ರಾಜ್ಯ ಬಜೆಟ್‌ ಮೇಲೆ ಕೊಪ್ಪಳದ್ದು ಬೆಟ್ಟದಷ್ಟು ನಿರೀಕ್ಷೆ

KannadaprabhaNewsNetwork |  
Published : Mar 05, 2026, 02:15 AM IST
ಸಸಸ | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಅಭಿವೃದ್ಧಿ ಮಂಕಾಗಿದೆ. ಮಹತ್ವಾಕಾಂಕ್ಷಿ ಯೋಜನೆ ಜಾರಿಯಾಗುತ್ತಿಲ್ಲ

ಸೋಮರಡ್ಡಿ ಅಳವಂಡಿ ಕೊಪ್ಪಳ

ಜಿಲ್ಲೆಯಲ್ಲಿ ಅಭಿವೃದ್ಧಿಗೆ ವಿಪುಲ ಅವಕಾಶ ಇದ್ದರೂ ಅದಕ್ಕಾಗಿ ಮಾನ್ಯತೆ ದೊರೆಯದೇ ಇರುವುದರಿಂದ ಹತ್ತಾರು ವರ್ಷಗಳಿಂದ ಅನೇಕ ಯೋಜನೆಗಳು ನನೆಗುದಿಗೆ ಬಿದ್ದಿದ್ದು, ಅವುಗಳಿಗೆ ಈ ಬಜೆಟ್ ನಲ್ಲಿಯಾದರೂ ಕಾಯಕಲ್ಪ ಸಿಕ್ಕಿತೇ ಎನ್ನುವ ನಿರೀಕ್ಷೆ ಜನತೆಯದ್ದಾಗಿದೆ.

ಜಿಲ್ಲೆಯಲ್ಲಿ ಅಭಿವೃದ್ಧಿ ಮಂಕಾಗಿದೆ. ಮಹತ್ವಾಕಾಂಕ್ಷಿ ಯೋಜನೆ ಜಾರಿಯಾಗುತ್ತಿಲ್ಲ. ಜಾರಿಯಾಗಿರುವ ಯೋಜನೆಗಳು ಪೂರ್ಣಗೊಳ್ಳುತ್ತಿಲ್ಲ. ಹೀಗಾಗಿ, ಪ್ರತಿ ಬಾರಿಯ ಬಜೆಟ್ ಮೇಲೆ ಇರುವಂತೆ ನಿರೀಕ್ಷೆ ಈ ವರ್ಷವೂ ಸಹಜವಾಗಿಯೇ ಇದೆ. ಕೊಪ್ಪಳ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗೆ ಸಾಕಷ್ಟು ಅವಕಾಶಗಳಿದ್ದರೂ ಅವುಗಳು ಜಾರಿಯಾಗುತ್ತಿಲ್ಲ. ಸಿಂಗಟಾಲೂರು ಏತನೀರಾವರಿ ಯೋಜನೆ ಲೋಕಾರ್ಪಣೆಗೊಂಡು ಹದಿನೈದು ವರ್ಷಳಾಗುತ್ತ ಬಂದರೂ ಎಡಭಾಗದಲ್ಲಿರುವ ಕೊಪ್ಪಳ ಜಿಲ್ಲೆಗೆ ಹನಿ ನೀರೂ ಬರುತ್ತಿಲ್ಲ. ಪ್ರತಿ ವರ್ಷವೂ ಸಿಂಗಟಾಲೂರು ಏತನೀರಾವರಿ ಯೋಜನೆಯಲ್ಲಿ ನೀರು ಸಂಗ್ರಹವಾಗಿ, ಬಲಭಾಗದಲ್ಲಿ ಮಾತ್ರ ಬಳಕೆಯಾಗಿ, ಮಿಕ್ಕಿದ್ದು ನದಿಯ ಮೂಲಕ ಹರಿದು ಹೋಗುತ್ತದೆ.

ಸಿಂಗಟಾಲೂರು ಯೋಜನೆ ಪೂರ್ಣಗೊಳಿಸಿರುವ ಸರ್ಕಾರ ಕಾಲುವೆ ನಿರ್ಮಾಣ ಮಾಡಿ ಯೋಜನೆಯಲ್ಲಿ ರೈತರ ಭೂಮಿಗೆ ನೀರುಣಿಸುವ ಕಾರ್ಯ ಮಾಡುತ್ತಿಲ್ಲ.

ಹತ್ತಾರು ವರ್ಷಗಳಿಂದ ಒಂದಿಲ್ಲೊಂದು ಯೋಜನೆಯ ಬದಲಾವಣೆ ಮಾಡಲಾಗುತ್ತಿದೆಯೇ ಹೊರತು ಅದನ್ನು ಪೂರ್ಣಗೊಳಿಸುವ ಪ್ರಯತ್ನ ಆಗುತ್ತಿಲ್ಲ. ಕಳೆದ ವರ್ಷ ಮಧ್ಯಪ್ರದೇಶ ಮಾದರಿಯಲ್ಲಿ ರೈತರ ಭೂಮಿಗೆ ನೀರುಣಿಸುವ ಕುರಿತ ಚರ್ಚೆಯಾಗಿ, ಆದೇಶವಾಯಿತಾದರೂ ಟೆಂಡರ್ ಗೆ ಯಾರು ಮುಂದೆ ಬಾರದೆ ಇರುವುದರಿಂದ ನನೆಗುದಿಗೆ ಬಿದ್ದಿತು. ಈ ವರ್ಷ ಬಜೆಟ್ ನಲ್ಲಿ ಇದಕ್ಕೊಂದು ಕಾಯಕಲ್ಪ ಕಲ್ಪಿಸುವ ಕಾರ್ಯ ಆಗುವುದೇ ಎನ್ನುವುದೇ ಜಿಲ್ಲೆಯ ಪಾಲಿಗೆ ದೊಡ್ಡ ನಿರೀಕ್ಷೆ.

ಇದಷ್ಟೇ ಅಲ್ಲ, ಅಳವಂಡಿ ಬೆಟಗೇರಿ ಏತನೀರಾವರಿ ಯೋಜನೆ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಇದರಂತೆ ಇತರೆ ಏತನೀರಾವರಿ ಯೋಜನೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಕೊಪ್ಪಳ ಏತನೀರಾವರಿ ಯೋಜನೆ ಜಾರಿಯಾಗಿ, ಪೂರ್ಣಗೊಳ್ಳುವ ಹಂತದಲ್ಲಿ ಹಳ್ಳಹಿಡಿದಿದೆ. ನವಲಿ ಸಮಾಂತರ ಜಲಾಶಯ ಡಿಪಿಆರ್ ನಲ್ಲಿಯೇ ಕಾಲ ದೂಡುತ್ತಿದೆ. ಬಿಜೆಪಿ ಸರ್ಕಾರ ಇದ್ದಾಗ ಸಾವಿರ ಕೋಟಿ ಘೋಷಣೆ ಆಯಿತಾದರೂ ನಂತರ ಅದ್ಯಾವ ಬೆಳವಣಿಗೆ ಕಂಡಿಲ್ಲ.

ಸಮಾಂತರ ಜಲಾಶಯ ನಿರ್ಮಾಣ ಕಳೆದ ಮೂವತ್ತು ವರ್ಷಗಳಿಂದ ಕಾರ್ಯಗತವಾಗುತ್ತಿಲ್ಲ. ಹೀಗೆ, ಜಿಲ್ಲೆಯಲ್ಲಿರುವ ಎಲ್ಲ ಬಾಕಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದರೆ ಸಮೃದ್ಧ ಜಿಲ್ಲೆಯಾಗುವುದರಲ್ಲಿ ಅನುಮಾನವೇ ಇಲ್ಲ.

ತುಂಗಭದ್ರಾ ಜಲಾಶಯದ ಎಲ್ಲ ಕ್ರಸ್ಟ್ ಗೇಟ್‌ಗಳನ್ನು ಪುನರ್ ನಿರ್ಮಾಣ ಮಾಡುವ ಕಾರ್ಯ ಈಗಾಗಲೇ ಆರಂಭವಾಗಿದೆ.ಅದಕ್ಕೆ ಬೇಕಾಗಿರುವ ಅನುದಾನ ರಾಜ್ಯ ಸರ್ಕಾರ ಕೊಡಲೇಬೇಕು, ಕೊಡುತ್ತದೆ ಎನ್ನಲಾಗುತ್ತದೆ. ಆದರೂ ಅದಕ್ಕೆ ಬಜೆಟ್‌ನಲ್ಲಿಯಾದರೂ ಅವಕಾಶ ಮಾಡಿಕೊಡುವ ಮೂಲಕ ಹಣಕಾಸು ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

ಶೈಕ್ಷಣಿಕ ಸಮಸ್ಯೆಗಳು: ಜಿಲ್ಲೆಯಲ್ಲಿ ಶೈಕ್ಷಣಿಕ ಸಮಸ್ಯೆಗಳು ಸಾಲು ಸಾಲು ಇವೆ. ಘೋಷಣೆಯಾಗಿ, ಕಾರ್ಯನಿರ್ವಹಿಸುತ್ತಿರುವ ಕೊಪ್ಪಳ ವಿಶ್ವವಿದ್ಯಾಲಯಕ್ಕೆ ತುರ್ತಾಗಿ ಅನುದಾನ ಬೇಕಾಗಿದೆ. ಅದಕ್ಕೊಂದು ಜಾಗ ಈಗ ಪರಿಶೀಲನೆ ಮಾಡಲಾಗಿದ್ದು, ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಈ ಬಾರಿಯಾದರೂ ಬಜೆಟ್ ನಲ್ಲಿ ಅನುದಾನ ನೀಡುವುದೇ ಎನ್ನುವ ನಿರೀಕ್ಷೆ ಇದೆ.

ಕೊಪ್ಪಳ ವಿವಿಗೆ ಇದುವರೆಗೂ ಜಾಗದ ಸಮಸ್ಯೆಯಾಗಿತ್ತು. ಆದರೆ, ಈಗಿರುವ ಪ್ರಭಾರ ಕುಲಪತಿ ಡಾ.ಎಸ್.ವಿ.ಡಾಣಿ ಹಾಗೂ ಜಿಲ್ಲಾಡಳಿತದ ಮುತುವರ್ಜಿಯಿಂದ ಜಾಗ ಗುರುತು ಮಾಡಿದ್ದಾರೆ. ಅದು ಸೂಕ್ತವೂ ಆಗಿರುವುದರಿಂದ ಸರ್ಕಾರ ವಿಶೇಷ ಅನುದಾನ ಘೋಷಣೆ ಮಾಡಿದರೆ ಅನುಕೂಲವಾಗುತ್ತದೆ ಎನ್ನುವ ನಿರೀಕ್ಷೆ ದೊಡ್ಡ ಪ್ರಮಾಣದಲ್ಲಿದೆ.

ಜಿಲ್ಲೆಯಲ್ಲಿ ಪಿಯು ಕಾಲೇಜುಗಳ ಸಂಖ್ಯೆ ಮತ್ತು ಪದವಿ ಕಾಲೇಜುಗಳ ಸಂಖ್ಯೆ ಹೆಚ್ಚಳವಾಗಬೇಕಾಗಿದೆ. ಅದರಲ್ಲೂ ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ವಿಶೇಷವಾಗಿ ಶೈಕ್ಷಣಿಕ ಸಂಸ್ಥೆಗಳಿಗೆ ಪ್ರತ್ಯೇಕ ಜಾಗದ ಅಗತ್ಯವಿದ್ದು, ಇದಕ್ಕಾಗಿ ನೂರು ಎಕರೆ ಭೂಮಿ ನಗರಕ್ಕೆ ಹೊಂದಿಕೊಂಡು ಸ್ವಾಧೀನ ಮಾಡಿಕೊಳ್ಳಬೇಕಾಗಿದೆ. ಕೆಕೆಆರ್‌ಡಿಬಿಯಲ್ಲಿಯಾದರೂ ಇದಕ್ಕೆ ಅವಕಾಶ ಮಾಡಿದರೆ ಭವಿಷ್ಯದ ದೃಷ್ಟಿಯಿಂದ ಅನುಕೂಲವಾಗುತ್ತದೆ.

ಪ್ರವಾಸೋಧ್ಯಮ: ಜಿಲ್ಲೆಯಲ್ಲಿ ಪ್ರವಾಸೋಧ್ಯಮಕ್ಕೆ ವಿಪುಲ ಅವಕಾಶವಿದ್ದು, ಅದಕ್ಕೆ ಭವಿಷ್ಯ ಗಮನದಲ್ಲಿಟ್ಟುಕೊಂಡು ಬೃಹತ್ ಯೋಜನೆ ರೂಪಿಸಬೇಕಾಗಿದೆ. ಆದರೆ, ರಾಜ್ಯ ಸರ್ಕಾರ ಆ ದಿಸೆಯಲ್ಲಿ ಗಮನ ಹರಿಸುತ್ತಿಲ್ಲ. ಅಷ್ಟೇ ಅಲ್ಲ, ಈಗಾಗಲೇ ಯೋಜಿಸಿದ ಉದ್ಧೇಶಗಳಿಗೆ ಬಜೆಟ್‌ನಲ್ಲಿ ಘೋಷಣೆಯಾಗಿರುವ ಅನುದಾನ ಬಿಡುಗಡೆ ಮಾಡಿ, ಅಭಿವೃದ್ಧಿ ಮಾಡದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.

ವಿಶ್ವಪ್ರಸಿದ್ಧಿ ಅಂಜನಾದ್ರಿ ಅಭಿವೃದ್ಧಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನ ಘೋಷಣೆಯಾಗಿದೆ. ಆದರೆ, ಆಮೆಗತಿಯಲ್ಲಿಯೇ ಕಾಮಗಾರಿ ನಡೆಯುತ್ತಿದೆ. ಘೋಷಣೆಯಾಗಿರುವ ₹120 ಕೋಟಿ ಪೈಕಿ ಕೇವಲ ಶೇ.10ರಷ್ಟು ಬಳಕೆಯಾಗುತ್ತಿಲ್ಲ.

ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬರುತ್ತಿದ್ದರೂ ಕನಿಷ್ಠ ಮೂಲಸೌಕರ್ಯ ಇಲ್ಲ. ದುರಂತ ಎಂದರೇ ಬರುವ ಲಕ್ಷಾಂತರ ಭಕ್ತರಿಗೆ ಬಯಲೇ ಶೌಚಾಲಯ ಎನ್ನುವಂತಾಗಿದೆ. ದೇವಸ್ಥಾನಕ್ಕೆ ಪ್ರತಿ ವರ್ಷ ಐದಾರು ಕೋಟಿ ಕಾಣಿಕೆ ಭಕ್ತರು ನೀಡುತ್ತಾರೆ. ಆ ಹಣವೇ ಈಗ ಬರೋಬ್ಬರಿ ₹80 ಕೋಟಿಗೂ ಅಧಿಕವಾಗಿದೆ. ಆದರೂ ಅದನ್ನು ಬಳಸಿಕೊಳ್ಳುವುದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡುತ್ತಿಲ್ಲ.

ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಅನುಮತಿ ನೀಡಲಾಗಿದೆ. ಆದರೂ ಅದು ಕಾರ್ಯಗತವಾಗುತ್ತಿಲ್ಲ. ಕನಿಷ್ಠ ಶೌಚಾಲಯ, ಹೆದ್ದಾರಿಯಿಂದ ಬರುವ ಪ್ರಯಾಣಿಕರಿಗೆ ಬಸ್ ನಿಲ್ದಾಣ, ಸ್ನಾನಗೃಹ ಹೀಗೆ ಕನಿಷ್ಠ ಸೌಲಭ್ಯ ಇಲ್ಲ ಎನ್ನುವ ಕೊರಗು ಭಕ್ತರದ್ದು. ಬಜೆಟ್‌ನಲ್ಲಿ ವಿಶೇಷ ಅನುದಾನ ಘೋಷಣೆಯಾಗುವ ನಿರೀಕ್ಷೆ ಇದ್ದು, ಏನಾಗುತ್ತದೆ ಕಾದು ನೋಡಬೇಕು.

ಅಷ್ಟೇ ಅಲ್ಲ ಕರ್ನಾಟಕ ಏಳು ಅದ್ಭುತಗಳಲ್ಲೊಂದಾದ ಹಿರೇಬೆಣಕಲ್ ಶಿಲಾಸಮಾಧಿಗಳು ವಿಶ್ವಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೂ ಕನಿಷ್ಠ ಸೌಲಭ್ಯ ಇಲ್ಲ. ಪ್ರವಾಸೋಧ್ಯಮ ಇಲಾಖೆಯ ಸಚಿವ ಎಚ್.ಕೆ.ಪಾಟೀಲ್ ವಿಶೇಷ ಕಾಳಜಿ ವಹಿಸಿ ಇಲ್ಲಿಗೆ ಭೇಟಿ ನೀಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇಲ್ಲಿಯ ಮೂಲ ಸೌಕರ್ಯಕ್ಕಾಗಿ ₹80 ಲಕ್ಷ ಘೋಷಣೆ ಮಾಡಿದರೂ ಕಾರ್ಯಗತವಾಗಿಲ್ಲ. ಹೀಗೆ ಪ್ರವಾಸೋಧ್ಯಮಕ್ಕೆ ಇರುವ ಎಲ್ಲ ಅವಕಾಶ ಬಳಕೆ ಮಾಡಿಕೊಳ್ಳುವ ದಿಸೆಯಲ್ಲಿ ಕನಿಷ್ಠ ₹500 ಕೋಟಿಯನ್ನಾದರೂ ಈ ಬಜೆಟ್ ನಲ್ಲಿ ಘೋಷಣೆಯಾಗುವುದೇ ಎನ್ನುವುದು ಜಿಲ್ಲೆಯ ಜನರ ಆಶಾಭಾವನೆ.

ಕೊಪ್ಪಳಕ್ಕೊಂದು ಕ್ಯಾನ್ಸರ್ ಆಸ್ಪತ್ರೆ ಬೇಕು: ಜಿಲ್ಲೆ ಇತ್ತೀಚೆಗೆ ವಿಪರೀತ ಕ್ಯಾನ್ಸರ್ ರೋಗಿಗಳಿಂದ ಬಳಲುತ್ತಿದೆ. ಹುಬ್ಬಳ್ಳಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿನ ಬಹಳಷ್ಟು ರೋಗಿಗಳು ಕೊಪ್ಪಳ ಜಿಲ್ಲೆಯವರೇ ಇರುತ್ತಾರೆ. ಅತಿಯಾದ ರಸಾಯನ ಬಳಕೆ ಮತ್ತು ಯುರಿಯಾ ಬಳಕೆಯಿಂದ ಇಲ್ಲಿ ಕ್ಯಾನ್ಸರ್ ಬರುತ್ತಿದೆ ಎಂದು ಕೃಷಿ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ ಕಾರ್ಖಾನೆಗಳ ತ್ಯಾಜ್ಯದಿಂದಲೂ ಕ್ಯಾನ್ಸರ್ ರೋಗ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ, ಕೊಪ್ಪಳಕ್ಕೊಂದು ಕ್ಯಾನ್ಸರ್ ಆಸ್ಪತ್ರೆಯ ಅಗತ್ಯವಿದ್ದು, ಈಗಾಗಲೇ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಘೋಷಣೆಯಾಗುವ ನಿರೀಕ್ಷೆ ಇದೆ.

ಟ್ರಾಮಾ ಕೇರ್ ಸೆಂಟರ್: ಕ್ಯಾನ್ಸರ್ ಆಸ್ಪತ್ರೆಯಷ್ಟೇ ಅಗತ್ಯ ಟ್ರಾಮಾ ಕೇರ್ ಸೆಂಟರ್ ಬೇಕಾಗಿದೆ. ಕೊಪ್ಪಳದ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿದೆ. ಕಲ್ಯಾಣ ಕರ್ನಾಟಕದಲ್ಲಿಯೇ ರಸ್ತೆ ಅಪಘಾತದಿಂದ ಸಾಯುವವರ ಸಂಖ್ಯೆ ಮತ್ತು ಗಾಯಗೊಂಡವರ ಸಂಖ್ಯೆ ಕೊಪ್ಪಳ ಜಿಲ್ಲೆಯವರದ್ದೇ ಹೆಚ್ಚು. ಅದರಲ್ಲೂ ಕಾರ್ಮಿಕ ವರ್ಗವೇ ಹೆಚ್ಚು ಅಪಘಾತಕ್ಕೀಡಾಗುತ್ತಿದೆ. ಹೀಗಾಗಿ, ಕೊಪ್ಪಳದಲ್ಲೊಂದು ಟ್ರಾಮಾ ಕೇರ್ ಸೆಂಟರ್ ಪ್ರಾರಂಭಿಸುವ ಅಗತ್ಯವಿದೆ.

ಕಳೆದ ವರ್ಷದ ಘೋಷಣೆ ಏನೇನಾಯಿತು: ಕಳದೆ ವರ್ಷ ಬಜೆಟ್‌ನಲ್ಲಿ ಕೊಪ್ಪಳದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ₹100 ಕೋಟಿ ಘೋಷಣೆಯಾಗಿದೆ. ಆದರೆ, ಅದಿನ್ನೂ ನಿರೀಕ್ಷಿತ ಮಟ್ಟದಲ್ಲಿ ಜಾರಿಯಾಗುತ್ತಿಲ್ಲ. ಸರ್ಕಾರದ ಹಂತದಲ್ಲಿ ಕಿಮ್ಸ್‌ಗೆ ಆದೇಶ ಬಂದಿದೆ. ಆದರೂ ಅದಕ್ಕೆ ಬೇಕಾಗಿರುವ ಪೂರ್ವ ತಯಾರಿಯೂ ಆಗುತ್ತಿಲ್ಲ. ಸರ್ಕಾರ ಘೋಷಣೆ ಮಾಡಿದ ₹100 ಕೋಟಿ ಇನ್ನೂ ಬಂದಿಲ್ಲ. ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ತುರ್ತಾಗಿ ಈಗಿರುವ ಕಿಮ್ಸ್ ಆಸ್ಪತ್ರೆಯ ಕಟ್ಟಡವನ್ನು 5 ಅಂತಸ್ತಿನಿಂದ 9 ಅಂತಸ್ತಿಗೆ ಏರಿಕೆ ಮಾಡುವ ಕಾಮಗಾರಿಗೂ ಚಾಲನೆ ದೊರೆತಿಲ್ಲ.

ಯಲಬುರ್ಗಾ ಮತ್ತು ಕೊಪ್ಪಳ ತಾಲೂಕಿಗೆ ಕೆರೆ ತುಂಬಿಸುವ ಯೋಜನೆ ಘೋಷಣೆ ಮಾಡಲಾಗಿದೆ. ಇದು ಹಳೆಯ ಯೋಜನೆಯಾದರೂ ಮತ್ತೊಮ್ಮೆ ಘೋಷಣೆ ಮಾಡಲಾಯಿತು. ಆದರೆ, ಅದೂ ನಿರೀಕ್ಷಿತ ಮಟ್ಟದಲ್ಲಿ ಜಾರಿಯಾಗುತ್ತಿಲ್ಲ. ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ₹50 ಕೋಟಿ ಬಿಡುಗಡೆಯಾಗಿದ್ದು, ಪ್ರಗತಿಯಲ್ಲಿದೆ.

ನವಲಿ ಸಮಾಂತರ ಜಲಾಶಯ, ಹಿರೇಹಳ್ಳ ಜಲಾಶಯ ಹೂಳು ತೆಗೆಯುವ ಕುರಿತು ಪ್ರಸ್ತಾಪಿಸಲಾಗಿದೆ. ಆದರೂ ಅದ್ಯಾವುದು ಕಾರ್ಯಗತವಾಗಿಲ್ಲ. ಕುಕನೂರು, ಕಾರಟಗಿ, ಕನಕಗಿರಿಯಲ್ಲಿ 100 ಬೆಡ್ ಆಸ್ಪತ್ರೆ ನಿರ್ಮಾಣ ಘೋಷಣೆ ಜಾರಿಯಾಗುತ್ತಿದೆ ಅಷ್ಟೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಳಿ ಸಮುದಾಯದ ಮಕ್ಕಳಿಂದ ಗೌರಿ ದಬಾಳ್
ರಾಣಿಬೆನ್ನೂರಿನಲ್ಲಿ ರಂಗೇರಿಸಿದ ರಂಗಿನಾಟ: ಯುವತಿಯರೂ ಭಾಗಿ