ವಿಚ್ಛೇದನ ಕೋರಿದ್ದ ದಂಪತಿಯನ್ನು ಗವಿಮಠಕ್ಕೆ ಕಳುಹಿಸಿದ ಹೈಕೋರ್ಟ್- ಸ್ವಾಮೀಜಿ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಇತ್ಯರ್ಥ

Published : Sep 20, 2024, 09:10 AM IST
Woman-in-Agra-file-for-divorce-after-40-days-of-marriage

ಸಾರಾಂಶ

ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಗೆ ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ಅವರು ಗವಿಸಿದ್ಧೇಶ್ವರ ಸ್ವಾಮೀಜಿ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಇತ್ಯರ್ಥಪಡಿಸಿಕೊಂಡು ಒಂದಾಗಿ ಬಾಳುವಂತೆ ಸೂಚಿಸಿದ್ದಾರೆ.

ಕೊಪ್ಪಳ  : ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಗೆ ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ಅವರು ಗವಿಸಿದ್ಧೇಶ್ವರ ಸ್ವಾಮೀಜಿ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಇತ್ಯರ್ಥಪಡಿಸಿಕೊಂಡು ಒಂದಾಗಿ ಬಾಳುವಂತೆ ಸೂಚಿಸಿದ್ದಾರೆ.

ಗದಗ ಜಿಲ್ಲೆ ಮೂಲದ ಗಂಡ-ಹೆಂಡತಿ ಇಬ್ಬರೂ ವಿಚ್ಛೇದನ ನೀಡುವಂತೆ ಕಳೆದ ನಾಲ್ಕು ವರ್ಷದ ಹಿಂದೆ ಧಾರಾವಾಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸೆ.17ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀಕೃಷ್ಣ ದೀಕ್ಷಿತ ಅವರು, ಗಂಡ ಹೆಂಡತಿ ಎಂದರೆ ಸಮಸ್ಯೆ ಇದ್ದದ್ದೇ. ಅದನ್ನೇ ನೆಪ ಮಾಡಿಕೊಂಡು ಬೇರೆಯಾಗುವುದು ಸರಿಯಲ್ಲ ಎಂದು ಬುದ್ಧಿವಾದ ಹೇಳಿ ಮಾನಸಿಕ ಸಮಸ್ಯೆ ಇದ್ದರೆ ಮನೋವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದಿದ್ದಾರೆ.

ಆಗ ದಂಪತಿ ಈಗಾಗಲೇ ಮನೋವೈದ್ಯರ ಬಳಿಯೂ ಹೋಗಿದ್ದೇವೆ ಎಂದಿದ್ದಾರೆ. ಹಾಗಾದರೆ ಯಾರಾದರೂ ಮಠಾಧೀಶರ ಬಳಿ ಹೋಗಿ ಎಂದು ನ್ಯಾಯಮೂರ್ತಿ ಅವರು ಸಲಹೆ ನೀಡಿದಾಗ ಗಂಡ, ಗದುಗಿನ ತೋಂಟದಾರ್ಯ ಮಠದ ಸ್ವಾಮೀಜಿ ಬಳಿ ಹೋಗುತ್ತೇವೆಂದು ಹೇಳಿದ್ದಾರೆ. ಇದಕ್ಕೆ ಪತ್ನಿ ಸಮ್ಮತಿಸಿಲ್ಲ. ನೀವೇ ಹೇಳಿ ಯಾವ ಸ್ವಾಮೀಜಿ ಬಳಿ ಹೋಗುತ್ತಿರಿ ಎಂದು ಪತ್ನಿಯನ್ನು ಪ್ರಶ್ನಿಸಿದ್ದಾರೆ. "ನಾವು ಕೊಪ್ಪಳದ ಗವಿಸಿದ್ಧೇಶ್ವರ ಸ್ವಾಮೀಜಿ ಬಳಿ ಹೋಗುತ್ತೇವೆ" ಎಂದು ಹೆಂಡತಿ ಹೇಳಿದ್ದಾಳೆ. ಆಗ ನ್ಯಾಯಮೂರ್ತಿ ಅವರು, ಒಳ್ಳೆಯದೇ ಆಯಿತು, ಗವಿಸಿದ್ಧೇಶ್ವರ ಸ್ವಾಮೀಜಿ ವಿವೇಕಾನಂದರು ಇದ್ದಂತೆ ಇದ್ದು, ಅವರ ಭಾಷಣ ಕೇಳಿದ್ದೇನೆ. ಅವರ ಬಳಿಯೇ ಹೋಗಿ ಎಂದು ಹೇಳಿದ್ದಾರೆ.

ನ್ಯಾಯಮೂರ್ತಿ ಅವರು ಆದೇಶದ ಮೇರೆಗೆ ಗಂಡ-ಹೆಂಡತಿ ಇಬ್ಬರೂ ಸೆ.22ರಂದು ಕೊಪ್ಪಳ ಗವಿಸಿದ್ಧೇಶ್ವರ ಮಠಕ್ಕೆ ಹೋಗಲಿದ್ದಾರೆ. ಗವಿಮಠ ಪರಂಪರೆಯಲ್ಲಿಯೇ ಇದು ಮೊದಲ ವಿಶೇಷ ಪ್ರಕರಣವಾಗಿದೆ.

PREV

Recommended Stories

ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ
ಶರಣರ ವಚನಗಳಲ್ಲಿ ಜೀವನ ಮೌಲ್ಯ