ಸಮರ್ಪಣಾ ಪರಿವಾರ ಟ್ರಸ್ಟ್, ಮಂಗಳೂರು ಹಾಗೂ ಮುದ್ದುಕೃಷ್ಣ ಉತ್ಸವ ಸಮಿತಿಯ ವತಿಯಿಂದ ಕೊಲ್ಯ ಕುಲಾಲ ಮಂದಿರ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾದ ನಾಲ್ಕನೇ ವರ್ಷದ ಮುದ್ದುಕೃಷ್ಣ–2026 ಉತ್ಸವ
ಉಳ್ಳಾಲ: ಮಕ್ಕಳಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಆಯೋಜಿಸುವ ಮುದ್ದುಕೃಷ್ಣ ಉತ್ಸವಗಳು ಮಹತ್ವದ ಪಾತ್ರ ವಹಿಸುತ್ತವೆ. ಶ್ರೀಕೃಷ್ಣನ ಜೀವನ ಸಂದೇಶಗಳನ್ನು ಮಕ್ಕಳಿಗೆ ಪರಿಚಯಿಸುವುದರ ಜೊತೆಗೆ, ಅವರಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬೆಳೆಸುವ ಕಾರ್ಯ ನಿರಂತರವಾಗಬೇಕಿದೆ ಎಂದು ಕೊಲ್ಯ ಕುಲಾಲ ಸಂಘದ ಅಧ್ಯಕ್ಷ ಅನಿಲ್ ದಾಸ್ ಹೇಳಿದರು.
ಸಮರ್ಪಣಾ ಪರಿವಾರ ಟ್ರಸ್ಟ್, ಮಂಗಳೂರು ಹಾಗೂ ಮುದ್ದುಕೃಷ್ಣ ಉತ್ಸವ ಸಮಿತಿಯ ವತಿಯಿಂದ ಕೊಲ್ಯ ಕುಲಾಲ ಮಂದಿರ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾದ ನಾಲ್ಕನೇ ವರ್ಷದ ಮುದ್ದುಕೃಷ್ಣ–2026 ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಹಿಂದೆ ಮುದ್ದುಕೃಷ್ಣ ಸ್ಪರ್ಧೆಗಳನ್ನು ವೀಕ್ಷಿಸಲು ಮಂಗಳೂರಿಗೆ ತೆರಳಬೇಕಾಗುತ್ತಿತ್ತು. ಆದರೆ ಇದೀಗ ವಿವಿಧೆಡೆ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸದ ವಿಚಾರ. ಶ್ರೀಕೃಷ್ಣನ ಸಂದೇಶವನ್ನು ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ತಲುಪಿಸುವ ಮೂಲಕ ಅವರನ್ನು ಧಾರ್ಮಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸಿದ್ಧಪಡಿಸುವ ಅಗತ್ಯವಿದೆ ಎಂದರು.ತುಂಟಾಟ ಕಳ್ಳತನ ಅಲ್ಲ: ಮಂಗಳೂರು ವಿಶ್ವವಿದ್ಯಾನಿಲಯದ ನಾರಾಯಣ ಗುರು ಅಧ್ಯಯನ ಪೀಠದ ಸದಸ್ಯ ಆನಂದ ಕೆ. ಅಸೈಗೋಳಿ ಮಾತನಾಡಿ, ಶ್ರೀಕೃಷ್ಣ ಬಾಲ್ಯದಲ್ಲಿ ಬೆಣ್ಣೆ ಕದ್ದು ತಿಂದ ಪ್ರಸಂಗವನ್ನು ತುಂಟಾಟವೆಂದು ಅರ್ಥೈಸಬೇಕೇ ಹೊರತು ಕಳ್ಳತನವೆಂದು ಪರಿಗಣಿಸಬಾರದು. ಅದೇ ರೀತಿ ಶ್ರೀಕೃಷ್ಣನಿಗೆ 16 ಸಾವಿರ ಪತ್ನಿಯರು ಇದ್ದರು ಎಂಬುದು ಶುದ್ಧ ತಪ್ಪು. ದೇವರ ಹೆಸರನ್ನು ಅಪಾರ್ಥಗೊಳಿಸಿ ಹಾಳುಮಾಡಲು ಮನುಷ್ಯರು ನಡೆಸಿದ ವ್ಯವಸ್ಥಿತ ಹುನ್ನಾರ ಇದಾಗಿದೆ ಎಂದು ಖೇದ ವ್ಯಕ್ತಪಡಿಸಿದರು.ವೇದಮೂರ್ತಿ ಪ್ರಶಾಂತ್ ಉಡುಪ ಅವರ ನೇತೃತ್ವದಲ್ಲಿ ಕೃಷ್ಣಾರಾಧನೆ ನಡೆಯಿತು.ಕಾರ್ಯಕ್ರಮದಲ್ಲಿ ಮಾಡೂರು ಶ್ರೀ ಅಯ್ಯಪ್ಪ ಮಂದಿರದ ಅಧ್ಯಕ್ಷ ಶ್ರೀಧರ್ ಶೆಟ್ಟಿ, ಬೆಲ್ಮ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ವಿಜಯ ಕೃಷ್ಣಪ್ಪ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹರೀಶ್ ಕುಮಾರ್, ಗುತ್ತಿಗೆದಾರ ಆನಂದ ಕೊಂಡಾಣ, ನಿವೃತ್ತ ಪೊಲೀಸ್ ಅಧಿಕಾರಿ ಕೆ.ಕೆ. ಗಟ್ಟಿ, ಮುದ್ದುಕೃಷ್ಣ ಉತ್ಸವ ಸಮಿತಿ ಅಧ್ಯಕ್ಷ ಜೀವನ್ ಕೆ.ಪಿ. ಮಾಡೂರು, ಪ್ರಧಾನ ಕಾರ್ಯದರ್ಶಿ ವಸಂತ್ ಕೋಡಿ ಮಂಜನಾಡಿ, ಸಮರ್ಪಣಾ ಪರಿವಾರ ಟ್ರಸ್ಟ್ ಉಪಾಧ್ಯಕ್ಷರಾದ ಎ.ಕೆ. ಬಾಬು ಹಾಗೂ ವಸಂತ ರೈ ಬಿ.ಕೆ., ಕೋಶಾಧಿಕಾರಿ ರಾಮಚಂದ್ರ ಆಚಾರ್ಯ ದೇರಳಕಟ್ಟೆ, ಮಹಿಳಾ ಘಟಕದ ಅಧ್ಯಕ್ಷೆ ಲತಾ ಶೆಟ್ಟಿ, ಸ್ಪರ್ಧಾ ಕಾರ್ಯಕ್ರಮದ ಪ್ರಧಾನ ಸಂಚಾಲಕರಾದ ಕುಸುಮ ಪ್ರಶಾಂತ್, ಸೌಮ್ಯ ಶಿರ್ಲಾಲ್ ಮೊದಲಾದವರು ಉಪಸ್ಥಿತರಿದ್ದರು.ಸಮರ್ಪಣಾ ಪರಿವಾರ ಟ್ರಸ್ಟ್ ಅಧ್ಯಕ್ಷ ಮೋಹನ್ ಶಿರ್ಲಾಲ್ ಸ್ವಾಗತಿಸಿದರು. ವಸಂತ್ ಕೋಡಿ ವಂದಿಸಿದರು. ಜಗನ್ನಾಥ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.