ಮಲೆನಾಡು ಜಿಲ್ಲೆಗಳಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ–ಕ್ಯಾಸನೂರ್ ಫಾರೆಸ್ಟ್ ಡಿಸೀಸ್) ಹರಡುವ ಆತಂಕದ ಹಿನ್ನೆಲೆಯಲ್ಲಿ ಮಲೆನಾಡು ತಪ್ಪಲಿನ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ
ರಾಂ ಅಜೆಕಾರು ಕಾರ್ಕಳ
ಕನ್ನಡಪ್ರಭ ವಾರ್ತೆ ಕಾರ್ಕಳಮಲೆನಾಡು ಜಿಲ್ಲೆಗಳಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ–ಕ್ಯಾಸನೂರ್ ಫಾರೆಸ್ಟ್ ಡಿಸೀಸ್) ಹರಡುವ ಆತಂಕದ ಹಿನ್ನೆಲೆಯಲ್ಲಿ ಮಲೆನಾಡು ತಪ್ಪಲಿನ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ.
ಕಾಡಂಚಿನ ಗ್ರಾಮಗಳಲ್ಲಿ ವಿಶೇಷ ನಿಗಾ ವಹಿಸಲಾಗಿದ್ದು, ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಹೆಬ್ರಿ ತಾಲೂಕಿನ ನಾಡ್ಪಾಲು, ಮುದ್ರಾಡಿ, ಕಬ್ಬಿನಾಲೆ, ಮುನಿಯಾಲು, ಬಲ್ಲಾಡಿ ಚಾರ್, ಕುಚ್ಚೂರು, ಮುಟ್ಲುಪಾಡಿ ಹಾಗೂ ಕಾರ್ಕಳ ತಾಲೂಕಿನ ಮರ್ಣೆ, ಕೆರುವಾಶೆ, ಮಾಳ, ಶಿರ್ಲಾಲು, ಈದು, ನೂರಾಲ್ಬೆಟ್ಟು ಮೊದಲಾದ ಕಾಡಂಚಿನ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.ಈ ಬಾರಿ ಅಂಡಾರು ಭಾಗಗಳಲ್ಲಿ ಮಂಗಗಳು ಮೃತಪಟ್ಟಿದ್ದು ಅದರಲ್ಲಿ ಮಂಗವೊಂದರಲ್ಲಿ ಮಂಗನ ಕಾಯಿಲೆ ದೃಢಪಟ್ಟಿದೆ ಎನ್ನಲಾಗಿದೆ. ಆದರೆ ಇದುವರೆಗೂ ಮನುಷ್ಯರಲ್ಲಿ ಸೋಂಕು ಹರಡಿರುವ ಪ್ರಕರಣಗಳು ವರದಿಯಾಗಿಲ್ಲ. ಆದರೂ ಮುನ್ನೆಚ್ಚರಿಕೆಯಾಗಿ ಈ ವರ್ಷ ಮೊದಲಿನಿಂದಲೇ ಆರೋಗ್ಯ ಇಲಾಖೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.
ಪ್ರವಾಸಿಗರೇ ಎಚ್ಚರ:ತೀರ್ಥಹಳ್ಳಿಯಲ್ಲಿ ಯುವಕರೊಬ್ಬರು ಮಂಗನ ಕಾಯಿಲೆಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಆಗುಂಬೆಗೆ ಆಗಮಿಸುವ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ. ಮಂಗಗಳಿಗೆ ಆಹಾರ ನೀಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಮೃತಪಟ್ಟ ಮಂಗಗಳಿಂದ ದೂರವಿರುವಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಕಾಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಅರಣ್ಯ ವೀಕ್ಚಕರಿಗೂ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ರೋಗ ಲಕ್ಷಣಗಳೇನು?: ಮಂಗನ ಕಾಯಿಲೆ ಸಾಮಾನ್ಯವಾಗಿ ಕಾಡು ಪ್ರದೇಶಗಳಲ್ಲಿ ಕಂಡುಬರುವ ಕೆಂಪು ಚಿಗಟಗಳ ಕಡಿತದಿಂದ ಹರಡುತ್ತದೆ. ಸೋಂಕು ತಗುಲಿದ ಸುಮಾರು ಒಂದು ವಾರದ ಬಳಿಕ ಜ್ವರ ಕಾಣಿಸಿಕೊಳ್ಳುವುದು ಮೊದಲ ಲಕ್ಷಣ. 10ರಿಂದ 12 ದಿನಗಳವರೆಗೆ ಜ್ವರ, ಚಳಿ, ತಲೆನೋವು, ತೀವ್ರ ಸ್ನಾಯು ನೋವು, ವಾಂತಿ ಹಾಗೂ ಜೀರ್ಣಾಂಗ ಸಮಸ್ಯೆಗಳು ಕಂಡುಬರುತ್ತವೆ. ಮುಂದಿನ ಹಂತದಲ್ಲಿ ರಕ್ತದೊತ್ತಡ ಕುಸಿತ, ರಕ್ತಕಣಗಳ ಪ್ರಮಾಣ ಕಡಿಮೆಯಾಗುವುದು, ತೀವ್ರ ತಲೆನೋವು, ನಡುಕ, ಮಾನಸಿಕ ತೊಂದರೆ ಮತ್ತು ದೃಷ್ಟಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.ಗ್ರಾಮ ಮಟ್ಟದ ನಿರ್ವಹಣೆ: ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ ಕಾರ್ಕಳ ತಾಲೂಕಿನ 27 ಗ್ರಾಪಂ ವ್ಯಾಪ್ತಿಯ 39 ಗ್ರಾಮಗಳು ಹಾಗೂ ಹೆಬ್ರಿ ತಾಲೂಕಿನ 16 ಗ್ರಾಮಗಳಲ್ಲಿ ಪ್ರತ್ಯೇಕ ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್‍ಯಕರ್ತೆಯರು ಮತ್ತು ಅರಣ್ಯಾಧಿಕಾರಿಗಳ ಸಹಯೋಗದಲ್ಲಿ ಜಾಗೃತಿ ಅಭಿಯಾನ ನಡೆಯುತ್ತಿದೆ.ಮುನ್ನೆಚ್ಚರಿಕೆ ಕ್ರಮಗಳು:ಕಾಡು ಪ್ರದೇಶಗಳಿಗೆ ತೆರಳುವವರು ದೀಪದ ಎಣ್ಣೆ ಹಚ್ಚಿಕೊಳ್ಳಬೇಕು. ಉದ್ದನೆ ತೋಳಿನ ಶರ್ಟ್ ಮತ್ತು ಪ್ಯಾಂಟ್ ಧರಿಸಿ ದೇಹ ಸಂಪೂರ್ಣ ಮುಚ್ಚುವ ಬಟ್ಟೆಗಳನ್ನು ಬಳಸುವುದು ಸೂಕ್ತ. ಸತ್ತ ಅಥವಾ ಅಸ್ವಸ್ಥ ಕೋತಿಗಳು ಹಾಗೂ ಇತರ ಪ್ರಾಣಿಗಳ ಸಂಪರ್ಕವನ್ನು ತಪ್ಪಿಸಬೇಕು. ಸತ್ತ ಮಂಗ ಕಂಡುಬಂದರೆ ತಕ್ಷಣ ಗ್ರಾಮ ಸಮಿತಿ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು.
ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಬೆಡ್‌ಗಳನ್ನು ಮೀಸಲಿಡಲಾಗಿದೆ. ಇತ್ತೀಚೆಗೆ ಅಂಡಾರು ಸಮೀಪ ಸತ್ತ ಮಂಗನ ಮೃತದೇಹದಲ್ಲಿ ಫ್ಲಾವಿವಿರಿಡೆ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಗಟಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ.ಅಂಡಾರು ಭಾಗಗಳಲ್ಲಿ ಮಂಗಗಳು ಮೃತಪಟ್ಟಿದ್ದು, ಅದರಲ್ಲಿ ಮಂಗವೊಂದರಲ್ಲಿ ಮಂಗನ ಕಾಯಿಲೆ ದೃಢಪಟ್ಟಿದೆ. ಈವರೆಗೂ ಮನುಷ್ಯರಲ್ಲಿ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿಲ್ಲ. ಜ್ವರ ಕಂಡುಬಂದರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬೇಕು.
-ಡಾ. ಸಂದೀಪ್ ಕುಡ್ವಾ, ತಾಲೂಕು ವೈದ್ಯಾಧಿಕಾರಿ