ಕೊಳ್ಳೂರು (ಎಂ) ಸೇತುವೆ ಎತ್ತರಕ್ಕೆ ಪ್ರಯತ್ನ : ಸಚಿವ ದರ್ಶನಾಪುರ

KannadaprabhaNewsNetwork | Published : Jul 28, 2024 2:11 AM

ಸಾರಾಂಶ

ಕೊಳ್ಳೂರ(ಎಂ)ಗ್ರಾಮದ ಕೃಷ್ಣಾ ನದಿ ಸೇತುವೆ ಮುಳುಗಡೆ ಪ್ರದೇಶಕ್ಕೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪುರ, ಸಂಸದ ಜಿ.ಕುಮಾರ್ ನಾಯಕ, ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ನಾರಾಯಣಪುರ ಬಸವಸಾಗರ ಜಲಾಶಯದಿಂದ ಶುಕ್ರವಾರ 3.10ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿಸಲಾಗಿದ್ದು, ತಾಲೂಕಿನ ಕೊಳ್ಳೂರ(ಎಂ)ಸೇತುವೆ ಮುಳುಗಡೆಯಾಗಿದೆ.

ಈ ರಸ್ತೆ ಮೂಲಕ ಸಂಚಾರ ಬಂದ್ ಮಾಡಲಾಗಿದ್ದು, ಸೇತುವೆ ಮುಳುಗಡೆ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ರಾಯಚೂರು ಲೋಕಸಭಾ ಸದಸ್ಯ ಜಿ.ಕುಮಾರ್ ನಾಯಕ ಹಾಗೂ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದರ್ಶನಾಪುರ ಅವರು, ಆಲಮಟ್ಟಿ, ನಾರಾಯಣಪುರ ಪ್ರದೇಶದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಮಳೆಯಾದರೆ ಎರಡು ಡ್ಯಾಮ್ ಗಳು ಭರ್ತಿಯಾಗುತ್ತವೆ. ಹೆಚ್ಚಿನ ನೀರು ನದಿಗೆ ಬಿಡುವುದರಿಂದ ನದಿ ಅಕ್ಕ-ಪಕ್ಕದ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾಳಾಗುತ್ತಿವೆ. ಜಮೀನಿಗಳಿಗೆ ನೀರು ನುಗ್ಗುವುದನ್ನು ತಡೆಯಲು ಸಾಧ್ಯವಿಲ್ಲ. ಬೆಳೆ ಹಾನಿ ಪರಿಹಾರ ನೀಡಬಹುದಾಗಿದೆ ಎಂದರು.

ಕೊಳ್ಳೂರು ಗ್ರಾಮದ ಕೃಷ್ಣಾ ನದಿ ಸೇತುವೆ ಕೆಳಗಡೆ ಇದ್ದು, ಹೆಚ್ಚಿನ ಪ್ರಮಾಣದಲ್ಲಿ ನದಿಗೆ ಹರಿಬಿಡುವುದರಿಂದ ಸೇತುವೆ ಮೇಲೆ ನೀರು ನುಗ್ಗುತ್ತದೆ. ಇದರಿಂದ ಯಾದಗಿರಿ-ರಾಯಚೂರ-ಕಲಬುರಗಿ ಮೂರು ಜಿಲ್ಲೆಗಳ ಸಂಪರ್ಕ ಕಡಿತಗೊಳ್ಳುವುದರಿಂದ ಮೂರು ಜಿಲ್ಲೆಯ ಜನರ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ.

ಈ ಸೇತುವೆ ಎತ್ತರಕ್ಕೆ ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾಗಿದ್ದು, ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಯಚೂರು ಸಂಸದರು, ಯಾದಗಿರಿ ಶಾಸಕರು ಎಲ್ಲರೂ ಸೇರಿ ಸೇತುವೆ ಎತ್ತರಕ್ಕೆ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರಿಗೆ ಇಲ್ಲಿನ ಜನರ ಹಾಗೂ ವಾಹನ ಸವಾರರ ಸಮಸ್ಯೆ ಬಗ್ಗೆ ಸವಿಸ್ತಾರವಾಗಿ ಮನವರಿಕೆ ಮಾಡುವ ಮೂಲಕ ಎತ್ತರದ ಸೇತುವೆ ನಿರ್ಮಾಣಕ್ಕೆ ನಾವೆಲ್ಲರೂ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ನದಿ ಪಾತ್ರದ ಗ್ರಾಮಗಳ ಜನರು ನದಿಗೆ ಇಳಿಯದಂತೆ ಹಾಗೂ ತಮ್ಮ ಜಾನುವಾರಗಳೊಂದಿಗೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹಾಗೂ ಪ್ರವಾಹದ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತಕ್ಕೆ ಸೂಚಿಸಲಾಗಿದೆ ಎಂದರು.

ನದಿ ಅಕ್ಕ-ಪಕ್ಕದ ರೈತರ ಜಮೀನುಗಳಿಗೆ ನದಿ ನೀರು ನುಗ್ಗಿ ಬೆಳೆ ಹಾನಿಯಾದ ಪಕ್ಷದಲ್ಲಿ ಜಮೀನಿನ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಲಾಗುವುದು. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ರೈತರಿಗೆ ಸಚಿವರು ಭರವಸೆ ನೀಡಿದರು. ಈ ವೇಳೆ ಕಂದಾಯ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಇದ್ದರು.

Share this article