ಕೋಲಾರ ವೈದ್ಯಕೀಯ ಕಾಲೇಜು, ರೈತ ಮಾಲ್‌ ಸ್ಥಾಪನೆ

KannadaprabhaNewsNetwork |  
Published : Mar 07, 2026, 12:15 AM IST
5ಎಚ್ಎಸ್ಎನ್11 : ವೈಕುಂಠ ಬೀದಿ ರಸ್ತೆಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದ್ದು ರಸ್ತೆ ಮಟ್ಟಕ್ಕಿಂತ ಎತ್ತರದಲ್ಲಿ ಬಾಕ್ಸ್ ಚರಂಡಿ  ನಿರ್ಮಿಸಲಾಗುತ್ತಿದೆ. | Kannada Prabha

ಸಾರಾಂಶ

ಡಾ.ಬಿ.ಆರ್‌. ಅಂಬೇಡ್ಕರ್ ಭೇಟಿ ನೀಡಿದ ಸ್ಥಳಗಳಾದ ಕಲಬುರಗಿ, ವಿಜಯಪುರ, ಬೆಳಗಾವಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ಸಿಬಿಎಸ್‌ಇ ಪಠ್ಯಕ್ರಮದ ನಾಲ್ಕು ಕ್ರೈಸ್ ವಸತಿ ಶಾಲೆ ಪ್ರಾರಂಭ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಕೋಲಾರ

ಈ ಬಾರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ವೈದ್ಯಕೀಯ ಕಾಲೇಜು ಸ್ಥಾಪನೆ ಘೋಷಿಸಿದ್ದಾರೆ. ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಎಂಎಸ್‌ಐಎಲ್‌ನಿಂದ ರೈತ ಮಾಲ್‌ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಲಾಗಿದೆ.ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗಿಸುವುದರ ಜೊತೆಗೆ ಮಾರುಕಟ್ಟೆಯ ಅನಿಶ್ಚಿತತೆ ನಿವಾರಿಸುವ ಉದ್ದೇಶದಿಂದ ಬಿತ್ತನೆ ಬೀಜಗಳು, ಕೀಟನಾಶಕಗಳು, ರಸಗೊಬ್ಬರಗಳು ಹಾಗೂ ಕೃಷಿ ಯಂತ್ರೋಪಕರಣಗಳು ಒಂದೇ ಸೂರಿನಡಿ ದೊರಕಿಸಲು ಪ್ರಾಯೋಗಿಕವಾಗಿ ಮಾಲ್‌ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಅಲ್ಲದೆ ಡಾ.ಬಿ.ಆರ್‌. ಅಂಬೇಡ್ಕರ್ ಭೇಟಿ ನೀಡಿದ ಸ್ಥಳಗಳಾದ ಕಲಬುರಗಿ, ವಿಜಯಪುರ, ಬೆಳಗಾವಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ಸಿಬಿಎಸ್‌ಇ ಪಠ್ಯಕ್ರಮದ ನಾಲ್ಕು ಕ್ರೈಸ್ ವಸತಿ ಶಾಲೆ ಪ್ರಾರಂಭ ಮಾಡಲಾಗುವುದು. ಕೋಲಾರ ಜಿಲ್ಲೆಯ ಅಮಾನಿಕೆರೆಗೆ ಕಾಲುವೆ ತಡೆಗೋಡೆ ಮತ್ತು ಗೇಟ್ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಈಡೇರದ ಬೇಡಿಕೆಗಳು

ಈ ಸಾಲಿನ ರಾಜ್ಯ ಬಜೆಟ್ ದೊಡ್ಡ ಗಾತ್ರದ ಬಜೆಟ್ ಎಂದು ಹೇಳಲಾಗಿದ್ದರೂ, ಬರಪೀಡಿತ ಕೋಲಾರ ಜಿಲ್ಲೆಗೆ ನಿರೀಕ್ಷೆಯ ಮಟ್ಟದಲ್ಲಿ ವಿಶೇಷ ಘೋಷಣೆಗಳು ಕಾಣಿಸದಿರುವುದು ಜಿಲ್ಲೆಯ ಜನರಲ್ಲಿ ಒಂದು ಬಗೆಯ ನಿರಾಸೆ ಮೂಡಿಸಿದೆ.

ನೀರಿನ ಕೊರತೆ, ಕೃಷಿಕರ ಸಂಕಷ್ಟ, ಕೈಗಾರಿಕಾ ಮತ್ತು ಉದ್ಯೋಗ ಸಮಸ್ಯೆಗಳನ್ನು ಎದುರಿಸುತ್ತಿರುವ ಜಿಲ್ಲೆಗೆ ಈ ಬಾರಿ ಬಜೆಟ್‌ನಲ್ಲಿ ಸ್ಪಷ್ಟ ಅಭಿವೃದ್ಧಿ ಯೋಜನೆಗಳು ಘೋಷಣೆ ಆಗಬಹುದೆಂಬ ನಿರೀಕ್ಷೆ ಸ್ಥಳೀಯರಲ್ಲಿ ಇತ್ತು. ಆದರೆ ಪ್ರಮುಖ ಬೇಡಿಕೆಗಳ ಬಗ್ಗೆ ಸ್ಪಷ್ಟ ಉಲ್ಲೇಖ ಕಾಣಿಸದಿರುವುದು ಹಲವು ವಲಯಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.ಜಿಲ್ಲೆ ಹಲವು ವರ್ಷಗಳಿಂದ ಕೆಲವು ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ನಿರೀಕ್ಷಿಸುತ್ತಿದೆ. ವಿಶೇಷವಾಗಿ ಕೆಸಿ ವ್ಯಾಲಿ ಯೋಜನೆಯ ಮೂರನೇ ಹಂತದ ಶುದ್ಧೀಕರಣ, ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುವುದು, ಕೋಲಾರದಲ್ಲಿ ಟೊಮೆಟೋ ಮಾರುಕಟ್ಟೆ ಸ್ಥಾಪನೆ, ಜಿಲ್ಲೆಗೆ ವಿಶೇಷ ಕೈಗಾರಿಕಾ ಪ್ಯಾಕೇಜ್, ಕೃಷ್ಣಾ ನದಿ ನೀರು ತರುವುದು ಇದ್ಯಾವುದು ಆಗಿಲ್ಲ.

ಇವುಗಳ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದರು. ಆದರೆ ಈ ಬೇಡಿಕೆಗಳಿಗೆ ಸ್ಪಷ್ಟ ಘೋಷಣೆ ಅಥವಾ ಪ್ರತ್ಯೇಕ ಅನುದಾನ ಬಜೆಟ್‌ನಲ್ಲಿ ಕಾಣಿಸದಿರುವುದು ಜಿಲ್ಲೆಯ ಜನರಿಗೆ ನಿರಾಸೆ ಮೂಡಿಸಿದ್ದಾರೆ.ನೀರಿನ ಸಮಸ್ಯೆಗೆ ಸ್ಪಷ್ಟ ಪರಿಹಾರ ಇಲ್ಲ:ಕೋಲಾರ ಜಿಲ್ಲೆಯ ದೀರ್ಘಕಾಲದ ದೊಡ್ಡ ಸಮಸ್ಯೆ ಕುಡಿಯುವ ನೀರು. ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಗೆ ನೀರು ಬರುತ್ತದೆ ಎಂಬ ನಿರೀಕ್ಷೆ ಇದ್ದರೂ, ಬಜೆಟ್‌ನಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ಸ್ಪಷ್ಟ ಹೆಚ್ಚುವರಿ ಅನುದಾನ ಘೋಷಣೆ ಆಗಿಲ್ಲ. ಕೆಸಿ ವ್ಯಾಲಿ ಯೋಜನೆಯ ಮುಂದಿನ ಹಂತದ ಕುರಿತು ಕೂಡ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ.ಜಿಲ್ಲೆಯಲ್ಲಿ ನೆಲಜಲ ಮಟ್ಟ ನಿರಂತರವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನೀರಿನ ಯೋಜನೆಗಳ ಬಗ್ಗೆ ಸ್ಪಷ್ಟ ನಿರ್ಧಾರ ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.ಒಟ್ಟಾರೆ ಈ ಬಾರಿ ರಾಜ್ಯ ಬಜೆಟ್ ಕೋಲಾರ ಜಿಲ್ಲೆಗೆ ದೊಡ್ಡ ಅಭಿವೃದ್ಧಿ ಘೋಷಣೆಗಳನ್ನು ನೀಡಲಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭದ್ರಾ ಮೇಲ್ದಂಡೆ ಯೋಜನೆಗೆ ಮತ್ತೆ ಮಹಾದ್ರೋಹ
120 ಕಂದಾಯ ಅರ್ಜಿ ಸ್ವೀಕಾರ