- ಚಿಕ್ಕಮಗಳೂರು ಕೋರೆಗಾಂವ್ ವಿಜಯೋತ್ಸವ
ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಸಮಿತಿ ನಗರದ ಆಜಾದ್‌ಪಾರ್ಕ್ ಆವರಣದಲ್ಲಿ ಆಯೋಜಿಸಿದ್ದ 208 ನೆಯ ಭೀಮಾ ಕೋರೆಗಾಂವ್ ವಿಜಯೋತ್ಸವ ಶೌರ್ಯದಿನದ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತದ ಚರಿತ್ರೆಯಲ್ಲಿ ಅನೇಕ ಯುದ್ಧ, ಚಳುವಳಿಗಳು ನಡೆದಿದ್ದರೂ ಭೀಮಾ ಕೋರೆಗಾಂವ್ ಅತ್ಯಂತ ಪ್ರಮುಖ ಸಂಗತಿ. ಪೇಶ್ವೆ ರಾಜರ ಆಡಳಿತ ಕಾಲಾವಧಿಯಲ್ಲಿ ಶೋಷಿತ ವರ್ಗದ ಮಹರ್ ಸಮುದಾಯದ ಸಿದ್ಧನಾಕ ಮತ್ತು ಭೀಮನಾಕ ಎಂಬ ಸೈನಿಕ ಮುಖ್ಯಸ್ಥರು ಬ್ರಿಟಿಷರ ವಿರುದ್ಧ ಯುದ್ಧ ಗೆದ್ದರೆ ತಮ್ಮ ಸಮುದಾಯಕ್ಕೆ ಸಮಾನವಾಗಿ ಬಾಳುವ ಅವಕಾಶ ಕೋರಿದ್ದರು. ಒಂದೊಮ್ಮೆ ಸೋಲಾದರೆ ವೀರಮರಣ ಹೊಂದಿದವರ ಕುಟುಂಬಗಳಿಗೆ ಪರಿಹಾರ ಕೇಳಿದ್ದರು.
ಆದರೆ, ಪೇಶ್ವೆ ರಾಜರು ತಿರಸ್ಕರಿಸಿ ಅಪಮಾನಗೊಳಿಸಿದ ಹಿನ್ನಲೆಯಲ್ಲಿ 500 ಮಹರ್ ಸಮುದಾಯದ ಸೈನಿಕರ ಪಡೆ ಯೊಂದಿಗೆ ಬ್ರಿಟಿಷರ ಸೇನೆ ಜೊತೆ ಕೈಜೋಡಿಸಿ ಪೇಶ್ವೆಗಳನ್ನು ಪರಾಭವಗೊಳಿಸಿದ ವಿಜಯೋತ್ಸವ ಇದು ಎಂದರು.ನಾಗರಿಕ ಸಮಾಜದ ಅರ್ಥಹೀನ ವಿಚಾರಗಳ ವಿರುದ್ಧ ಭಾರತದಲ್ಲಿ ಉದಯಿಸಿದ ರತ್ನಗಳು ಬುದ್ಧ, ಬಸವ, ಅಂಬೇಡ್ಕರ್, ಕನಕರು. ಅಂದಿನ ಕಾಲದಲ್ಲಿ ಬಸವಣ್ಣ, ಅಂಬೇಡ್ಕರ್‌ರಿಗೆ ಕೆಲವು ಸಂಪ್ರದಾಯವಾದಿಗಳು ತೊಂದರೆ ಕೊಟ್ಟಿದ್ದರು. ಇಂದೂ ಅಂತಹವರು ಇದ್ದಾರೆ. ಸತ್ಯ ಮುಚ್ಚಿಡುವ ಬಚ್ಚಿಡುವ ಪ್ರವೃತ್ತಿ ಇದೆ. ಹಲವರು ಮೊಸಳೆ ಕಣ್ಣೀರು ಹಾಕುತ್ತಾರೆ ಏಕೆಂದರೆ ಇಂದು ಬಸವ ಮತ್ತು ಅಂಬೇಡ್ಕರ್ ಬಿಟ್ಟು ಬದುಕುವ ಶಕ್ತಿ ಯಾರಿಗೂ ಎಲ್ಲ ಎಂದು ತಮ್ಮಯ್ಯ ಗುಡುಗಿದರು.
ಸಾಣೇಹಳ್ಳಿ ಮಠಾಧ್ಯಕ್ಷ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿ, 12ನೆ ಶತಮಾನಕ್ಕೂ ಇಂದಿನ 21ನೆ ಶತಮಾನಕ್ಕೂ ಹೆಚ್ಚು ಬದಲಾವಣೆ ಇಲ್ಲ. ಆ ಸಮಸ್ಯೆಗಳು ವಿಜೃಂಭಿಸುತ್ತಲೇ ಇವೆ. ಜಾತಿ ಭೂತ ಮನುಷ್ಯರನ್ನು ಮನುಷ್ಯನನ್ನಾಗಿ ಕಾಣುವ ಅಂತಃಕರಣ ಕಳೆದುಕೊಂಡಿದ್ದೇವೆ. ಮೇಲುಕೀಳು ಭಾವ ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸಮಾನತೆಗೆ ನಡೆದ ಕೋರೆಂಗಾವ್ ಯುದ್ಧ ಸ್ಮರಿಸುವುದು ಪ್ರಸ್ತುತ. ವಿಜ ಯೋತ್ಸವ ಎನ್ನುವುದಕ್ಕಿಂತ ಜನಜಾಗೃತಿ ಉತ್ಸವವಾಗಿ ಆಚರಿಸುವುದು ಸೂಕ್ತ ಎಂದರು.ಚಾರ್ತುವರ್ಣಗಳಾಗಿ ವಿಂಗಡಿಸಿ ಒಂದುವರ್ಗ ಶ್ರೇಷ್ಠವೆಂದು ಹೇಳಿಕೊಂಡು ಉಳಿದವರನ್ನು ಕೀಳೆಂದು ಹೀಗಳೆಯುವ ವ್ಯವಸ್ಥೆ ಸರಿಯಲ್ಲ. ನೀರು ನೆಲಕ್ಕಿಲ್ಲದ ಜಾತಿ ಮನುಷ್ಯನಿಗೆ ಏಕೆ ಎಂದು ಬಸವಣ್ಣ ಪ್ರಶ್ನಿಸಿದ್ದರು. ವಿವಿಧ ವರ್ಗದ ಹಿನ್ನಲೆಯ ಪ್ರೇಮಿಗಳ ವಿವಾಹವನ್ನು ಅಂದು ನಡೆಸಿದಾಗ ವಿರೋಧಿಸಿದ ವರ್ಗದವರೆ ಇಂದೂ ಬಸವನನ್ನು ಕಬ್ಜಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆಂದು ಹೇಳಿದರು.ದಸಂಸ ಅಂಬೇಡ್ಕರ್‌ವಾದ ರಾಜ್ಯ ವಿಭಾಗೀಯ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ, ನಗರದಲ್ಲಿ ಕ್ರಿಯಾಶೀಲ ವಾಗಿರುವ 40 ಸಂಘಟನೆಗಳು ಸೇರಿ ಈ ಕಾರ್‍ಯಕ್ರಮ ರೂಪಿಸಲಾಗಿದೆ. ಸ್ವಾಭಿಮಾನದ ಸಂಕೇತವಾಗಿ ಬೃಹತ್ ಸಮಾ ವೇಶಕ್ಕೆ ಜಿಲ್ಲೆಯ ಮೂಲೆ ಮೂಲೆಗಳಿಂದಲೂ ಬೆಂಬಲ ವ್ಯಕ್ತವಾಗಿದೆ. ಹನಿ ಹನಿ ಕೂಡಿದರೆ ಹಳ್ಳ ಎನ್ನುವಂತೆ ಹಲವರ ಪರಿಶ್ರಮ ಯಶಸ್ಸಿಗೆ ಕಾರಣ. ಒಗ್ಗಟ್ಟು ಮುಖ್ಯ ಎಂಬುದನ್ನು ಅರ್ಥ ಮಾಡಿಕೊಂಡರೆ ಸಾಧನೆ ನಮ್ಮದಾಗುತ್ತದೆ ಎಂದರು.
ಎಸ್‌ಟಿಪಿಐ ರಾಜ್ಯ ಕಾರ್‍ಯದರ್ಶಿ ಅಂಗಡಿ ಚಂದ್ರು ಮಾತನಾಡಿ, ಸಮ ಸಮಾಜ ಕಟ್ಟಲು ಕೋರೆಗಾಂವ್ ವಿಜಯೋತ್ಸವ ಸಹಕಾರಿ. ದೃಢಸಂಕಲ್ಪ ಮತ್ತು ನಿರ್ಧಾರದಿಂದ ಸಣ್ಣ ಗುಂಪು ದೊಡ್ಡ ಸೈನ್ಯ ಹಿಮ್ಮೆಟ್ಟಿಸಿತ್ತು. ಒಗ್ಗಟ್ಟಿನ ಪರಿಣಾಮವಿದು. ಜಾತಿ ಇಲ್ಲದ, ಭೀತಿ ಇಲ್ಲದ ಹೊಸನಾಡನ್ನು ಕಟ್ಟಬೇಕಾಗಿದೆ ಎಂದರು.ಮಾಜಿ ಸಚಿವ ಅಂಬೇಡ್ಕರ್ ಅಧ್ಯಯನ ಸಂಸ್ಥೆ ಅಧ್ಯಕ್ಷ ಬಿ.ಬಿ.ನಿಂಗಯ್ಯ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ಕೋರೆಗಾಂವ್ ಯುದ್ಧ ಸಂದರ್ಭ ಅರಿಯಬೇಕು. ಅದು ಇತಿಹಾಸದ ಒಂದು ಭಾಗ. ಅಂಬೇಡ್ಕರ್ ವಿಚಾರಗಳನ್ನು ಅರ್ಥಮಾಡಿಕೊಂಡು ಸ್ವಾಭಿಮಾನದ ಕಿಚ್ಚನ್ನು ನಮ್ಮೊಳಗೆ ಹಚ್ಚಿಕೊಂಡು ನಡೆದಾಗ ಬದುಕಿಗೊಂದು ಅರ್ಥ ಬರುತ್ತದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರಿಯಬೇಕು. ಸಮಯಪ್ರಜ್ಞೆಯೊಂದಿಗೆ ವಿಚಾರವಂತಿಕೆಯಿಂದ ಸಂಘಟಿತರಾದರೆ ಸುಂದರ ಸಮಾಜ ನಿರ್ಮಿಸಬಹುದೆಂದರು.ಸಂವಿಧಾನ ಸಂರಕ್ಷಣಾ ವೇದಿಕೆ ಅಧ್ಯಕ್ಷ ಕೃಷ್ಣಮೂರ್ತಿ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಎಸ್‌ಟಿಪಿಐ ಜಿಲ್ಲಾಧ್ಯಕ್ಷ ಮುಸ್ತಾಫ್, ಎಸ್ಸಿಎಸ್‌ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾ ಸಮಿತಿ ಸದಸ್ಯ ರಮೇಶ, ಭೀಮ್ ಆರ್ಮಿ ಜಿಲ್ಲಾ ಪ್ರಮುಖರಾದ ಗಿರೀಶ್, ಹೇಮಂತ್ ಮತ್ತು ರಾಜೇಶ್, ಮುಖಂಡರಾದ ಜವರಯ್ಯ, ಹಿರೇಮಗಳೂರು ರಾಮಚಂದ್ರ, ವಕೀಲ ರಮೇಶ, ಡಿಎಸ್‌ಎಸ್ ರಾಜ್ಯ ವಿಭಾಗೀಯ ಸಂಚಾಲಕ ಚಂದ್ರಶೇಖರ್, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಛಲವಾದಿ ರಘು, ಅಂಬೇಡ್ಕರ್ ವೈಚಾರಿಕ ವೇದಿಕೆ ಅಧ್ಯಕ್ಷ ಮಂಜುನಾಥ ಕೂದವಳ್ಳಿ, ಜನಪರ ಹೋರಾಟಗಾರ ಅರುಣ ಕುಮಾರ್ ಮತ್ತು ವಸಂತಎರೇಹಳ್ಳಿ ಸೇರಿದಂತೆ ವಿವಿಧ ಮುಖಂಡರು ಮುಖ್ಯ ಅತಿಥಿಗಳಾಗಿದ್ದರು.ದ.ಸಂ.ಸ.ಮಾಧ್ಯಮ ಸಲಹೆಗಾರ ಹಿರೇಗೌಜ ಶಿವಕುಮಾರ್ ಸಂವಿಧಾನ ಪೂರ್ವಪೀಠಿಕೆಯನ್ನು ಸಭೆಗೆ ಬೋಧಿಸಿದರು. ಕರ್ನಾಟಕ ಪ್ರಗತಿಪರ ಸಂಘಟನೆ ಜಿಲ್ಲಾಧ್ಯಕ್ಷ ಉಮೇಶ್ ಸ್ವಾಗತಿಸಿ, ದಸಂಸ ರಾಜ್ಯ ಸಂಘಟನಾ ಸಂಚಾಲಕ ದಂಟರ ಮಕ್ಕಿ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಗಂಗಾಧರ್ ಮತ್ತು ನಾಗೇಶ್ವರ ಕಾರ್‍ಯಕ್ರಮ ನಿರೂಪಿಸಿದರು. ಪೂರ್ಣೇಶ ತಂಡ ಕ್ರಾಂತಿಗೀತೆ ಹಾಡಿತು.
8 ಕೆಸಿಕೆಎಂ 1ಚಿಕ್ಕಮಗಳೂರಿನ ಆಜಾದ್‌ಪಾರ್ಕ್ ಆವರಣದಲ್ಲಿ ಆಯೋಜಿಸಿದ್ದ 208 ನೆಯ ಭೀಮಾ ಕೋರೆಗಾಂವ್ ವಿಜಯೋತ್ಸವ ಶೌರ್ಯದಿನದ ಕಾರ್‍ಯಕ್ರಮವನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು. ಸಾಣೇಹಳ್ಳಿ ಮಠಾಧ್ಯಕ್ಷ ಡಾ.ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬಿ.ಬಿ. ನಿಂಗಯ್ಯ, ಅಂಗಡಿ ಚಂದ್ರು, ದಂಟರಮಕ್ಕಿ ಶ್ರೀನಿವಾಸ್ ಇದ್ದರು.