ಬೇತಮಂಗಲ (ಕೋಲಾರ) : ರಾಜ್ಯ ಸರ್ಕಾರದ ಜಾತಿ ಗಣತಿಗೆ ತೆರಳಿದ್ದ ಕೋಲಾರ ಜಿಲ್ಲೆಯ ಶಿಕ್ಷಕಿಯೊಬ್ಬರು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಗಣತಿಯಲ್ಲಿ ಹಿರಿಯ ಅಧಿಕಾರಿಗಳು ಕೊಟ್ಟ ಒತ್ತಡದಿಂದಾಗಿಯೇ ಶಿಕ್ಷಕಿ ಆತ್ಮ*ತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.
ಅಕ್ತರ್ ಬೇಗಂ (50) ಶಿಕ್ಷಕಿಯಾಗಿದ್ದರು, ಅವರು ಸೋಮವಾರ ಸಮೀಕ್ಷೆಗೆ ತೆರಳಿದ್ದರು. ಇವರು ಕಾಣೆಯಾಗಿದ್ದಾರೆ ಎಂದು ಮನೆಯವರು ದೂರು ನೀಡಿದ್ದರು. ಬುಧವಾರ ಬೇತಮಂಗಲ ಹೋಬಳಿಯ ಅಮಾನಿಕೆರೆಯಲ್ಲಿ ಬ್ಯಾಗ್ ತೇಲುತ್ತಿದ್ದನ್ನು ಕಂಡ ಸ್ಥಳೀಯರು, ಶವ ಕಂಡು ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಶವ ಮೇಲೆತ್ತಿದ್ದಾರೆ.
ಘಟನೆ ಹಿನ್ನೆಲೆ:
ಅಕ್ತರ್ ಬೇಗಂ ಅವರು ಕಳೆದ 15 ದಿನಗಳಿಂದ ರಾಜ್ಯ ಸರ್ಕಾರದ ಜಾತಿ ಗಣತಿಯಲ್ಲಿ ತೊಡಗಿದ್ದರು. ಇದಕ್ಕಾಗಿ ಜಿಲ್ಲೆಯ ನರಸಾಪುರ ಎಂಬಲ್ಲಿಗೆ ನಿಯೋಜನೆಗೊಂಡಿದ್ದರು. ಸಮೀಕ್ಷೆ ವೇಳೆ ಜನರು ಸರಿಯಾಗಿ ಸ್ಪಂದಿಸದ ಕಾರಣ, ಗಣತಿ ಮುಂದೆ ಸಾಗದೆ ಮಾನಸಿಕ ಹಿಂಸೆಗೆ ಒಳಗಾಗಿದ್ದರು. ಇದಿಷ್ಟೇ ಅಲ್ಲದೇ ಹಿರಿಯ ಅಧಿಕಾರಿಗಳ ಒತ್ತಡವೂ ಸಹ ಶಿಕ್ಷಕಿ ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಾಡಿತ್ತು ಎನ್ನಲಾಗಿದೆ.
ಸೋಮವಾರ ಸಮೀಕ್ಷೆಗೆಂದು ತಮ್ಮ ಮಗನಿಂದ ಡ್ರಾಪ್ ಪಡೆದಿದ್ದ ಅಕ್ತರ್ ಅವರು, ತಮ್ಮ ಮೊಬೈಲನ್ನು ಮನೆಯಲ್ಲಿಯೇ ಬಿಟ್ಟಿದ್ದರು. ರಾತ್ರಿಯಾದರೂ ಶಿಕ್ಷಕಿ ಮನೆಗೆ ಬಾರದೇ ಇದ್ದಾಗ ಕುಟುಂಬಸ್ಥರು ಭಾರಿ ಹುಡುಕಾಟ ನಡೆಸಿ, ಸಿಗದಿದ್ದಕ್ಕೆ ಕೋಲಾರ ಠಾಣೆಗೆ ದೂರಿತ್ತಿದ್ದಾರೆ. ಬುಧವಾರ ಶವ ಪತ್ತೆಯಾಗಿದ್ದು, ಕೆಜಿಎಫ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಾವಿಗೆ ಹಿರಿಯ ಅಧಿಕಾರಿಗಳ ಮಾನಸಿಕ ಹಿಂಸೆಯೇ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.