ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸರ್ಜರಿಗೆ ಮೂರು ತಿಂಗಳು ಕಾಯಬೇಕು ಎನ್ನುವ ''ಕನ್ನಡಪ್ರಭ'' ವಿಶೇಷ ವರದಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಕೂಡಲೇ ವರದಿ ಸಲ್ಲಿಸುವಂತೆ ಕಿಮ್ಸ್(ಜಿಲ್ಲಾಸ್ಪತ್ರೆ)ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಸೂಚಿಸಿದೆ.
ಕೊಪ್ಪಳ : ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸರ್ಜರಿಗೆ ಮೂರು ತಿಂಗಳು ಕಾಯಬೇಕು ಎನ್ನುವ ''ಕನ್ನಡಪ್ರಭ'' ವಿಶೇಷ ವರದಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಕೂಡಲೇ ವರದಿ ಸಲ್ಲಿಸುವಂತೆ ಕಿಮ್ಸ್(ಜಿಲ್ಲಾಸ್ಪತ್ರೆ)ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಸೂಚಿಸಿದೆ.
ಜತೆಗೆ, ''ಕನ್ನಡಪ್ರಭ'' ವರದಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ತರಿಸಿಕೊಂಡಿದ್ದು, ಆಸ್ಪತ್ರೆಯ ಪರಿಸ್ಥಿತಿ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರೂ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ನೀತಿ ಸಂಹಿತೆ ಮುಗಿದ ತಕ್ಷಣ ಪ್ರತ್ಯೇಕ ಸಭೆ ನಡೆಸಿ, ಪರಾಮರ್ಶೆ ಮಾಡುವುದಾಗಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಮೂರು ತಿಂಗಳು ರೋಗಿಗಳು ಆಪರೇಶನ್‌ಗಾಗಿ ಕಾಯುವುದು ಅಂದರೆ ಏನರ್ಥ? ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.
ಕೊಪ್ಪಳ ಕಿಮ್ಸ್ ಆಸ್ಪತ್ರೆಯ ಕಾರ್ಯವೈಖರಿ ಕುರಿತು ಜನಾಕ್ರೋಶ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೊಪ್ಪಳ ಜಿಲ್ಲಾಡಳಿತ ಮತ್ತು ಕಿಮ್ಸ್ ಆಡಳಿತ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇಂಥ ಕೆಟ್ಟ ಆಡಳಿತ ಮತ್ತು ಚಿಕಿತ್ಸೆಯನ್ನು ಎಲ್ಲೂ ನೋಡಿಯೇ ಇಲ್ಲ ಎಂಬ ಮಾತು ಕೇಳಿಬರುತ್ತಿದೆ.
ಕೊಪ್ಪಳ ಜಿಲ್ಲಾಸ್ಪತ್ರೆ ಅವ್ಯವಸ್ಥೆ ಕುರಿತು ಮೇ 26ರಂದು ಕನ್ನಡಪ್ರಭವು ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.
ಕನ್ನಡಪ್ರಭ ವರದಿಯನ್ನು ಗಮನಸಿದ್ದೇನೆ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೂ ಈ ವಿಚಾರ ತಂದಿದ್ದೇನೆ. ಈಗ ನೀತಿ ಸಂಹಿತೆ ಇರುವುದರಿಂದ ಕ್ರಮಕೈಗೊಳ್ಳಲು ಕಾನೂನು ತೊಡಕು ಇದೆ. ಹೀಗಾಗಿ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಕಿಮ್ಸ್ ಆಸ್ಪತ್ರೆ ಕುರಿತು ಪ್ರತ್ಯೇಕ ಸಭೆ ನಡೆಸಲಾಗುವುದು.
- ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ