ಕೊಪ್ಪಳದ ಹಿಂಡು ದನಗಳಿಗೆ ತಳಿ ಮಾನ್ಯತೆ

KannadaprabhaNewsNetwork |  
Published : Aug 21, 2026, 03:15 AM IST
20ಕೆಕೆಆರ್8:ಕೊಪ್ಪಳದ ಹಿಂಡು ದನ | Kannada Prabha

ಸಾರಾಂಶ

ತಲೆತಲಾಂತರಗಳಿಂದ ಸಂರಕ್ಷಿಸಲ್ಪಟ್ಟ ವಿಶಿಷ್ಟ ಜಾನುವಾರು ತಳಿಗೆ ಇದೀಗ ವೈಜ್ಞಾನಿಕ ಹಾಗೂ ಅಧಿಕೃತ ತಳಿ ಮಾನ್ಯತೆ ದೊರೆತಿರುವುದು ಹೆಮ್ಮೆಯ ವಿಚಾರ

ಕೊಪ್ಪಳ: ಜಿಲ್ಲೆಯ ಹಿಂಡು ದನಗಳಿಗೆ ತಳಿ ಮಾನ್ಯತೆ ದೊರೆತಿದೆ. ಜಾನುವಾರು ತಳಿ ಮಾನ್ಯತೆ ಸಂಶೋಧನೆಯಲ್ಲಿ ತೊಡಗಿಸಿಕೊಂಡ ವಿಜ್ಞಾನಿ, ಜಿಲ್ಲೆಯ ಪಶುಪಾಲಕರು ಹಾಗೂ ರೈತ ಸಮುದಾಯದಿಂದ ಹಾಗೂ ಜಿಲ್ಲೆ ರಾಜ್ಯಕ್ಕೆ ಹೆಮ್ಮೆ ನೀಡಿದೆ.

ಜಾನುವಾರುಗಳ ಕುರಿತು ಆನುವಂಶಿಕ ಗುಣಲಕ್ಷಣ ಅಧ್ಯಯನ, ಸಂರಕ್ಷಣೆ, ತಳಿ ಅಭಿವೃದ್ಧಿ, ಉತ್ಪಾದನಾ ಸಾಮರ್ಥ್ಯ, ಸಂತಾನೋತ್ಪತ್ತಿ ಹಾಗೂ ಸುಸ್ಥಿರ ಬಳಕೆಯ ಕುರಿತು ಹೆಚ್ಚಿನ ಸಂಶೋಧನೆ ನಡೆಸಲು ಈ ಮಾನ್ಯತೆ ಮಹತ್ವದ ವೈಜ್ಞಾನಿಕ ವೇದಿಕೆ ಒದಗಿಸಲಿದೆ. ಈ ತಳಿಗೆ ಸಂಬಂಧಿಸಿದಂತೆ ಮುಂದಿನ ವೈಜ್ಞಾನಿಕ ಬೆಳವಣಿಗೆಗಳಲ್ಲಿ ಕೊಪ್ಪಳ ಜಿಲ್ಲಾಡಳಿತ ಮತ್ತು ಪಶುಸಂಗೋಪನೆ ಇಲಾಖೆ ಕಾರ್ಯತತ್ಪರವಾಗಲಿದೆ.

ಐಸಿಎಆರ್-ರಾಷ್ಟ್ರೀಯ ಪ್ರಾಣಿ ತಳಿ ಸಂಪನ್ಮೂಲಗಳ ಬ್ಯೂರೋ, ಕರ್ನಾಲ್ ವತಿಯಿಂದ 2026 ಆ.7ರಂದು ಜರುಗಿದ ತಳಿ ನೋಂದಣಿ ಸಭೆಯಲ್ಲಿ ಕೊಪ್ಪಳ ಜಾನುವಾರುಗಳಿಗೆ ತಳಿ ಮಾನ್ಯತೆ ನೀಡಿದೆ. ತಲೆತಲಾಂತರಗಳಿಂದ ಸಂರಕ್ಷಿಸಲ್ಪಟ್ಟ ವಿಶಿಷ್ಟ ಜಾನುವಾರು ತಳಿಗೆ ಇದೀಗ ವೈಜ್ಞಾನಿಕ ಹಾಗೂ ಅಧಿಕೃತ ತಳಿ ಮಾನ್ಯತೆ ದೊರೆತಿರುವುದು ಹೆಮ್ಮೆಯ ವಿಚಾರ. ಈ ಮಾನ್ಯತೆಯು ಕಳೆದ ಸುಮಾರು ಐದು ವರ್ಷಗಳಿಂದ ಕೈಗೊಂಡ ನಿರಂತರ ವೈಜ್ಞಾನಿಕ ಸಂಶೋಧನೆ, ಕ್ಷೇತ್ರ ಸಮೀಕ್ಷೆ, ದೈಹಿಕ ಲಕ್ಷಣ ಅಧ್ಯಯನ, ದಾಖಲಾತಿ, ನಿರ್ವಹಣಾ ಪದ್ಧತಿಗಳ ಅಧ್ಯಯನ ಹಾಗೂ ವೈಜ್ಞಾನಿಕ ಮೌಲ್ಯಮಾಪನದ ಫಲವಾಗಿದೆ. ಬೀದರನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಯತ್ನದಿಂದ ಕರ್ನಾಟಕದ ಪಶು ವೈದ್ಯಕೀಯ ಕ್ಷೇತ್ರಕ್ಕೆ ಹೆಮ್ಮೆಯ ಕ್ಷಣ ಲಭಿಸಿದೆ. ಕರ್ನಾಟಕದ ವಿಶಿಷ್ಟ ಕೊಪ್ಪಳ ಜಾನುವಾರುಗಳಿಗೆ ಅಧಿಕೃತ ಜಾನುವಾರು ತಳಿಯ ಮಾನ್ಯತೆ ದೊರೆತಿದೆ. ಈ ಕಾರ್ಯ ರಾಷ್ಟ್ರೀಯ ಪ್ರಾಣಿ ತಳಿ ಸಂಪನ್ಮೂಲಗಳ ಬ್ಯೂರೋ, ಕರ್ನಾಲ್ ಸಹಯೋಗ ಮತ್ತು ಸಂಶೋಧನಾ ನೆರವಿನೊಂದಿಗೆ ಕೈಗೊಳ್ಳಲಾಗಿದ್ದು, ಹಲವು ವರ್ಷಗಳ ಕಾಲ ಕೊಪ್ಪಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಕ್ಷೇತ್ರ ಅಧ್ಯಯನ ನಡೆಸಿ ಈ ಜಾನುವಾರುಗಳ ವಿತರಣಾ ವ್ಯಾಪ್ತಿ, ದೈಹಿಕ ಲಕ್ಷಣ, ನಿರ್ವಹಣಾ ಪದ್ಧತಿ, ಬಳಕೆ, ಹೊಂದಾಣಿಕೆ ಹಾಗೂ ವಿಶಿಷ್ಟ ಗುಣಲಕ್ಷಣ ವೈಜ್ಞಾನಿಕವಾಗಿ ದಾಖಲಿಸಲಾಗಿದೆ.

ಏಳನೇ ಮಾನ್ಯತೆ ಪಡೆದ ಜಾನುವಾರು ತಳಿ:ಕೊಪ್ಪಳ ಜಾನುವಾರುಗಳಿಗೆ ದೊರೆತಿರುವ ಈ ಮಾನ್ಯತೆಯೊಂದಿಗೆ ಕರ್ನಾಟಕವು ಅಧಿಕೃತವಾಗಿ ಗುರುತಿಸಲ್ಪಟ್ಟ ಏಳು ಪ್ರಮುಖ ಜಾನುವಾರು ತಳಿ ಹೊಂದಿದಂತಾಗಿದೆ. ಅಮೃತಮಹಲ್, ಹಳ್ಳಿಕಾರ್, ಖಿಲ್ಲಾರ್, ದೇವಣಿ, ಮಲನಾಡಗಿಡ್ಡ, ಕೃಷ್ಣವೇಣಿ. ಇವುಗಳಲ್ಲಿ ಕೃಷ್ಣವೇಣಿ ಜಾನುವಾರು ತಳಿ ಈಗ ಅಳಿವಿನಂಚಿನಲ್ಲಿರುವ/ ಅಳಿದುಹೋದ ತಳಿಯಾಗಿ ಪರಿಗಣಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಾನುವಾರು ಅಧಿಕೃತ ಮಾನ್ಯತೆ ಕರ್ನಾಟಕದ ಸ್ಥಳೀಯ ಜಾನುವಾರು ಆನುವಂಶಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ವೈಜ್ಞಾನಿಕ ದಾಖಲಾತಿಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.

ಜಿಲ್ಲೆಯ ಜಾನುವಾರುಗಳು ಮಧ್ಯಮ ಗಾತ್ರದ ದೇಹ ಹೊಂದಿದ್ದು, ಸಾಮಾನ್ಯವಾಗಿ ಬಿಳಿ ಬಣ್ಣದ ಮೈಬಣ್ಣ ಹೊಂದಿರುತ್ತವೆ. ದೇಹದ ಮೇಲೆ ಕೆಲವೊಮ್ಮೆ ಸ್ವಲ್ಪ ಕಂದು ಛಾಯೆ ಕಂಡುಬರುತ್ತದೆ.

ಜಿಲ್ಲೆಯ ಹಿಂಡು ದನಗಳಿಗೆ ತಳಿ ಮಾನ್ಯತೆ ದೊರೆತಿರುವುದು ಅತ್ಯಂತ ಖುಷಿಯ ವಿಚಾರವಾಗಿದೆ. ಈ ತಳಿಗೆ ಸಂಬಂಧಿಸಿದಂತೆ ಮುಂದಿನ ವೈಜ್ಞಾನಿಕ ಬೆಳವಣಿಗೆಗಳಲ್ಲಿ ಜಿಲ್ಲಾಡಳಿತ ಮತ್ತು ಪಶುಸಂಗೋಪನೆ ಇಲಾಖೆ ಕಾರ್ಯತತ್ಪರವಾಗುತ್ತದೆ. ಈ ತಳಿಯ ಅಭಿವೃದ್ಧಿಗೆ ಜಿಲ್ಲಾಡಳಿತ ಮತ್ತು ಪಶು ಸಂಗೋಪನೆ ಇಲಾಖೆ ಯೋಜನೆ ರೂಪಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ.

ಕೊಪ್ಪಳದ ನೆಲದಲ್ಲಿ ತಲೆತಲಾಂತರಗಳಿಂದ ಸಂರಕ್ಷಿಸಲ್ಪಟ್ಟ ವಿಶಿಷ್ಟ ಜಾನುವಾರು ತಳಿಗೆ ವೈಜ್ಞಾನಿಕ ಹಾಗೂ ಅಧಿಕೃತ ತಳಿ ಮಾನ್ಯತೆ ದೊರೆತಿರುವ ಕಾರ್ಯಕ್ಕೆ ಕೊಪ್ಪಳ ಜಿಲ್ಲಾಧಿಕಾರಿಗಳಿಂದ ಉತ್ತಮ ಮಾರ್ಗದರ್ಶನ ಹಾಗೂ ಸಹಕಾರ ಲಭಿಸಿದೆ. ತಳಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆ ಜಾರಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದು ಕೊಪ್ಪಳ ಪಶುಪಾಲನೆ ಮತ್ತು ಪಶುವೈದ್ಯಸೇವಾ ಇಲಾಖೆ ಉಪ ನಿರ್ದೇಶಕ ಡಾ.ಮಲ್ಲಯ್ಯ ಪಿ.ಎಂ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಸು ಜೀವನವೇ ಒಂದು ಸಂದೇಶ: ರಾಜೇಂದ್ರ
ಶಿರಹಟ್ಟಿ ತಾಲೂಕಿನಲ್ಲಿ ಮುಂಗಾರು ವೈಫಲ್ಯ, ವ್ಯಾಪಾರ‍ವೂ ಥಂಡಾ