ನಾಳೆ ಹಿಂದೂ ಸಮಾಜೋತ್ಸವಕ್ಕೆ ಕೋಲಾರ ಸಜ್ಜು, ಇಡೀ ನಗರ ಕೇಸರೀಮಯ, ರಾರಾಜಿಸುತ್ತಿರುವ ಬಂಟಿಂಗ್‌ಗಳು, ಫ್ಲೆಕ್ಸ್‌ಗಳು

KannadaprabhaNewsNetwork |  
Published : Jan 30, 2026, 01:15 AM IST
೨೯ಕೆಎಲ್‌ಆರ್-೧೧-೧ಕೋಲಾರದಲ್ಲಿ ಜ.೩೧ರ ಹಿಂದೂ ಸಮಾಜೋತ್ಸವದ ಹಿನ್ನಲೆಯಲ್ಲಿ ನಗರದಲ್ಲಿ ಕೇಸರಿ ಬಂಟಿಂಗ್‌ಗಳು, ಫ್ಲೆಕ್ಸ್‌ಗಳ ಮೂಲಕ ಇಡೀ ನಗರವನ್ನು ಕೇಸರಿಮಯವಾಗಿಸಿರುವ ಚಿತ್ರ. | Kannada Prabha

ಸಾರಾಂಶ

ಹಿಂದೂ ಸಮಾಜೋತ್ಸವ ಸಮಾವೇಶ ಇನ್ನೊಂದು ಧರ್ಮದ ವಿರುದ್ಧ ಸಮರ ಸಾರುವುದಕ್ಕೆ ಅಲ್ಲ, ನಮ್ಮಲ್ಲಿನ ಎಲ್ಲಾ ಜಾತಿಗಳನ್ನು ಒಗ್ಗೂಡಿಸಿಕೊಂಡು ಬಲಿಷ್ಠ ದೇಶ ಕಟ್ಟುವ ಕೆಲಸ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ನಗರದಲ್ಲಿ ಜ.31ರ ಶನಿವಾರ ನಡೆಯಲಿರುವ ಹಿಂದೂ ಸಮಾಜೋತ್ಸವಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿದ್ದು, ಬಂಟಿಂಗ್‌ಗಳು, ಫ್ಲೆಕ್ಸ್‌ಗಳಿಂದಾಗಿ ಇಡೀ ನಗರ ಕೇಸರಿಮಯವಾಗಿದೆ. ಹಿಂದೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ನಗರದಲ್ಲಿ ಗುರುವಾರ ಬೃಹತ್ ಬೈಕ್ ರ್‍ಯಾಲಿ ನಡೆಸಿ ಗಮನ ಸೆಳೆದರು.

ನಗರದ ಜೂನಿಯನ್ ಕಾಲೇಜು ಮೈದಾನದಿಂದ ಆರಂಭವಾದ ಬೈಕ್ ರ್‍ಯಾಲಿಯಲ್ಲಿ ೪ ಸಾವಿರಕ್ಕೂ ಹೆಚ್ಚು ಬೈಕ್ ಸವಾರರು ಪಾಲ್ಗೊಂಡಿದ್ದರು. ಮೆಕ್ಕೆ ವೃತ್ತ, ನಲ್ಲಗಂಮ್ಮ ದೇವಾಲಯ ವೃತ್ತ, ಕಾಳಮ್ಮದೇವಿ ರಸ್ತೆ, ಹೊಸ ಬಸ್ ನಿಲ್ದಾಣ, ಶಾರದ ಚಿತ್ರಮಂದಿರ, ದೊಡ್ಡಪೇಟೆ ರಸ್ತೆ, ಚಂಪಕ್ ವೃತ್ತ, ಎಂಜಿ ರಸ್ತೆ ಮೂಲಕ ಸಾಗಿ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೈಕ್‌ ರ್‍ಯಾಲಿ ಕೊನೆಗೊಂಡಿತು.

ಮೆರವಣಿಗೆಯ ಉದ್ದಕ್ಕೂ ಮುಖಂಡರು ಹಿಂದೂ ಸಮಾಜೋತ್ಸವದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಕೋರಿದರಲ್ಲದೇ ಹಿಂದೂ ಸಮಾಜ ಒಂದಾಗಿ ಮುನ್ನಡೆಯಲು ಘೋಷಣೆಗಳ ಮೂಲಕ ನಗರದಲ್ಲಿ ಅಂಗಡಿಗಳಿಗೆ, ಮನೆಮನೆಗೂ ತೆರಳಿ ಕರಪತ್ರ ವಿತರಿಸಿ ಆಹ್ವಾನಿಸಿದರು.

ನಗರದ ಮುಖ್ಯ ರಸ್ತೆಗಳಲ್ಲಿ ಸಮಾಜೋತ್ಸವದ ದ್ವಾರ, ಬಸ್ ನಿಲ್ದಾಣ, ಟೇಕಲ್ ರಸ್ತೆ, ಡೂಂ ಲೈಟ್ ವೃತ್ತ ಸೇರಿದಂತೆ ವಿವಿಧೆಡೆ ಕೇಸರಿ ತೋರಣ ಕಟ್ಟಲಾಗಿದೆ. ಸಮಾವೇಶಕ್ಕೆ ಸ್ವಾಗತ ಕೋರುವ ಬೃಹತ್ ಕೇಸರಿ ಕಮಾನುಗಳು ಇಡೀ ನಗರದಲ್ಲಿ ರಾರಾಜಿಸುತ್ತಿವೆ. ಬಂಟಿಂಗ್‌ಗಳನ್ನು ಇಡೀ ರಸ್ತೆಯಾದ್ಯಂತ ಕಟ್ಟಿದ್ದು, ಕೋಲಾರ ನಗರವೇ ಕೇಸರಿಮಯವಾಗಿದೆ.

ಸಮಾಜೋತ್ಸವ ಸಮಿತಿ ಸಂಚಾಲಕ ಡಾ. ಜನಾರ್ಧನ್ ಮಾತನಾಡಿ, ಜ.೩೧ರಂದು ಮಧ್ಯಾಹ್ನ ೨.೩೦ಕ್ಕೆ ಸಮಾವೇಶ ಹಮ್ಮಿಕೊಳ್ಳಲಾಗಿದೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೃಹತ್ ಶೋಭಾ ಯಾತ್ರೆ ನಡೆಯಲಿದೆ. ಇದರಲ್ಲಿ ಸಾವಿವಾರು ಸಂಖ್ಯೆಯಲ್ಲಿ ಹಿಂದೂ ಮುಖಂಡರು ಪಾಲ್ಗೊಳ್ಳಬೇಕು ಎಂದು ಕೋರಿದರು.

ರ್‍ಯಾಲಿಯಲ್ಲಿ ಪಾಲ್ಗೊಂಡಿರುವವರು ಸಮಾವೇಶದ ಉದ್ದೇಶ ಕುರಿತು ಜಾಗೃತಿ ಮೂಡಿಸಬೇಕು. ಸಾವಿರಾರು ಮಂದಿ ರ್‍ಯಾಲಿಯಲ್ಲಿಪಾಲ್ಗೊಂಡಿದ್ದು ಒಬ್ಬರು ಕನಿಷ್ಠ ೧೦ ಮಂದಿ ಕರೆ ತರುವ ಮೂಲಕ ಸುಮಾರು ೫೦ ಸಾವಿರ ಜನರನ್ನು ಸೇರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಹಿಂದೂ ಸಮಾಜಕ್ಕಾಗಿ ಒಂದೆರಡು ಗಂಟೆ ಹೋಗುವುದು ಅಲ್ಲ. ಪ್ರತಿ ನಿತ್ಯವು ಹಿಂದೂ ಧರ್ಮವನ್ನು ಉಳಿಸಬೇಕು. ಜ.೩೧ನೇ ತಾರೀಖು ಕೋಲಾರ ನಗರದಲ್ಲಿ ೫೦ ಸಾವಿರ ಜನರ ಸಮ್ಮುಖದಲ್ಲಿ ಹಿಂದೂ ಸಮಾವೇಶ ನಡೆಯುತ್ತದೆ. ಹಿಂದೂ ಸಮಾಜದ ಶಕ್ತಿಯನ್ನು ಕೋಲಾರ ನಗರದಲ್ಲಿ ಪ್ರದರ್ಶನ ಮಾಡಬೇಕು. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ ಮಾತನಾಡಿ, ಪೂರ್ವ ಜಾಗೃತಿ ಬೈಕ್ ರ್‍ಯಾಲಿಯಲ್ಲಿ ಪಕ್ಷಾತೀತವಾಗಿ ಪಾಲ್ಗೊಂಡಿದ್ದು, ಇದು ನಮ್ಮ ಹಿಂದೂಗಳ ಹಬ್ಬ. ಯಾವುದೋ ಧರ್ಮದ ವಿರುದ್ಧ, ವ್ಯಕ್ತಿಗಳ ವಿರುದ್ಧ, ಪಕ್ಷಗಳ ವಿರುದ್ಧ ಹೋರಾಟ ಮಾಡುತ್ತಿಲ್ಲ ಎಂದು ಹೇಳಿದರು.

ಹಿಂದೂ ಸಮಾಜೋತ್ಸವ ಸಮಾವೇಶ ಇನ್ನೊಂದು ಧರ್ಮದ ವಿರುದ್ಧ ಸಮರ ಸಾರುವುದಕ್ಕೆ ಅಲ್ಲ, ನಮ್ಮಲ್ಲಿನ ಎಲ್ಲಾ ಜಾತಿಗಳನ್ನು ಒಗ್ಗೂಡಿಸಿಕೊಂಡು ಬಲಿಷ್ಠ ದೇಶ ಕಟ್ಟುವ ಕೆಲಸ ಮಾಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಈ ಹಿಂದೂ ಸಮಾಜೋತ್ಸವ ಸಮಾವೇಶವನ್ನು ಇಡೀ ದೇಶದಲ್ಲಿ ಒಂದೊಂದು ಹೆಸರಿನಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಕೋಲಾರ ತಾಲೂಕಿನ ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಷ.ಬ್ರ ಪಟ್ಟದ ಶ್ರೀ ತೇಜಲಿಂಗ ಶಿವಾಚಾರ್ಯ ಸ್ವಾಮೀಜಿ, ಕೋಲಾರ ತಾಲೂಕಿನ ಚೊಕ್ಕಹಳ್ಳಿಯ ಚಿನ್ಮಯ ಸಾಂದೀಪನಿ ಆಶ್ರಮದ ಶ್ರೀ ದತ್ತಪಾದಾನಂದ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮುಖಂಡರಾದ ಡಾ.ಶಂಕರ್ ನಾಯಕ್, ವೆಂಕಟೇಶ್, ವರ್ತೂರು ಪ್ರಕಾಶ್, ಸಿಎಂಆರ್ ಶ್ರೀನಾಥ್, ಬಜರಂಗದಳ ಬಾಲಾಜಿ, ಬಾಬು, ಅಪ್ಪಿ, ಪ್ರವೀಣ್‌ಗೌಡ, ರಾಜೇಶ್ ಸಿಂಗ್, ಕೆಂಬೋಡಿ ನಾರಾಯಣಸ್ವಾಮಿ, ರಾಕೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮಕ್ಕೆ ಆಗ್ರಹ
ಎನ್ ಸಿಬಿ ದಾಳಿ- ಫ್ಯಾಕ್ಟರಿ ಬಾಡಿಗೆ ಪಡೆದಿದ್ದ ವ್ಯಕ್ತಿ ಬಂಧನ