ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯಲ್ಲಿ ಭಾನುವಾರ ರಾತ್ರಿ ಯುವಕನೊಬ್ಬ ಹತ್ತು ಸಾವಿರ ರುಪಾಯಿ ಆಸೆಗಾಗಿ ಐದು ಬಾಟಲ್ ಒರಿಜಿನಲ್ ಚಾಯ್ಸ್ ವಿಸ್ಕಿಗೆ ಸ್ವಲ್ಪವೂ ನೀರನ್ನು ಬೆರೆಸದೆ ಕುಡಿದಿದ್ದು, ಇದರಿಂದಾಗಿ ಆತ ಮೃತಪಟ್ಟಿದ್ದಾನೆ.
ಮುಳಬಾಗಿಲು : ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯಲ್ಲಿ ಭಾನುವಾರ ರಾತ್ರಿ ಯುವಕನೊಬ್ಬ ಹತ್ತು ಸಾವಿರ ರುಪಾಯಿ ಆಸೆಗಾಗಿ ಐದು ಬಾಟಲ್ ಒರಿಜಿನಲ್ ಚಾಯ್ಸ್ ವಿಸ್ಕಿಗೆ ಸ್ವಲ್ಪವೂ ನೀರನ್ನು ಬೆರೆಸದೆ ಕುಡಿದಿದ್ದು, ಇದರಿಂದಾಗಿ ಆತ ಮೃತಪಟ್ಟಿದ್ದಾನೆ.
ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ (21) ಎಂಬಾತ ಸ್ನೇಹಿತರ ಜೊತೆ ₹10 ಸಾವಿರ ಬೆಟ್ಟಿಂಗ್ ಕಟ್ಟಿದ್ದು, ಸ್ವಲ್ಪವೂ ನೀರನ್ನು ಬೆರೆಸದೆ ಐದು ಫುಲ್ ಬಾಟಲ್ ವಿಸ್ಕಿಯನ್ನು ಕುಡಿದಿದ್ದಾನೆ. ಇದರಿಂದ ಅಸ್ವಸ್ಥಗೊಂಡ ಆತನನ್ನು ತಕ್ಷಣವೇ ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆ ವೇಳೆಗಾಗಲೇ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಜೂಜಾಟ, ಬೆಟ್ಟಿಂಗ್, ಮದ್ಯದ ಚಟಕ್ಕೆ ದಾಸನಾಗಿದ್ದ ಈತ, ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದ. 8 ದಿನಗಳ ಹಿಂದಷ್ಟೇ ಆಕೆಗೆ ಹೆರಿಗೆಯಾಗಿದ್ದು, ಮಗುವಿಗೆ ಜನ್ಮ ನೀಡಿದ್ದಳು. ಆಕೆ, ಸದ್ಯ ತವರು ಮನೆಯಲ್ಲೇ ಇದ್ದಳು. ಈಗ ಆತನ ಹೆಂಡತಿ, ಮಗು, ಕುಟುಂಬ ಅನಾಥವಾಗಿದೆ.
ಮದ್ಯಕ್ಕೆ ನೀರು ಬೆರೆಸದೆ ಸೇವನೆ ಮಾಡಿದರೆ ಪ್ರಾಣಕ್ಕೆ ಅಪಾಯ ಎಂಬುದು ಗೊತ್ತಿದ್ದರೂ, ಕಾರ್ತಿಕ್‌ಗೆ ಎಣ್ಣೆ ಹೊಡೆಯಲು ಬಾಜಿ ಕಟ್ಟಿದ್ದ ಗ್ರಾಮದ ಮುನಿವೆಂಕಟರೆಡ್ಡಿ ಮತ್ತು ಸುಬ್ರಹ್ಮಣ್ಯ ಸೇರಿದಂತೆ ಆರು ಮಂದಿ ವಿರುದ್ಧ ಮೃತ ಕಾರ್ತಿಕ್ ಮನೆಯವರು ದೂರು ನೀಡಿದ್ದಾರೆ. ನಂಗಲಿ ಪೊಲೀಸರು ಮುನಿವೆಂಕಟರೆಡ್ಡಿ ಮತ್ತು ಸುಬ್ರಹ್ಮಣ್ಯನನ್ನು ಬಂಧಿಸಿದ್ದು, ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ,