ಶಾಸಕರ ಬಹಿರಂಗ ಕಾದಾಟಕ್ಕೆ ವೇದಿಕೆಯಾದ ಕೋಮುಲ್ ವಿಶೇಷ ಸಾಮಾನ್ಯ ಸಭೆ

KannadaprabhaNewsNetwork | Published : Mar 14, 2025 12:34 AM

ಸಾರಾಂಶ

ಕೋಮುಲ್ ಕ್ಷೇತ್ರ ವಿಗಂಡಣೆಗೆ ಅನುಮೋದನೆ ಕೊಡುವ ವಿಷಯದಲ್ಲಿ ಕಾಂಗ್ರೆಸ್ ಶಾಸಕರ ನಡುವೆ ವೇದಿಕೆಯ ಮುಂಭಾಗದಲ್ಲಿಯೇ ಬಹಿರಂಗ ಗುದ್ದಾಟಕ್ಕೆ ವಿಶೇಷ ಸಾಮಾನ್ಯ ಸಭೆ ಸಾಕ್ಷಿಯಾಯಿತು.

ಕನ್ನಡಪ್ರಭ ವಾರ್ತೆ ಕೋಲಾರ

ಕೋಮುಲ್ ಕ್ಷೇತ್ರ ವಿಗಂಡಣೆಗೆ ಅನುಮೋದನೆ ಕೊಡುವ ವಿಷಯದಲ್ಲಿ ಕಾಂಗ್ರೆಸ್ ಶಾಸಕರ ನಡುವೆ ವೇದಿಕೆಯ ಮುಂಭಾಗದಲ್ಲಿಯೇ ಬಹಿರಂಗ ಗುದ್ದಾಟಕ್ಕೆ ವಿಶೇಷ ಸಾಮಾನ್ಯ ಸಭೆ ಸಾಕ್ಷಿಯಾಯಿತು. ಇದೇ ವೇಳೆ ಅಧಿಕಾರಿಗಳೊಂದಿಗೆ ತಳ್ಳಾಟ ನೂಕಾಟ , ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು, ನಂತರ ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಯಾಯಿತು, ಎಂಡಿ ಗೋಪಾಲಮೂರ್ತಿ ಅವರು ಖಾಸಗಿ ಹಾಗೂ ಪೊಲೀಸ್ ಭದ್ರತೆಯೊಂದಿಗೆ ಸಭೆಯಿಂದ ಹೊರನಡೆದರು.

ನಗರದ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಗುರುವಾರ ಬೆಳಗ್ಗೆ ೧೧.೩೦ಕ್ಕೆ ಕೋಮುಲ್ ಆಡಳಿತಾಧಿಕಾರಿ ಡಾ.ಮೈತ್ರಿ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಭೆಗೆ ಕಾಂಗ್ರೆಸ್ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ ಸೇರಿದಂತೆ ಎಪಿಸಿಎಸ್ ಅಧ್ಯಕ್ಷರು ಹಾಗೂ ಡೇಲಿಗೇಟ್ಸ್ ಆಗಮಿಸಿದ್ದರು. ಸಭೆ ಪ್ರಾರಂಭಿಸುತ್ತಿದ್ದಂತೆ ಕ್ಷೇತ್ರ ವಿಂಗಡಣೆ ವಿಚಾರದಲ್ಲಿ ಅನುಮೋದನೆಗೆ ಕೇಳಿದಾಗ ಸಭೆಯಲ್ಲಿ ಕೆಲವರ ವಿರೋಧದ ನಡುವೆಯೂ ಬಹುತೇಕರು ಅನುಮೋದನೆ ಬೆಂಬಲಿಸಿದರು.

ಕೋಮುಲ್ ಚುನಾವಣೆಗೆ ಕ್ಷೇತ್ರಗಳನ್ನು ನಿಗದಿಪಡಿಸಲು ಹೈಕೋರ್ಟ್ ಸೂಚನೆಯಂತೆ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಮತ್ತು ಕೆ.ವೈ ನಂಜೇಗೌಡ ಅವರ ಪ್ರತಿಷ್ಠೆಯ ಕಣವಾಗಿತ್ತು, ಇಬ್ಬರೂ ಶಾಸಕರು ತಮ್ಮ ತಮ್ಮ ಬೆಂಬಲಿಗರ ಪಡೆಯೊಂದಿಗೆ ಪ್ರತ್ಯೇಕವಾದ ಆಸನಗಳಲ್ಲಿ ಕುಳಿತಿದ್ದರು.

ಕೋಮುಲ್ ಆಡಳಿತಾಧಿಕಾರಿ ಡಾ.ಮೈತ್ರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಹೈಕೋರ್ಟ್ ಆದೇಶದಂತೆ ೧೨(೫) ನಡಿ ಕ್ಷೇತ್ರ ವಿಂಗಡಣೆಯ ಅನುಮೋದನೆಗೆ ಸಹಕಾರ ಕೋರಿದ ಸಂದರ್ಭದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಅವರ ಬೆಂಬಲಿಗ ಎಂಪಿಸಿಎಸ್ ಅಧ್ಯಕ್ಷರು ತೀವ್ರ ವಿರೋಧ ವ್ಯಕ್ತಪಡಿಸಿ, ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯ ಮಾಡಿದರು.ಆದರೆ, ಸಭೆಯಲ್ಲಿ ಬಹುತೇಕರು ಕೈಎತ್ತುವುದರ ಮೂಲಕ ಮೂರನೇ ಎರಡರಷ್ಟು ಮತಗಳು ಪರವಾಗಿ ಬಿದ್ದಿವೆ ಎಂದು ಆಡಳಿತಾಧಿಕಾರಿ ಡಾ.ಮೈತ್ರಿ ಪ್ರಕಟಿಸಿದರು.

ಸಭೆಯಲ್ಲಿ ಅನುಮೋದನೆಗೆ ಒಪ್ಪಿಗೆ ಸಿಕ್ಕಿದ ಕೂಡಲೇ ಶಾಸಕ ಕೆ.ವೈ.ನಂಜೇಗೌಡ ಬೆಂಬಲಿಗರು ಖುಷಿಯಿಂದ ಜೈಕಾರಗಳೊಂದಿಗೆ ಹೊರನಡೆದರು. ಶಾಸಕ ಎಸ್.ಎನ್ ನಾರಾಯಣಸ್ವಾಮಿ ಬೆಂಬಲಿಗರು ಆಡಳಿತಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಕೋಮುಲ್ ಎಂಡಿ ಗೋಪಾಲಮೂರ್ತಿ ಹಾಗೂ ಮಾರುಕಟ್ಟೆ ವಿಭಾಗದ ಅಧಿಕಾರಿ ಚೇತನ್ ಅವರ ಮೇಲೆ ಹಲ್ಲೆಗೆ ಯತ್ನಿಸಿದರು. ಹಲ್ಲೆಯ ನಂತರ ಇತರೆ ಅಧಿಕಾರಿಗಳು ಎಂಡಿಯನ್ನು ಕೊಠಡಿಯಲ್ಲಿ ಇರಿಸಿ ರಕ್ಷಣೆ ಮಾಡಿದರು.

------

ಕೋಲಾರ ಜಿಲ್ಲೆಯ ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಕ್ಷೇತ್ರ ವಿಂಗಡಣೆಗೆ ಡೇರಿ ಅಧ್ಯಕ್ಷರ ಸಹಕಾರದಿಂದ ಅನುಮೋದನೆ ಸಿಕ್ಕಿದೆ, ಆದರೆ ಕೆಲವರು ದುರುದ್ದೇಶದಿಂದ ವಿಶೇಷ ಸಾಮಾನ್ಯ ಸಭೆಯಲ್ಲಿ ಗೊಂದಲ ಸೃಷ್ಟಿ ಮಾಡಿ ಕೋರಂ ಕೊರತೆ ಇಲ್ಲದಂತೆ ಮಾಡಲು ಮುಂದಾಗಿದ್ದರು. ಈ ಅನುಮೋದನೆ ಕಾನೂನು ವ್ಯಾಪ್ತಿಯಲ್ಲಿ ನಡೆದಿದೆ, ಚುನಾವಣೆ ನಡೆಸುವ ಅಧಿಕಾರ ಅಧಿಕಾರಿಗಳಿಗಿದೆ. ಮುಂದಿನ ಮೂರು ತಿಂಗಳೊಳಗೆ ಹೊಸ ಆಡಳಿತ ಮಂಡಳಿ ಬರಲಿದೆ.

- ಕೆ.ವೈ ನಂಜೇಗೌಡ, ಶಾಸಕ ಹಾಗೂ ಕೋಚಿಮುಲ್ ಮಾಜಿ ಅಧ್ಯಕ್ಷ.

------

ಕೋಮುಲ್ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಒತ್ತಡ ತಂದು ಕೆಲವರು ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ. ಇವತ್ತು ಅನುಮೋದನೆ ಸರಿಯಾದ ರೀತಿಯಲ್ಲಿ ನಡೆದಿಲ್ಲ, ಸಭೆಯ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಜೊತೆಗೆ ಕೋರ್ಟ್ ಮೊರೆ ಹೋಗುತ್ತೇವೆ.

- ಎಸ್.ಎನ್.ನಾರಾಯಣಸ್ವಾಮಿ, ಬಂಗಾರಪೇಟೆ ಶಾಸಕ.

Share this article