ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣಕಳೆದ 15 ವರ್ಷಗಳಿಂದ ಗ್ರಾಮಸ್ಥರ ಬಹಿಷ್ಕಾರದಿಂದ ಕೆ.ಜೆ. ವೆಂಕಟರಾಮ್ ಕುಟುಂಬ ನರಕಯಾತನೆ ಅನುಭವಿಸುತ್ತ ಬದುಕು ಸವೆಸುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು ಮಾನವ ಕುಲವೇ ತಲೆ ತಗ್ಗಿಸುವಂತಹ ಹೇಯ ಕೃತ್ಯ ಇದಾಗಿದೆ. ಇದರಿಂದಾಗಿ ಕೆ.ಜೆ. ವೆಂಕಟರಾಮ್ ಅವರ ಕುಟುಂಬವೇ ಜರ್ಜರಿತವಾಗಿದೆ. ಇವರದು ಅರಣ್ಯ ರೋದನವಾಗಿದೆ. ಹಲವು ಬಾರಿ ಜಿಲ್ಲಾಧಿಕಾರಿ, ತಹಸಿಲ್ದಾರ್, ಪೊಲೀಸ್ ವೃತ್ತ ನಿರೀಕ್ಷಕರಿಗೆ ದೂರು ನೀಡಿದರಾದರು, ಯಾವುದೇ ಪ್ರಯೋಜನವಾಗಿಲ್ಲ.ತೀರ ಕಡು ಬಡವರಾಗಿರುವುದೆ ಇವರಿಗೆ ಶಾಪವಾಗಿದೆ. ಈ ಕುರಿತಾಗಿ ಶಾಸಕರಿಗೆ ಹಲವಾರು ಬಾರಿ ಅಳಲು ತೋಡಿಕೊಂಡರಾದರೂ ಯಾವುದೇ ಪ್ರಯೋಜನವಾಗಿಲ್ಲ. ಉಳ್ಳವರಿಗೆ ಎಲ್ಲರ ಸಹಕಾರವಿದೆ ಆದರೆ ನಮ್ಮಂತಹ ಬಡವರಿಗೆ ಆ ದೇವರು ಕೂಡ ಸಹಾಯ ಮಾಡಲಾರ ಎಂದು ಅವರು ಅವಲತ್ತುಕೊಳ್ಳುತ್ತಾರೆ.15 ವರ್ಷಗಳ ಹಿಂದೆ 20/15 ಕುಂಟೆ ತಮ್ಮ ಸ್ವಂತ ಜಾಗದಲ್ಲಿ ಗ್ರಾಮದ ಕೆಲವರು ಇವರು ಕಟ್ಟಿದ ಮನೆಯನ್ನು ತೆರವು ಮಾಡಿ ಆಕ್ರಮಿಸಿಕೊಂಡರು. ಇದನ್ನು ಕೇಳಲು ಹೋoei ಇವರ ಮೇಲೆ ಬಹಿಷ್ಕಾರ ಹಾಕಿದರು. ಗ್ರಾಮದಲ್ಲಿ ಇವರನ್ನು ಯಾರು ಕೂಡ ಮಾತನಾಡಿಸುವ ಹಾಗಿಲ್ಲ. ಯಾರು ಕೂಡ ಇವರ ಜಮೀನಿಗೆ ಕೆಲಸಕ್ಕೆ ಹೋಗುವಂತಿಲ್ಲ ಎಂದು ನಿರ್ಬಂಧ ವಿಧಿಸಿದರು.ಅಂದಿನಿಂದ ಇಂದಿನವರೆಗೂ ಬಹಿಷ್ಕಾರದಲ್ಲೇ ಜೀವನ ಸಾಗಿಸುತ್ತಿರುವ ಇವರ ಕುಟುಂಬ ಈಗ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. 10x40 ಅಡಿಯ ತಮ್ಮ ಜಾಗವನ್ನು ಮನೆಗೆ ಸೇರಿದ ಒಂದು ಭಾಗವನ್ನು ಕೆಡವಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದು, ಇದನ್ನು ತಡೆಯಲು ಹೋದ ಕೆ.ಜೆ ವೆಂಕಟರಾಮ್ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿದ್ದಾರೆ.ಗ್ರಾಮಸ್ಥರ ಜೀವ ಬೆದರಿಕೆಗೆ ನಿಸ್ಸಾಯಕರಾಗಿದ್ದಾರೆ. ಅದೇ ಜಾಗದಲ್ಲಿ ಕೆಲ ಯುವಕರು ಮನೆ ಭಾಗವನ್ನು ಧ್ವಂಸ ಮಾಡಿದ್ದಾರೆ. ಅವರಿಗೆ ತಿರುಗಾಡಲು ದೊಡ್ಡದಾದ ಸರ್ಕಾರಿ ರಸ್ತೆ ಇದ್ದರೂ ನಮ್ಮ ಮನೆಯ ಜಾಗ ಏತಕ್ಕೆ ಬೇಕು ಎಂದು ವೆಂಕಟರಾಮ್ ಅವರು ಪ್ರಶ್ನಿಸಿದ್ದಾರೆ. ಆದರೆ ಇವರ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ.ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಪಿಡಿಒ ಸೇರಿ ಎಲ್ಲರೂ ಸೇರಿಕೊಂಡು ಇವರ ಮೇಲೆ ಹಾಗೂ ಕುಟುಂಬದವರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಈ ಕುರಿತು ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದೇನೆ ಹಾಗೂ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ವೆಂಕಟರಾಮ್ ತಿಳಿಸಿದ್ದಾರೆ.ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ನಮ್ಮ ಬಹಿಷ್ಕಾರವನ್ನು ಹಿಂಪಡೆಯುವಂತೆ ಮಾಡಬೇಕು ಹಾಗೂ ಎಲ್ಲರಂತೆ ನಾವು ಕೂಡ ಈ ಸಮಾಜದಲ್ಲಿ ಸಮಾನತೆಯಿಂದ ಬದುಕುವಂತೆ ಮಾಡಬೇಕು. ಆ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕು ಎಂದು ಅವರು ಕೋರಿದ್ದಾರೆ.