ವಿದ್ಯೆಯ ಜತೆಗೆ ಮಕ್ಕಳಿಗೆ ವಿನಯ, ಸಂಸ್ಕಾರ ಕಲಿಸಿಕೊಡುವುದು ಅವಶ್ಯವಿದೆ. ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳೂ ಶೈಕ್ಷಣಿಕ ಕ್ರಾಂತಿ ಮಾಡಿವೆ
ಯಲಬುರ್ಗಾ: ಜಗತ್ತನ್ನು ಬೆಳಗುವ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಡಾ. ಕಲ್ಯಾಣಸಿರಿ ಭಂತೇಜಿ ಹೇಳಿದರು.
ತಾಲೂಕಿನ ಮುಧೋಳ ಗ್ರಾಮದ ಶ್ರೀ ತ್ರಿಲಿಂಗೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಂಸ್ಥೆಯ 50ನೇ ವರ್ಷದ ಸುವರ್ಣ ಸಂಭ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಪರಿಶ್ರಮದಿಂದ ಕಲಿತ ಶಿಕ್ಷಣ ಜಗತ್ತನ್ನೇ ಬೆಳಗುವ ಶಕ್ತಿ ನಮ್ಮಲ್ಲಿ ಅಡಗಿರುತ್ತದೆ. ಹೀಗಾಗಿ, ಪ್ರತಿಯೊಬ್ಬರೂ ಶಿಕ್ಷಣಕ್ಕೆ ಮಹತ್ವ ನೀಡಬೇಕು. ಬುದ್ಧ, ಬಸವ, ಅಂಬೇಡ್ಕರ್ ಶಿಕ್ಷಣದ ಜತೆಗೆ ವೈಚಾರಿಕ, ಸಾಮಾಜಿಕ, ವಿಚಾರ ಪರಿಪಾಲನೆ ಮಾಡಿದ್ದರಿಂದ ವಿಶ್ವಮಾನವರಾಗಿದ್ದಾರೆ. ತ್ರಿಲಿಂಗೇಶ್ವರ ಶಿಕ್ಷಣ ಸಂಸ್ಥೆ 50ನೇ ವರ್ಷ ಆಚರಿಸಿಕೊಳ್ಳುವ ಮೂಲಕ ಸಾವಿರಾರು ಮಕ್ಕಳು ಕಲಿತು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ರೂಪಗೊಂಡಿರುವ ಕಾರ್ಯ ಶ್ಲಾಘನೀಯ. ಹನುಮಂತರಾಯ ದೇಸಾಯಿ ಸೇರಿದಂತೆ ಗ್ರಾಮಸ್ಥರು ಈ ಸಂಸ್ಥೆ ನಿರ್ಮಿಸಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಕಾರಣರಾಗಿದ್ದಾರೆ ಎಂದರು.
ಶಿಕ್ಷಣ ಚಿಂತಕಿ ಲೀಲಾ ಮಲ್ಲಿಕಾರ್ಜುನ ಕಾರಟಗಿ ಮಾತನಾಡಿ, ವಿದ್ಯೆಯ ಜತೆಗೆ ಮಕ್ಕಳಿಗೆ ವಿನಯ, ಸಂಸ್ಕಾರ ಕಲಿಸಿಕೊಡುವುದು ಅವಶ್ಯವಿದೆ. ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳೂ ಶೈಕ್ಷಣಿಕ ಕ್ರಾಂತಿ ಮಾಡಿವೆ. ಆ ನಿಟ್ಟಿನಲ್ಲಿ ಈ ಸಂಸ್ಥೆ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸೇವೆ ಮಾಡುತ್ತಿರುವ ಕಾರ್ಯ ಮಾದರಿ ಎಂದರು.ರೈತ ಮಹಿಳೆ ಕವಿತಾ ಮಿಶ್ರಾ ಮಾತನಾಡಿ, ರೈತರ ಮಕ್ಕಳಿಗೆ ಕನ್ಯೆ ಕೊಡಲು ಹಿಂದೇಟು ಹಾಕುತ್ತಿರುವ ಸಮಾಜದ ನಡೆ ಖೇದಕರ. ನಾಡಿಗೆ ಅನ್ನ ನೀಡುವ ರೈತರನ್ನು ಕೀಳಾಗಿ ಕಾಣದೇ ಗೌರವಿಸಬೇಕು. ಕೃಷಿಯಲ್ಲಿ ಹೆಚ್ಚು ಮಹಿಳೆಯರು, ಯುವಕರು ಆಸಕ್ತಿ ತೋರಬೇಕು ಎಂದರು.
ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ಚಳಗೇರಿಯ ವೀರಸಂಗಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಂಸ್ಥೆಯ ಕಾರ್ಯದರ್ಶಿ ಯಲ್ಲಪ್ಪ ಹುನಗುಂದ, ಮಲ್ಲಿಕಾರ್ಜುನ ಬೆಲೇರಿ, ಕಲಾವಿದ ದೇವೇದ್ರಕುಮಾರ ಪತ್ತಾರ, ಅಮರಯ್ಯಸ್ವಾಮಿ ಜಾಲಿಬೆಂಚಿ ಇತರರು ಇದ್ದರು.