ಕೇಂದ್ರ ಸರ್ಕಾರವು ಕೆ.ಜಿ.ಎಫ್ ಗಣಿಯನ್ನು ಪುನಾರಂಭಿಸಲು ಚಿಂತನೆ ನಡೆಸುತ್ತಿರುವ ಬೆನ್ನಲ್ಲೇ, ಅದಕ್ಕೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿ ಸಮೀಕ್ಷೆ ಚುರುಕುಗೊಂಡಿದೆ.
ಗುಡಿಬಂಡೆ ತಾಲೂಕಿನಲ್ಲೂ ಚಿನ್ನದ ನಿಕ್ಷೇಪ ಇರುವ ಸಾಧ್ಯತೆ । ಗ್ರಾನೈಟ್ ಮತ್ತು ಕಲ್ಲು ನಿಕ್ಷೇಪಗಳಿಗೆ ಪ್ರಸಿದ್ಧ
ಕನ್ನಡಪ್ರಭ ವಾರ್ತೆ ಗುಡಿಬಂಡೆಕೋಲಾರದಲ್ಲಿ ಚಿನ್ನದ ಗಣಿಯ ಮಾದರಿಯಲ್ಲಿ ಗುಡಿಬಂಡೆಯಲ್ಲೂ ಗಣಿ ಇರಬಹುದು ಎಂಬ ಅಂದಾಜಿನ ಮೇರೆಗೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ವ್ಯಾಪ್ತಿಯಲ್ಲಿ ಹಳದಿ ಲೋಹ ಪತ್ತೆಗಾಗಿ ಹೆಲಿಕ್ಯಾಪ್ಟರ್ ಸರ್ವೆ ಕಾರ್ಯ ಭರದಿಂದ ಸಾಗುತ್ತಿದ್ದು, ಈ ಬಗ್ಗೆ ಸ್ಥಳೀಯರಲ್ಲಿ ಸಾಕಷ್ಟು ಕೂತೂಹಲ ಮನೆ ಮಾಡಿದೆ.
ಕೇಂದ್ರ ಸರ್ಕಾರವು ಕೆ.ಜಿ.ಎಫ್ ಗಣಿಯನ್ನು ಪುನಾರಂಭಿಸಲು ಚಿಂತನೆ ನಡೆಸುತ್ತಿರುವ ಬೆನ್ನಲ್ಲೇ, ಅದಕ್ಕೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿ ಸಮೀಕ್ಷೆ ಚುರುಕುಗೊಂಡಿದೆ. ಆಂಧ್ರಪ್ರದೇಶದ ಕದಿರಿ ಸುತ್ತಮುತ್ತ ನಡೆಸಿದ ಪ್ರಾಥಮಿಕ ಸಮೀಕ್ಷೆಯಲ್ಲಿ ಒಂದು ಟನ್ ಮಣ್ಣಿನಲ್ಲಿ ಸುಮಾರು 4 ಗ್ರಾಂ ಚಿನ್ನ ಸಿಗಬಹುದು ಎಂಬ ಆಶಾದಾಯಕ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕದಿರಿಗೆ ಹೊಂದಿಕೊಂಡಿರುವ ಗುಡಿಬಂಡೆ ತಾಲೂಕಿನಲ್ಲೂ ಚಿನ್ನದ ನಿಕ್ಷೇಪ ಇರುವ ಸಾಧ್ಯತೆಯನ್ನು ತಜ್ಞರು ಅಂದಾಜಿಸಿದ್ದಾರೆ.ಭೂಮಿಯ ಆಳದಲ್ಲಿರುವ ಖನಿಜ ಸಂಪತ್ತಿನ ಗಾತ್ರ, ಆಳ ಮತ್ತು ಅದರ ವ್ಯಾಪ್ತಿಯನ್ನು ನಿಖರವಾಗಿ ಅಂದಾಜಿಸುವ ಉದ್ದೇಶದಿಂದ ಈ ವೈಮಾನಿಕ ಸಮೀಕ್ಷೆ ನಡೆಯುತ್ತಿದೆ. ಸುಮಾರು 15 ರಿಂದ 20 ದಿನಗಳ ಕಾಲ ಈ ಪ್ರಕ್ರಿಯೆ ನಡೆಯಲಿದ್ದು, ಮಣ್ಣಿನಲ್ಲಿರುವ ಖನಿಜದ ಅಂಶಗಳನ್ನು ಆಧುನಿಕ ಉಪಕರಣಗಳ ಮೂಲಕ ವಿಶ್ಲೇಷಿಸಲಾಗುತ್ತಿದೆ. ಗುಡಿಬಂಡೆ ಪ್ರದೇಶವು ಸದ್ಯಕ್ಕೆ ಗ್ರಾನೈಟ್ ಮತ್ತು ಕಲ್ಲು ನಿಕ್ಷೇಪಗಳಿಗೆ ಪ್ರಸಿದ್ಧವಾಗಿದ್ದು, ಈಗ ಚಿನ್ನದ ನಿಕ್ಷೇಪವೂ ಪತ್ತೆಯಾಗುವ ಸಾಧ್ಯತೆ ಇರುವುದು ಎಲ್ಲರ ಗಮನ ಸೆಳೆದಿದೆ.
ಚಿನ್ನದ ನಿಕ್ಷೇಪದ ಸುದ್ದಿಯು ಜನರಲ್ಲಿ ಸಂತಸದ ಜೊತೆಗೆ ಒಂದಷ್ಟು ಆತಂಕವನ್ನೂ ತಂದಿದೆ. ಒಂದು ವೇಳೆ ಈ ಭಾಗದಲ್ಲಿ ದೊಡ್ಡ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾದಲ್ಲಿ, ಗಣಿಗಾರಿಕೆಗಾಗಿ ಸರ್ಕಾರ ತಮ್ಮ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂಬ ಭೀತಿ ರೈತರಲ್ಲಿದೆ. ಮತ್ತೊಂದೆಡೆ, ಬೆಂಗಳೂರಿಗೆ ಸಮೀಪವಿರುವ ಈ ಭಾಗದಲ್ಲಿ ಈಗಾಗಲೇ ಜಮೀನಿನ ಬೆಲೆ ಹೆಚ್ಚಾಗಿದ್ದು, ಬಂಗಾರದ ನಿಕ್ಷೇಪದ ಸುಳಿವು ಸಿಗುತ್ತಿದ್ದಂತೆ ಭೂಮಿಯ ಬೆಲೆ ಏಕಾಏಕಿ ದುಪ್ಪಟ್ಟಾಗುವ ಸಂಭವವಿದೆ ಎಂಬ ಲೆಕ್ಕಾಚಾರಗಳೂ ಸಹ ಜೋರಾಗಿ ನಡೆಯುತ್ತಿದೆ.ಈ ಕುರಿತು ಸ್ಥಳೀಯ ನಿವಾಸಿ ಮಂಜುನಾಥ ಮಾತನಾಡಿ, ಈ ಭಾಗದಲ್ಲಿ ಯಾವುದೇ ಖನಿಜ ಸಂಪನ್ಮೂಲ ಸಿಕ್ಕರೂ ನಮ್ಮ ಭಾಗದ ಜನತೆಗೆ ಅನುಕೂಲವಾಗಲಿದೆ. ಜೊತೆಗೆ ಉದ್ಯೋಗವಾಕಾಶಗಳು ಸಿಗಲಿದೆ. ಸದ್ಯ ನಡೆಯುತ್ತಿರುವ ವೈಮಾನಿಕ ಸಮೀಕ್ಷೆಯಿಂದ ನಮಗೆ ಸಕರಾತ್ಮಕ ವರದಿ ಸಿಗಲಿ ಎಂಬ ಆಶಯ ನಮಗಿದೆ ಎಂದರು.
ಈ ಬಗ್ಗೆ ಮಾತನಾಡಿರುವ ಯರ್ರಲಕ್ಕೇನಹಳ್ಳಿ ನಿವಾಸಿ ಪಾಪಿರೆಡ್ಡಿ ಅವರು, ಶುಕ್ರವಾರದಿಂದಲೇ ಬೀಚಗಾನಹಳ್ಳಿ ಕ್ರಾಸ್ ಭಾಗದಲ್ಲಿ ಸಮೀಕ್ಷೆ ಆರಂಭವಾಗಿದೆ. ನೆರೆಯ ಕದಿರಿಯಲ್ಲಿ ಈಗಾಗಲೇ ಸಕಾರಾತ್ಮಕ ವರದಿ ಬಂದಿರುವುದರಿಂದ ಗುಡಿಬಂಡೆಯಲ್ಲೂ ಚಿನ್ನ ಸಿಗಬಹುದು ಎಂಬ ನಿರೀಕ್ಷೆ ಇದೆ. ಒಟ್ಟಾರೆ ಈ ಸಮೀಕ್ಷಾ ಕಾರ್ಯ ಮುಗಿದು ವರದಿ ಬಂದ ನಂತರವಷ್ಟೇ ಗುಡಿಬಂಡೆಯ ಭೂಗರ್ಭದಲ್ಲಿ ಅಡಗಿರುವ ಬಂಗಾರದ ರಹಸ್ಯ ಬಯಲಾಗಲಿದೆ.ಜಿಯೋಗ್ರಾಫಿಕಲ್ ಸರ್ವೆ ಆಫ್ ಇಂಡಿಯಾ ವತಯಿಂದ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ವ್ಯಾಪ್ತಿಯಲ್ಲಿ ನೈಸರ್ಗಿಕ ಖನಿಜ ಸಂಪನ್ಮೂಲಗಳ ಇರುವಿಕೆಯ ಕುರಿತು ಸರ್ವೆ ಕಾರ್ಯ ನಡೆಯುತ್ತಿದೆ. ಅನೇಕರು ಹೆಲಿಕಾಪ್ಟರ್ ಸರ್ವೆ ಮಾಡುತ್ತಿರುವುದನ್ನು ಕಂಡು ಭಯಭೀತರಾಗಿದ್ದರು. ಯಾರು ಭಯಪಡುವಂತಹ ಅವಶ್ಯಕತೆ ಬೇಡ. ಇದು ಖನಿಜ ಸಂಪನ್ಮೂಲದ ಸರ್ವೆ ಮಾತ್ರ. ಇನ್ನೂ 10-15 ದಿನಗಳ ಕಾಲ ಈ ಸರ್ವೆ ನಡೆಯಲಿದೆ ಎಂದು ತಹಸೀಲ್ದಾರ್ ಸಿಗ್ಬತ್ತುಲ್ಲಾ ತಿಳಿಸಿದ್ದಾರೆ.
03ಜಿಯುಡಿ1: ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ವ್ಯಾಪ್ತಿಯಲ್ಲಿ ಹಳದಿ ಲೋಹ ಪತ್ತೆಗಾಗಿ ಹೆಲಿಕ್ಯಾಪ್ಟರ್ ಸರ್ವೆ ಕಾರ್ಯ ಭರದಿಂದ ಸಾಗುತ್ತಿದೆ.