ನಾನು ಕೃಷಿ ಸಚಿವನಾದ ನಂತರ ಇಡೀ ರಾಷ್ಟ್ರದಲ್ಲಿ ಮೊದಲ ಬಾರಿಗೆ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ರೈತರು ಈ ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ರೈತರು ಆಹಾರ ಪದಾರ್ಥಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಯಲ್ಲಿ ನೇರ ಮಾರಾಟ ಮಾಡಿದರೆ ಅಧಿಕ ಲಾಭ ಪಡೆಯಬಹುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಆರಣಿ ಗ್ರಾಮದಲ್ಲಿ ಕೃಷಿ ಹಾಗೂ ಜಲಾನಯನ ಇಲಾಖೆ ವತಿಯಿಂದ ಆಯೋಜಿಸಿದ್ದ ಜಲಾನಯನ ಮೇಳ ಉದ್ಘಾಟಿಸಿ ಮಾತನಾಡಿದ ಸಚಿವರು, ಜಲ, ಮಣ್ಣಿನ ಸಂರಕ್ಷಣೆ ಹಾಗೂ ಭೂ ಸಂಪನ್ಮೂಲಗಳ ಸಮರ್ಥ ಬಳಕೆಗೆ ಜಲಾನಯನ ಯೋಜನೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ರೈತರು ಬೆಳೆಯುವ ಆಹಾರ ಪದಾರ್ಥಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಯಲ್ಲಿ ನೇರ ಮಾರಾಟ ಮಾಡಿದರೆ ಅಧಿಕ ಲಾಭ ಪಡೆಯಬಹುದೆಂಬ ಕಾರಣಕ್ಕೆ ನಾನು ಕೃಷಿ ಸಚಿವನಾದ ನಂತರ ಇಡೀ ರಾಷ್ಟ್ರದಲ್ಲಿ ಮೊದಲ ಬಾರಿಗೆ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ರೈತರು ಈ ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಜಲಾನಯನ ಯೋಜನೆಗೆ ಆರಣಿ ಗ್ರಾಪಂ ವ್ಯಾಪ್ತಿಯ ಸಿದ್ದಾಪುರ, ಮಣಿಯೂರು, ಹೊನ್ನೇನಹಳ್ಳಿ, ಮೈಲನಹಳ್ಳಿ, ಅಣಕನಹಳ್ಳಿ, ತಿಗಳನಹಳ್ಳಿ, ಎಂ.ಕೋಡಿಹಳ್ಳಿ, ಬಣ್ಣದಹಳ್ಳಿ, ಮಂಚೇನಹಳ್ಳಿ, ಕಂಚನಹಳ್ಳಿ ಹಾಗೂ ಚುಂಚನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಒಟ್ಟು 2838 ಹೆಕ್ಟೇರ್ ಪ್ರದೇಶ ಸೇರುತ್ತವೆ ಎಂದು ತಿಳಿಸಿದರು.

ಇದರಲ್ಲಿ 27 ಸ್ವಸಹಾಯ ಸಂಘಗಳ ಸದಸ್ಯರೂ ಸೇರಿದಂತೆ ಅರ್ಹ ಫಲಾನುಭವಿ ರೈತರಿಗೆ 35 ಲಕ್ಷ ರು. ಸಹಾಯಧನದಲ್ಲಿ 32,600 ಖುಷ್ಕಿ ತೋಟಗಾರಿಕೆ ಸಸಿಗಳು, ೩೮ಲಕ್ಷ ರು. ಸಹಾಯಧನದಲ್ಲಿ 27,200 ಕೃಷಿ ಅರಣ್ಯ ಸಸಿಗಳನ್ನು ವಿತರಿಸಲಾಗಿದೆ. ಮಣ್ಣು ಮತ್ತು ನೀರು ಸಂರಕ್ಷಣೆಗೆ 10 ಕೃಷಿ ಹೊಂಡ ನಿರ್ಮಿಸಲು 5.98 ರು. ಮೂರು ಕಂದಕ ಬದು ನಿರ್ಮಾಣಕ್ಕೆ 14.94 ಲಕ್ಷ ರು. ನಾಲೆ ಬದು ನಿರ್ಮಾಣಕ್ಕೆ 24.75ಲಕ್ಷ, ತಡೆ ಅಣೆ ನಿರ್ಮಿಸಲು 14.86 ಲಕ್ಷ ರು. ಸಹಾಯಧನ ನೀಡಲಾಗಿದೆ ಎಂದು ಹೇಳಿದರು.ಇದಲ್ಲದೆ ಅರ್ಹ ಫಲಾನುಭವಿ ರೈತರೊಬ್ಬರಿಗೆ 5.5ಲಕ್ಷ ಸಹಾಯಧನದಲ್ಲಿ ಒಂದು ಟ್ರಾಕ್ಟರ್ ಸೇರಿ ಸುಮಾರು 60 ಲಕ್ಷ ರು.ಗಳ ಸಹಾಯಧನದಲ್ಲಿ 58 ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರ, ಹೈನುಗಾರಿಕೆ 105 ಫಲಾನುಭವಿಗಳಿಗೆ 209 ರಬ್ಬರ್ ಮ್ಯಾಟ್, 34ಮಂದಿಗೆ 67ಜೇನುಪೆಟ್ಟಿಗೆ, 240 ಮಂದಿ ರೈತರಿಗೆ 2440ಪಿವಿಸಿ ಪೈಪ್, 640 ರೈತರಿಗೆ 1280 ಮೇವಿನ ಕಿಟ್ ಮತ್ತು ಶಾಲೆಗಳಿಗೆ ಪೀಠೋಪಕರಣ ವಿತರಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಚಿವ ಎನ್. ಚಲುವರಾಯಸ್ವಾಮಿ ಅವರು ಸ್ವತಃ ಎತ್ತಿನ ಗಾಡಿ ಹೊಡೆದುಕೊಂಡು ಮಳೆ ನೀರು ಸಂಗ್ರಹ, ಅಂತರ್ಜಲ ಮತ್ತು ಮಣ್ಣು ಸಂರಕ್ಷಣೆ ಕುರಿತು ಶಾಲಾ ಮಕ್ಕಳೊಂದಿಗೆ ಗ್ರಾಮದಲ್ಲಿ ಜನಜಾಗೃತಿ ಜಾಥಾ ನಡೆಸಿ ಗಮನ ಸೆಳೆದರು.

ತಹಸೀಲ್ದಾರ್ ಜಿ. ಆದರ್ಶ, ತಾಪಂ ಇಓ ಸತೀಶ್, ಸಿಪಿಐ ಹೇಮಂತ್‌ಕುಮಾರ್, ಬೆಳ್ಳೂರು ಠಾಣೆ ಪಿಎಸ್‌ಐ ವೈ.ಎನ್. ರವಿಕುಮಾರ್, ಪಾಂಡವಪುರ ಉಪ ಕೃಷಿ ನಿರ್ದೇಶಕ ಡಾ. ಭಾನುಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕ ಆರ್. ಹರೀಶ್, ಕೃಷಿ ಅಧಿಕಾರಿ ರೆಡ್ಡಿಶೇಖರ್, ಹರಿಪ್ರಸಾದ್ ಪುರೋಹಿತ್, ರಾಜ್ಯ ಸಾವಯವ ಕೃಷಿ ಉನ್ನತ ಸಮಿತಿ ಮಾಜಿ ಉಪಾಧ್ಯಕ್ಷ ಎಚ್.ಟಿ. ಕೃಷ್ಣೇಗೌಡ, ರೈತ ಮುಖಂಡ ರಂಗೇಗೌಡ, ಸತ್ಯಣ್ಣ ಸೇರಿದಂತೆ ಹಲವರು ಇದ್ದರು.-----------------

9ಕೆಎಂಎನ್ ಡಿ11

ನಾಗಮಂಗಲ ತಾಲೂಕಿನ ಆರಣಿ ಗ್ರಾಮದಲ್ಲಿ ನಡೆದ ಜಲಾನಯನ ಮೇಳದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಅರ್ಹ ಫಲಾನುಭವಿ ರೈತನಿಗೆ ಸಹಾಯಧನದಲ್ಲಿ ಟ್ರಾಕ್ಟರ್ ವಿತರಿಸಿದರು.