ಕೊಪ್ಪ: ನಾರ್ವೆ ಶ್ರೀ ಚಂಡಿಕೇಶ್ವರಿ ದೇವಾಲಯದ ಶಾಸನ ಮರು ಅಧ್ಯಯನ

KannadaprabhaNewsNetwork |  
Published : Jan 23, 2026, 02:00 AM IST
ನಾರ್ವೆ ಶ್ರೀ ಚಂಡಿಕೇಶ್ವರಿ ದೇವಾಲಯದಲ್ಲಿನ ಶಾಸನ | Kannada Prabha

ಸಾರಾಂಶ

ಕೊಪ್ಪ ಕೊಪ್ಪ ತಾಲೂಕಿನ ನರಸೀಪುರ ಗ್ರಾಪಂ ವ್ಯಾಪ್ತಿಯ ಶ್ರೀ ಚಂಡಿಕೇಶ್ವರಿ ದೇವಾಲಯದ ಹೊರ ಆವರಣ ಶಾಸನ ಸಹಿತ ಸ್ಮಾರಕಶಿಲೆಯನ್ನು ದೇವಾಲಯದ ಆಡಳಿತ ಮಂಡಳಿ ಮನವಿ ಮೇರೆಗೆ, ಕುವೆಂಪು ವಿಶ್ವವಿದ್ಯಾನಿಲಯ ವಸ್ತುಸಂಗ್ರಹಾಲಯದ ಕ್ಯುರೇಟರ್ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಮಾರ್ಗ ದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ್ ಕಲ್ಕೆರೆ ಮರು ಅಧ್ಯಯನಕ್ಕೆ ಒಳಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪ

ಕೊಪ್ಪ ತಾಲೂಕಿನ ನರಸೀಪುರ ಗ್ರಾಪಂ ವ್ಯಾಪ್ತಿಯ ಶ್ರೀ ಚಂಡಿಕೇಶ್ವರಿ ದೇವಾಲಯದ ಹೊರ ಆವರಣ ಶಾಸನ ಸಹಿತ ಸ್ಮಾರಕಶಿಲೆಯನ್ನು ದೇವಾಲಯದ ಆಡಳಿತ ಮಂಡಳಿ ಮನವಿ ಮೇರೆಗೆ, ಕುವೆಂಪು ವಿಶ್ವವಿದ್ಯಾನಿಲಯ ವಸ್ತುಸಂಗ್ರಹಾಲಯದ ಕ್ಯುರೇಟರ್ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಮಾರ್ಗ ದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ್ ಕಲ್ಕೆರೆ ಮರು ಅಧ್ಯಯನಕ್ಕೆ ಒಳಪಡಿಸಿದ್ದಾರೆ.ಈ ಶಾಸನ ಸಹಿತ ಸ್ಮಾರಕ ಶಿಲೆ ಮಾಹಿತಿಯನ್ನು ಎಪಿಗ್ರಾಫಿಯ ಕರ್ನಾಟಿಕ, ಸಂಪುಟ-೧೨ರಲ್ಲಿ ಪ್ರಕಟ ಮಾಡಿದ್ದರು ಸಹ ಪ್ರಸ್ತುತ ಅಧ್ಯಯನದಿಂದ ಹೆಚ್ಚಿನ ಮಾಹಿತಿಗಳು ಬೆಳಕಿಗೆ ಬಂದಿದೆ. ಕೊಪ್ಪ ತಾಲೂಕಿನ ಇತಿಹಾಸಕ್ಕೆ ಹೊಸ ವಿಚಾರಗಳು ಸೇರ್ಪಡೆಗೊಂಡಿದೆ ಎಂದು ಸಂಶೋಧನಾರ್ಥಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲಿನ ಅಧ್ಯಯನದಲ್ಲಿ ಶಾಸನದಲ್ಲಿ ಗಂಗೆಮ್ಬ, ಭೀರವೂರ, ಕಲಿಮರ ಈ ಪದಗಳ ಉಲ್ಲೇಖವಿದ್ದು ಇದೊಂದು ರಕ್ತ ಶಿಲಾಶಾಸನ ಎಂದು ಹೇಳಲಾಗಿತ್ತು. ಆದರೆ ಮರು ಅಧ್ಯಯನದಿಂದ ಈ ಶಾಸನ ಸಹಿತ ಸ್ಮಾರಕಶಿಲೆ ‘ಸಿಡಿತಲೆ ಕಲ್ಲು’ ಎಂದು ಕಂಡುಬಂದಿದೆ. ಅಂದರೆ ಒಬ್ಬ ವೀರನು ರಾಜ/ರಾಜ್ಯ ಕ್ಕಾಗಿ ತನ್ನ ಸ್ವಇಚ್ಛೆಯಿಂದ ಶಿರ ಕಡಿದು ಪ್ರಾಣ ತ್ಯಾಗ ಮಾಡಿರುವುದು. ಇದನ್ನು ಬೇರೆ ಬೇರೆ ರೂಪ ದಲ್ಲಿಯೂ ತೋರಿಸಿರುತ್ತಾರೆ. ಪ್ರಸ್ತುತ ಇಲ್ಲಿನ ಸಿಡಿತಲೆ ಸ್ಮಾರಕ ಶಿಲೆ ಸುಮಾರು 3.5 ಅಡಿ ಎತ್ತರ ಹಾಗೂ 2 ಅಡಿ ಅಗಲ ಹೊಂದಿದ್ದು, ೮ನೇ ಶತಮಾನ ದ ಅಂದರೆ ರಾಷ್ಟ್ರಕೂಟರ ಕಾಲದ ಕನ್ನಡ ಲಿಪಿಯನ್ನು ಶಾಸನ ಒಳಗೊಂಡಿದೆ. ಹಾಗಾಗಿ ಈ ಪ್ರದೇಶದಲ್ಲಿ ರಾಷ್ಟ್ರಕೂಟರ ಸಮಕಾಲೀನ ರಾಜವಂಶ/ಸಾಮಂತ ಅರಸರು ಆಳ್ವಿಕೆ ಮಾಡಿರುವುದು ದೃಢಪಡುತ್ತದೆ.ಸ್ವಸ್ತಿಶ್ರೀ ಎಂಬ ಶುಭಸೂಚಕದಿಂದ ಪ್ರಾರಂಭವಾಗುವ ಈ ಶಾಸನಸಹಿತ ಸಿಡಿತಲೆ ಸ್ಮಾರಕ ಶಿಲೆ, ದೇವರ ರೂಪವಾದ ಅರಸರಿಗೆ/ ದೇವತಿ ಅರಸರಿಗೆ ‘ಗಂಗ’ ಎಂಬ ವೀರನು, ತನ್ನ ಶಿರವನ್ನು ಸ್ವ-ಇಚ್ಛೆಯಿಂದ ಊರ ಭಟರ ಮುಂದೆ ಹರಕೆ ರೂಪದಲ್ಲಿ ಸಮರ್ಪಿಸಿದ್ದು, ಈತ ಮಾಡಿದ ಈ ಬಲಿದಾನದ ನೆನಪು ಅಜರಾಮರವಾಗಿರಲೆಂದು ಕಲಿಮರರು ಅಂದರೆ ಯುದ್ಧಕಲೆ ಪಾಂಡಿತ್ಯ ಬಲ್ಲವರು/ ಈತನ ಪರಿವಾರ ದವರೇ ವೀರನ (ಗಂಗನ) ಮೂರ್ತಿಯನ್ನು ಕೆತ್ತಿಸಿ, ಅದರಲ್ಲಿ ಶಾಸನ ಬರೆಸಿ ಇಲ್ಲಿ ನೆಟ್ಟರು ಎಂದು ತಿಳಿಸುತ್ತದೆ.ಈ ಸ್ಮಾರಕ ಶಿಲೆ ಮೇಲ್ಭಾಗದ ಪಟ್ಟಿಕೆಯಲ್ಲಿ ಶಿರವನ್ನು ಹರಕೆ ರೂಪದಲ್ಲಿ ಕೊಟ್ಟಂತ ವೀರ ಗಂಗನು ಇಹಲೋಕದಿಂದ ಪರಲೋಕಕ್ಕೆ ಸೇರಿದ ಎಂಬುದನ್ನು ಸಾಂಕೇತಿಕವಾಗಿ ಮಂಟಪದಲ್ಲಿ ಕುಳಿತಿರುವಂತೆ ತೋರಿಸಲಾಗಿದೆ.ದೇವಾಲಯ ಹೊರ ಆವರಣದಲ್ಲಿ ಸ್ಥಳೀಯರು ‘ಸಿಡಿಕಟ್ಟೆ’ ಎಂದು ಕರೆಯುವ ಕಲ್ಲಿನಿಂದ ನಿರ್ಮಾಣ ಮಾಡಿದ ಒಂದು ವೃತ್ತಾಕಾರದ ಕಟ್ಟೆಯಿದ್ದು, ಇಲ್ಲಿ ವೀರನಾದ ಗಂಗನು ಶಿರವನ್ನು ಕೊಟ್ಟಿರಬಹುದೆಂದು ಅಥವಾ ಆತ ಶಿರವನ್ನು ಕೊಟ್ಟ ಜಾಗದಲ್ಲಿ ನಂತರದಲ್ಲಿ ಈ ಕಟ್ಟೆ ಕಟ್ಟಿಸಿರಬಹುದೆಂದು ಊಹಿಸಬಹುದು. ಇಲ್ಲಿರುವ ಸ್ಮಾರಕ ಶಿಲೆಯನ್ನು ದೇವಾಲಯದ ಆಡಳಿತ ಮಂಡಳಿಯವರು/ ಅರ್ಚಕರು/ ಸ್ಥಳೀಯರು ಗಂಧ-ಪುಷ್ಪ, ಎಣ್ಣೆ-ಧೂಪದಿಗಳಿಂದ ಪೂಜಿಸಿ, ಸಂರಕ್ಷಿಸಿಕೊಂಡು ಬಂದಿರುವುದು ಶ್ಲಾಘನೀಯ.ಈ ಶಾಸನಸಹಿತ ಸ್ಮಾರಕಶಿಲೆ ಮರುಅಧ್ಯಯನದಲ್ಲಿ ಕಿಶನ್ ಕುಮಾರ್, ಶ್ರೇಯಾ ಶ್ರುತೇಶ್ ಆಚಾರ್ಯ ಹಾಗೂ ಆಶ್ಲೇಷ್ ಆಚಾರ್ಯ ಮೂಡುಬೆಳ್ಳೆ ಹಾಗೂ ದೇವಾಲಯದ ಆಡಳಿತ ಮಂಡಳಿ ಮತ್ತು ಸ್ಥಳೀಯರು ಸಹಕಾರ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ
ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ