ಜಿಲ್ಲಾಡಳಿತ, ಜಿಪಂ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಫಲಪುಷ್ಪ ಪ್ರದರ್ಶನದಲ್ಲಿ 1.50 ಕೋಟಿ ರು. ವಹಿವಾಟು ನಡೆಸಲಾಗಿದೆ ಎಂದು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಸ್‌.ಕೀರ್ತನಾ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಿಲ್ಲಾಡಳಿತ, ಜಿಪಂ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಫಲಪುಷ್ಪ ಪ್ರದರ್ಶನದಲ್ಲಿ 1.50 ಕೋಟಿ ರು. ವಹಿವಾಟು ನಡೆಸಲಾಗಿದೆ ಎಂದು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಸ್‌.ಕೀರ್ತನಾ ಹೇಳಿದರು.

ಗಣರಾಜ್ಯೋತ್ಸವದ ಅಂಗವಾಗಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಫಲಪುಷ್ಪ ಪ್ರದರ್ಶನ ಹಾಗೂ ಚೈತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಬಗೆಯ 150 ಮಳಿಗೆ ನಿರ್ಮಾಣ ಮಾಡಿ ಮಾರಾಟಗಾರರಿಗೆ ಅನುಕೂಲ ಕಲ್ಪಿಸಲಾಗಿತ್ತು. ಕಳೆದ ಮೂರು ದಿನಗಳಲ್ಲಿ 1.50 ಕೋಟಿ ರು. ವ್ಯಾಪಾರ ವಹಿವಾಟು ನಡೆಸಲಾಗಿದೆ. ಸ್ವಸಹಾಯ ಸಂಘದ ಮಹಿಳೆಯರು, ಮದ್ಯಮ ವರ್ಗದವರು ಭಾಗವಹಿಸುವ ಮೂಲಕ ಆರ್ಥಿಕ ಸದೃಢರಾಗಿದ್ದಾರೆಂದು ಹೇಳಿದರು.

ಮೂರು ದಿನದಲ್ಲಿ ಮನರಂಜನೆ, ಜಾನುವಾರು, ಡಾಗ್ ಶೋ ಪ್ರದರ್ಶನ ಜನರ ಮನಸೂರೆಗೊಂಡವು. ಇಳಕಲ್, ಮೊಳಕಾಲ್ಮೂರು ಸೀರೆಗಳು ಅತೀ ಹೆಚ್ಚು ಮಾರಾಟವಾಗಿದ್ದು, ಕೆಎಸ್‌ಐಸಿ ಮೈಸೂರು ಸಿಲ್ಕ್ 75 ಲಕ್ಷ ರು. ಸೀರೆಗಳು ಮಾರಾಟವಾಗಿದ್ದು, ಇದು ಬಹಳಷ್ಟು ಜನರ ಜೀವನೋಪಾಯಕ್ಕೆ ಸಹಕಾರಿಯಾಗಿದೆ ಎಂದರು.

ಜಿಲ್ಲಾಧಿಕಾರಿ ಎನ್.ಎಂ ನಾಗರಾಜ್ ಮಾತನಾಡಿ, ರಾಷ್ಟ್ರೀಯ ಹಬ್ಬಗಳನ್ನು ಒಂದು ದಿನ ಆಚರಿಸಿ ಮರೆಯುವುದಕ್ಕಿಂತ ಜನರ ಅಭಿರುಚಿಗೆ ತಕ್ಕ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳು ನಡೆದಾಗ ಮಾತ್ರ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ನಿಜ ಅರ್ಥ ಬರುತ್ತದೆ.

ಪ್ರವಾಸೋದ್ಯಮವೇ ಬಂಡವಾಳವಾಗಿರುವ ಜಿಲ್ಲೆಯಲ್ಲಿ ಈ ಪ್ರದರ್ಶನದಲ್ಲಿ ಸರ್ವರೂ ಪಾಲ್ಗೊಂಡು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ಜನರಿಗೆ ಉಪಯುಕ್ತ ಮಾಹಿತಿ ದೊರೆಯಲಿದೆ ಎಂದು ಹೇಳಿದರು.

ಶ್ವಾನ ಮತ್ತು ಜಾನುವಾರು ಪ್ರದರ್ಶನ, ಫಲಪಾಕ ಸ್ಪರ್ಧೆ ಶುಚಿ ರುಚಿಯಾಗಿ ತಯಾರಿಸಲಾಗಿತ್ತು. ಭಾಗವಹಿಸಿದ ಎಲ್ಲಾ ಮಹಿಳೆಯರಿಗೂ ಬಹುಮಾನ ನೀಡಬೇಕೆನ್ನುವ ಮಟ್ಟಿಗೆ ಖಾದ್ಯಗಳನ್ನು ತಯಾರಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಗಣರಾಜ್ಯೋತ್ಸವವನ್ನು ಕಳೆದ ಮೂರು ದಿನಗಳಿಂದ ಆಚರಣೆ ಮಾಡಿದ ಅನುಭವವಾಯಿತು, ಸಾಂಸ್ಕೃತಿಕ ಕಾರ್ಯಕ್ರಮ, ಫಲಪುಷ್ಪ ಪ್ರದರ್ಶನ ಎಲ್ಲವೂ ಅದ್ದೂರಿಯಾಗಿತ್ತು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್‌ ದಯಾಮ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಮಂಗಳ, ಯೋಜನಾ ನಿರ್ದೇಶಕಿ ಸುಜಾತ, ಕೃಷಿಕ ಸಮಾಜದ ಅಶೋಕ್ ಇದ್ದರು.

ಫಲಪಾಕ ಸ್ಪರ್ಧೆಯಲ್ಲಿ ಆಸಿಯಾ ಸುಹಾನ ಫಸ್ಟ್‌

ಚೈತ್ರೋತ್ಸವದ ಅಂಗವಾಗಿ ಆಯೋಜಿಸಿದ್ದ ಫಲಪಾಕ ಸ್ಪರ್ಧೆಯಲ್ಲಿ 19 ಮಂದಿ ಮಹಿಳೆಯರು ಹಾಗೂ ಪುರುಷರು ಭಾಗವಹಿಸಿದ್ದರು. ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಪ್ರಸ್ತುತ ಪಡಿಸಿದ್ದರು.

ಪೈನಾಪಲ್ ಪಲಾವ್, ಬಾಳೇಹಣ್ಣು ರಸಾಯನ, ಕಿವಿ ಹಣ್ಣಿನ ಕೇಕ್, ಎಳ್ಳು ಹೋಳಿಗೆ, ಕಡುಬು ಮುಂತಾದವುಗಳು ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆಯಾಗಿತ್ತು.

ಚಿಕ್ಕಮಗಳೂರಿನ ಆಸಿಯಾ ಸುಹಾನ ಮೊದಲ ಬಹುಮಾನ, ರೋಹಿತ್ ನಾಯ್ಕಎರಡನೇ ಬಹುಮಾನ, ಅನುಪಮ ಮೂರನೇ ಬಹುಮಾನ ಪಡೆದರು. ಮೊದಲ ಬಹುಮಾನ 5 ಸಾವಿರ ರು. ಎರಡನೇ ಬಹುಮಾನ 3 ಸಾವಿರ ರು. ತೃತೀಯ ಬಹುಮಾನ 2 ಸಾವಿರ ರು. ನಗದು ಬಹುಮಾನ ನೀಡಲಾಗಿದೆ.