ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ರಾಜಸ್ಥಾನದಲ್ಲಿ ನಾಲ್ವರ ಆರೋಪಿಗಳ ಬಂಧನವಾಗಿದ್ದು, ಅವರಲ್ಲಿ ಮನೋಹರ್‌ಬಿಷ್ಣೋಯಿ ಎಂಬಾತ ಗಣಪತ್‌ಲಾಲ್‌ಸಂಬಂಧಿಕ
ಕನ್ನಡಪ್ರಭ ವಾರ್ತೆ ಮೈಸೂರು
ಡ್ರಗ್ಸ್ ಪ್ರಕರಣ ಸಂಬಂಧ ಮೈಸೂರಿನ ಫ್ಯಾಕ್ಟರಿ ಮೇಲೆ ದಾಳಿ ನಡೆಸಿದ್ದ ಎನ್ ಸಿಬಿ (ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ) ತಂಡದ ಅಧಿಕಾರಿಗಳು, ಫ್ಯಾಕ್ಟರಿಯನ್ನು ಬಾಡಿಗೆಗೆ ಪಡೆದಿದ್ದ ವ್ಯಕ್ತಿಯನ್ನು ಗುರುವಾರ ಬಂಧಿಸಿದ್ದಾರೆ.ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಫ್ಯಾಕ್ಟರಿ ಬಾಡಿಗೆ ಪಡೆದಿದ್ದ ಆಲನಹಳ್ಳಿ ನಿವಾಸಿ ಗಣಪತ್‌ಲಾಲ್‌ಎಂಬವರನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿ, ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ.ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ರಾಜಸ್ಥಾನದಲ್ಲಿ ನಾಲ್ವರ ಆರೋಪಿಗಳ ಬಂಧನವಾಗಿದ್ದು, ಅವರಲ್ಲಿ ಮನೋಹರ್‌ಬಿಷ್ಣೋಯಿ ಎಂಬಾತ ಗಣಪತ್‌ಲಾಲ್‌ಸಂಬಂಧಿಕ. ಅಲ್ಲದೆ, ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಗಣಪತ್‌ಲಾಲ್‌ಮಾಲೀಕತ್ವದ ಟುಕ್– ಟುಕ್ ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸಲ್ಯೂಷನ್ ಮ್ಯಾನಿಫ್ಯಾಕ್ಚರಿಂಗ್ ಘಟಕದಲ್ಲಿ ಮಾದಕ ವಸ್ತು ತಯಾರಿಸಿ, ರಾಜಸ್ಥಾನ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿಯು ಎನ್ ಸಿಬಿಗೆ ಲಭ್ಯವಾಗಿದೆ ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಎನ್‌ಸಿಬಿ ತಂಡವು ಬುಧವಾರ ಬೆಳಗ್ಗೆ ಗಣಪತ್ ಲಾಲ್ ಆಲನಹಳ್ಳಿ ಮನೆ ಹಾಗೂ ಹೆಬ್ಬಾಳದಲ್ಲಿರುವ ಫ್ಯಾಕ್ಟರಿ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿ ತೀವ್ರ ವಿಚಾರಣೆ ನಡೆಸಿದ್ದಾರೆ.ಗುರುವಾರ ಗಣಪತ್ ಲಾಲ್ ಬಂಧಿಸಿರುವ ಎನ್ ಸಿಬಿ ಅಧಿಕಾರಿಗಳು, ಕೆ.ಆರ್. ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಬಳಿಕ 5ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಂಜೆ ಹಾಜರುಪಡಿಸಿ, ಆರೋಪಿಯನ್ನು ಹೊರ ರಾಜ್ಯಕ್ಕೆ ಕರೆದೊಯ್ಯಲು ಟ್ರಾವೆಲ್‌ವಾರಂಟ್‌ಪಡೆದು ತೆರಳಿದ್ದಾರೆ. ಈ ನಡುವೆ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿರುವ ಫ್ಯಾಕ್ಟರಿಗೂ ಎನ್ ಸಿಬಿ ಅಧಿಕಾರಿಗಳು ಬೀಗ ಮುದ್ರೆ ಹಾಕಿದ್ದಾರೆಂದು ತಿಳಿದು ಬಂದಿದೆ.ಎನ್ ಸಿಬಿ ಅಧಿಕಾರಿಗಳು ಪ್ರಕರಣವೊಂದರ ವಿಚಾರಣೆಗಾಗಿ ಆಗಮಿಸಿದ್ದು, ಅನುಮಾನಾಸ್ಪದ ವಸ್ತುಗಳು ಸಿಕ್ಕಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಆದರೆ, ಎನ್‌ಸಿಬಿ ತಂಡದಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.