್ತೃ ಐಚಂಡ ರಶ್ಮಿ ಮೇದಪ್ಪ, ನಾಡ ಕೊಡಗ್ ಕಾದಂಬರಿ ಕೊಟ್ಟ್ಕತ್ತಿರ ಪ್ರಕಾಶ್ ಕಾರ್ಯಪ್ಪ, ಅಗ್ಗೇನ ಕತೆಗೆ ಚೊಟ್ಟೆಯಂಡಮಡ ಲಲಿತ ಕಾರ್ಯಪ್ಪ ಇವರಿಗೆ ಈ ಸಂದರ್ಭ ತಲಾ 25 ಸಾವಿರ ರು., ಶಾಲು, ಹಾರ, ಪ್ರಶಸ್ತಿ ಫಲಕ, ಹೂಗುಚ್ಚ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಕೊಡಗು ಗ್ಯಾರೆಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಕೊಡವ ಭಾಷೆಯ ಬೆಳವಣಿಗೆಯೊಂದಿಗೆ ಸಂಸ್ಕೃತಿಯ ಬೆಳವಣಿಗೆಯ ನಿಟ್ಟಿನಲ್ಲಿ ಅಜ್ಜಿನಿಕಂಡ ಮಹೇಶ್ ನಾಚಯ್ಯ ಸಾರಥ್ಯದ ಕೊಡವ ಸಾಹಿತ್ಯ ಅಕಾಡೆಮಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಅಸಿಸ್ಟೆಂಟ್ ಕನ್‌ಸರ್ವೇಟರ್ ಆಫ್ ಫಾರೆಸ್ಟ್ ಐರಿರ ಎ. ಗೋಪಾಲ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ಮಾತನಾಡಿದರು.

ವೇದಿಕೆಯಲ್ಲಿ ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಕರವಟ್ಟಿರ ಟಿ. ಪೆಮ್ಮಯ್ಯ, ಮೈಸೂರು ಕೊಡವ ಸಮಾಜದ ಅಧ್ಯಕ್ಷರಾದ ಪೊಂಜಂಡ ಗಪ್ಪು ಗಣಪತಿ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರಾದ ಪಾಂಡಂಡ ಕೆ. ಬೋಪಣ್ಣ, ಅಖಿಲ ಅಮ್ಮ ಕೊಡವ ಸಮಾಜ ಅಧ್ಯಕ್ಷ ಬಾನಂಡ ಎನ್. ಪೃಥ್ಯು, ಅರಮನೆಪಾಲೆ ಸಮಾಜದ ಅರಮನೆಪಾಲೆರ ಕೆ.ಮಂದಣ್ಣ, ಜಾನಪದ ಕಲಾವಿದ ಕುಡಿಯರ ಕೆ. ಪೊನ್ನಪ್ಪ, ಮೇದ ಜನಾಂಗದಿಂದ ಜಾನಪದ ಕಲಾವಿದ ಮೇದರ ಜಿ. ಚಂದ್ರ, ಕಾಪಾಳ ಜನಾಂಗದ ಜಾನಪದ ಕಲಾವಿದ ಕಾಪಾಳಡ ತಮ್ಮಯ್ಯ ಪೂಣಚ್ಚ, ಅಕಾಡೆಮಿ ಸದಸ್ಯರಾದ ಪುತ್ತರಿರ ಪಪ್ಪು ತಿಮ್ಮಯ್ಯ, ಕಂಬೆಯಂಡ ಡೀನ ಬೋಜಣ್ಣ, ಮೊಳ್ಳೆಕುಟ್ಟಡ ದಿನು ಬೋಜಪ್ಪ, ಕೊಂಡಿಜಮ್ಮನ ಎಂ. ಬಾಲಕೃಷ್ಣ, ಪೊನ್ನಿರ ಯು ಗಗನ್, ಕುಡಿಯರ ಎಂ. ಕಾವೇರಪ್ಪ, ನಾಯಂದಿರ ಆರ್. ಶಿವಾಜಿ, ಚೆಪ್ಪುಡಿರ ಎಸ್. ಉತ್ತಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ಚೊಟ್ಟೆಯಂಡ ಸಂಜು ಕಾವೇರಪ್ಪ, ನಾಪಂಡ ಸಿ. ಗಣೇಶ, ರಿಜಿಸ್ಟ್ರಾರ್ ಚಿನ್ನಸ್ವಾಮಿ ಹಾಜರಿದ್ದರು.