24ರಿಂದ ಕೊಡೇಕಲ್ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Nov 05, 2026, 01:15 AM IST
ನ.24 ರಿಂದ ಆರಂಭವಾಗುವ ಕೊಡೇಕಲ್ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಆಮಂತ್ರಣದ ಭಿತ್ತಿಪತ್ರಿಕೆಗಳನ್ನು ಬಿಡುಗಡೆಗೊಳಿಸುತ್ತಿರುವ ಮಹಲಿನಮಠದ ವೃಷಭೇಂದ್ರ ಶ್ರೀಗಳು. ತಹಸೀಲ್ದಾರ ಎಂ.ಬಸವರಾಜ ಮತ್ತು ಗ್ರಾಮದ ಪ್ರಮುಖರು. | Kannada Prabha

ಸಾರಾಂಶ

ನ.24ರಿಂದ ಆರಂಭಗೊಂಡು 5 ದಿನಗಳ ಕಾಲ ಜರುಗುವ ಕಾಲಜ್ಞಾನಿಯ ಶ್ರೀ ಬಸವೇಶ್ವರರ ಜಾತ್ರಾಮಹೋತ್ಸದಲ್ಲಿ ಯಾವುದೇ ಕುಂದು ಕೊರತೆ ಬಾರದಂತೆ ಅಧಿಕಾರಿ ವರ್ಗ ಹಾಗೂ ಭಕ್ತರು ಲಕ್ಷ್ಯ ವಹಿಸುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಮಹಲಿನಮಠದ ಪೂಜ್ಯರಾದ ವೃಷಭೇಂದ್ರ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಕೊಡೇಕಲ್

ನ.24ರಿಂದ ಆರಂಭಗೊಂಡು 5 ದಿನಗಳ ಕಾಲ ಜರುಗುವ ಕಾಲಜ್ಞಾನಿಯ ಶ್ರೀ ಬಸವೇಶ್ವರರ ಜಾತ್ರಾಮಹೋತ್ಸದಲ್ಲಿ ಯಾವುದೇ ಕುಂದು ಕೊರತೆ ಬಾರದಂತೆ ಅಧಿಕಾರಿ ವರ್ಗ ಹಾಗೂ ಭಕ್ತರು ಲಕ್ಷ್ಯ ವಹಿಸುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಮಹಲಿನಮಠದ ಪೂಜ್ಯರಾದ ವೃಷಭೇಂದ್ರ ಶ್ರೀಗಳು ಹೇಳಿದರು.

ಕೊಡೇಕಲ್ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ರಾಜಾಂಗಣದಲ್ಲಿ ಜರುಗಿದ, ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಭಿತ್ತಿಪತ್ರಿಕೆಗಳನ್ನು ಅನಾವರಣಗೊಳಿಸಿ ಮಾತನಾಡಿದ ಶ್ರೀಗಳು, ಜನರಲ್ಲಿ ಶುದ್ಧ ಭಕ್ತಿ, ಧಾರ್ಮಿಕತೆ ಇರುವುದರಿಂದಾಗಿ ಜಾತ್ರೆಗಳಂತಹ ಕಾರ್ಯಗಳು ದೈವಭಕ್ತಿಯಿಂದ ವೈಭವದಿಂದ ಸಾಗುತ್ತ ಬರುತ್ತಿವೆ. ಅದರಂತೆ, ಭಾವೈಕ್ಯತೆಯ ಹರಿಕಾರ, ಕೊಡೇಕಲ್ ಬಸವಣ್ಣನವರ ಜಾತ್ರೆ ವರ್ಷದಲ್ಲಿ ಎರಡು ಬಾರಿ ಆಚರಣೆ ಮಾಡಲಾಗುತ್ತಿದ್ದು, ನ.24 ಮಂಗಳವಾರದಂದು ಬೆಳಗ್ಗೆ ನಗಾರಿ ಪೂಜೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರಕಲಿದೆ. ಅಂದೇ ರಾತ್ರಿ, ಕಳಸಾರೋಹಣ ನೆರವೇರುವುದು. ನ.25ರ ಬುಧವಾರ ಬೆಳಗ್ಗೆಯಿಂದ 6 ಗಂಟೆಯಿಂದ ಸಾಂಯಕಾಲ 6 ಗಂಟೆವರೆಗೆ ಬಸವೇಶ್ವರರ ಜೋಡು ಪಲ್ಲಕ್ಕಿ ಉತ್ಸವ ಜರುಗಲಿದೆ ಎಂದು ಹೇಳಿದರು.

ವರ್ಷದಲ್ಲಿ ಎರಡು ಬಾರಿ ಕಾಲಜ್ಞಾನಿಯ ಜೋಡುಪಲ್ಲಕ್ಕಿ ಉತ್ಸವ ಸೇವೆ ಮಾಡುವ ಭಾಗ್ಯ ಭಕ್ತರ ಪಾಲಿಗೆ ಅಮೃತ ಘಳಿಗೆಯಾಗಿದೆ ಎಂದು ಹೇಳಿದ ಶ್ರೀಗಳು, ಈ ಐದು ದಿನಗಳ ಜಾತ್ರೆಯಲ್ಲಿ ದೂರದಿಂದ ಆಗಮಿಸುವ ಭಕ್ತರಿಗೆ ದಾಸೋಹ ಸೇರಿದಂತೆ ಸಕಲ ಮೂಲಭೂತ ವ್ಯವಸ್ಥೆಗಳನ್ನು ಮಾಡಿ ಎಂದು ಹೇಳಿದರು.

ಹುಣಸಗಿ ತಹಸೀಲ್ದಾರರಾದ ಎಂ.ಬಸವರಾಜ ಮಾತನಾಡಿ, ಕಾಲಜ್ಞಾನಿ ಶ್ರೀ ಬಸವೇಶ್ವರರ ಜಾತ್ರೆಗೆ ಆಗಮಿಸುವ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಿಬ್ಬಂದಿಗಳ ಸಭೆ ನಡೆಸಲಾಗಿದೆ. ಗ್ರಾಮದ ಜಕಣಿ ಬಾವಿಯ ಹತ್ತಿರದ ಸ್ನಾನಗೃಹಗಳ ಸ್ವಚ್ಛತಾ ಕಾರ್ಯ, ಪ್ಯಾಟಿ ದೇವಸ್ಥಾನದ ಪಕ್ಕದಲ್ಲಿರುವ ಶೌಚಗೃಹಗಳ ಸ್ವಚ್ಛತೆ ಮಾಡುವಂತೆ ಸೂಚನೆ ನೀಡಲಾಗಿದೆ. ಉಳಿದಂತೆ, ಗ್ರಾಮದ ಎರಡು ದೇವಸ್ಥಾನಗಳಲ್ಲಿ ವಿದ್ಯುತ್ ದೀಪಾಂಲಕಾರ ಹಾಗೂ ಮೂಲಭೂತ ಸೌಕರ‍್ಯಗಳನ್ನು ಒದಗಿಸಲಾಗುತ್ತದೆ ಮತ್ತು ಗ್ರಾಮದಲ್ಲಿರುವ ಚರಂಡಿಗಳ ಸ್ವಚ್ಛತೆ ಮತ್ತು ಕುಡಿಯುವ ನೀರಿನ ಬಾವಿಗಳ ಸ್ವಚ್ಛತೆ ಹಾಗೂ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡುವಂತೆ ಗ್ರಾ.ಪಂ. ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಎಂ.ಬಸವರಾಜ. ಉಪ ತಹಸೀಲ್ದಾರ್‌ ಕಲ್ಲಪ್ಪ ಜಂಜಿಗಡ್ಡಿ, ಜಿಲ್ಲಾ ನೇಕಾರ ಒಕ್ಕೂಟದ ಜಿಲ್ಲಾಧ್ಯಕ್ಷ ವೀರಸಂಗಪ್ಪ ಹಾವೇರಿ, ರಂಗನಾಥ ದೊರಿ, ಕಂದಾಯ ನಿರೀಕ್ಷಕ ಶಾಂತಪ್ಪ, ಸಂಗಣ್ಣ ಮಹಲಿನಮಠ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ