ಸೋಮರಡ್ಡಿ ಅಳವಂಡಿ ಕೊಪ್ಪಳ
ಈಗಾಗಲೇ ಕನಕಗಿರಿ ಶಾಸಕ ಶಿವರಾಜ ತಂಗಡಗಿ ಮೂರನೇ ಬಾರಿಗೆ ಶಾಸಕರಾಗಿದ್ದಾರೆ ಮತ್ತು ಮೂರನೇ ಬಾರಿಯೂ ಸಚಿವರಾಗಿದ್ದಾರೆ. ಗೆದ್ದಾಗೆಲ್ಲ ಸಚಿವ ಸ್ಥಾನದ ಭಾಗ್ಯ ದಕ್ಕಿರುವ ಜಿಲ್ಲೆಯ ಮೊದಲ ಶಾಸಕ ಇವರು. ಆದರೆ, ಈಗ ರಾಜ್ಯ ರಾಜಕೀಯದಲ್ಲಿ ಸಿಎಂ ಸಿದ್ದರಾಮಯ್ಯ ಬದಲಾವಣೆ ಚರ್ಚೆ ಬೆನ್ನಲ್ಲೇ ಅವರನ್ನು ಬದಲಾಯಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸಚಿವ ಸಂಪುಟದ ಪುನರ್ ರಚನೆಯಂತೂ ಆಗಿಯೇ ಆಗುತ್ತದೆ ಎನ್ನುವ ನಂಬಿಕೆಯಿಂದ ತೆರೆಮರೆಯಲ್ಲಿ ಭಾರಿ ಕಸರತ್ತು ನಡೆದಿದೆ.
ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಭಾರಿ ಪ್ರಯತ್ನ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಹಿಂದೆಯೂ ಇದೇ ಕಾರಣಕ್ಕಾಗಿಯೇ ದೆಹಲಿಗೆ ಹೋಗಿದ್ದ ಅವರು ಭಾನುವಾರ ದಿಢೀರ್ ದೆಹಲಿಗೆ ಪ್ರವಾಸ ಬೆಳೆಸಿದ್ದಾರೆ. ಅಷ್ಟೇ ಅಲ್ಲ, ಖುದ್ದು ಅವರೇ ಮಾಧ್ಯಮದವರೊಂದಿಗೆ ಮಾತನಾಡುವಾಗ ನಾನೇಕೆ ಸಚಿವನಾಗಬಾರದು? ಸಂಭಾವ್ಯ ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಯಾಕೆ ಸೇರಿಸಿಲ್ಲ? ನೀವು ಪದೇ ಪದೇ ಬರೆದರೆ ನಾನು ಸಚಿವನಾಗುತ್ತೇನೆ ಎಂದೆಲ್ಲ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಚಿವಾಕಾಂಕ್ಷಿಗಳು ಬೆಂಗಳೂರಿನಲ್ಲಿ ಸಭೆ ಸೇರಿದಾಗ ನಾನು ಹೋಗಬೇಕಾಗಿತ್ತು. ಆದರೆ, ಹೋಗಲು ಆಗಿಲ್ಲ. ಆದರೆ, ನಾನು ಅವರ ಜತೆಯಲ್ಲಿಯೇ ಇದ್ದೇನೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.ನಾನು ಮೂರು ಬಾರಿ ಶಾಸಕನಾಗಿದ್ದೇನೆ, ಹಿರಿತನ ಇದೆ. ನಾನಷ್ಟೇ ಅಲ್ಲ, ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿದ್ದಾರೆ. ಅವರು ನಮಗಿಂತಲೂ ಹಿರಿಯರು. ಅವರು ಸಹ ಸಚಿವರಾಗಬೇಕಾಗಿದೆ ಎನ್ನುತ್ತಾರೆ.
ಈ ನಡುವೆ ಯಲಬುರ್ಗಾ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸಹ ಸಚಿವರಾಗುವ ಉತ್ಸಾಹದಲ್ಲಿದ್ದಾರೆ. ಬಹಿರಂಗವಾಗಿಯೇ ಮಾತನಾಡುವಾಗ ನಾನೇನು ಸಚಿವ ಸ್ಥಾನ ಕೊಡಿ ಎಂದು ಕೇಳುವುದಿಲ್ಲ. ಅದು ಹೈಕಮಾಂಡ್‌ಗೆ ಬಿಟ್ಟಿದ್ದು ಎನ್ನುತ್ತಾರೆ. ಆದರೆ, ಆತ್ಮೀಯರೊಂದಿಗೆ ಮಾತನಾಡುವ ವೇಳೆಯಲ್ಲಿ ಈ ಬಾರಿ ಸಚಿವ ಸಂಪುಟ ಪುನರ್ ರಚನೆಯ ವೇಳೆಯಲ್ಲಿ ಸಚಿವನಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ನಾನು ಸಚಿವ ಸ್ಥಾನದ ಆಕಾಂಕ್ಷಿ, ನನಗೂ ಹಿರಿತನ ಇದೆ ಮತ್ತು ಜಿಲ್ಲಾ ಕೇಂದ್ರ ಕೊಪ್ಪಳಕ್ಕೂ ಸಚಿವ ಸ್ಥಾನ ನೀಡಬೇಕಾಗಿದೆ. ಹೀಗಾಗಿ, ನಾನಂತೂ ಕೇಳುತ್ತೇನೆ. ಕೊಡುವುದು, ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಷಯವಾಗಿದೆ ಎಂದು , ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದ್ದಾರೆ.