ಆಯುಷ್ಮಾನ್ ಸೌಲಭ್ಯ ನೀಡದ ಆಸ್ಪತ್ರೆ ಮೇಲೆ ಕ್ರಮ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

KannadaprabhaNewsNetwork |  
Published : May 03, 2026, 02:45 AM IST
ಸಂಸದ ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಜಿಲ್ಲಾ ದಿಶಾ ಸಭೆ ನಡೆಸಿದರು | Kannada Prabha

ಸಾರಾಂಶ

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಿಂದ ಶಿಫಾರಸ್ಸಾದಂತಹ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕುತ್ತಿಲ್ಲ ಎಂಬ ದೂರುಗಳು ಪದೇ ಪದೆ ಕೇಳಿ ಬರುತ್ತಿವೆ. ಈ ಸೌಲಭ್ಯ ಸಿಗುವಂತೆ ನೋಡಿಕೊಳ್ಳಲು ಸಂಯೋಜಕರನ್ನು ನೇಮಕ ಮಾಡಿದ್ದರೂ ಸಹ ಉಪಯೋಗವಾಗಿಲ್ಲ, ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಉಡುಪಿ: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಿಂದ ಶಿಫಾರಸ್ಸಾದಂತಹ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕುತ್ತಿಲ್ಲ ಎಂಬ ದೂರುಗಳು ಪದೇ ಪದೆ ಕೇಳಿ ಬರುತ್ತಿವೆ. ಈ ಸೌಲಭ್ಯ ಸಿಗುವಂತೆ ನೋಡಿಕೊಳ್ಳಲು ಸಂಯೋಜಕರನ್ನು ನೇಮಕ ಮಾಡಿದ್ದರೂ ಸಹ ಉಪಯೋಗವಾಗಿಲ್ಲ, ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಅವರು ಶನಿವಾರ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಯುಷ್ಮಾನ್ ಯೋಜನೆಯಡಿ ಜಿಲ್ಲಾಸ್ಪತ್ರೆಯಿಂದ ರೆಫರಲ್ ಆದ ರೋಗಿಗಳಿಗೆ ಚಿಕಿತ್ಸೆ ನೀಡಲು ಮಣಿಪಾಲದ ಖಾಸಗಿ ಆಸ್ಪತ್ರೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ರಾಜ್ಯದ ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆಯುವಂತೆ ಸೂಚನೆ ನೀಡಿದ ಅವರು, ಸಮಸ್ಯೆ ಬಗೆಹರಿಸಲು ವಾರದೊಳಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆಯುವಂತೆ ಸೂಚಿಸಿದರು.

ಬ್ರಹ್ಮಾವರದಲ್ಲಿ ಇಎಸ್ಐ ಆಸ್ಪತ್ರೆಗೆ 2.5 ಕೋಟಿ ರೂ. ಮಂಜೂರಾಗಿದೆ. ಆದರೆ ಇದರ ಕಾಮಗಾರಿಯ ಪ್ರಗತಿಗೆ ಸಂಬಂಧಿಸಿದ ಉತ್ತರ ಕೊಡಲು ಅಧಿಕಾರಿಗಳು ಗೈರು ಹಾಜರಾದ ಬಗ್ಗೆ ಅಸಮಾಧಾನ ವ್ತಕ್ತಪಡಿಸಿದ ಸಂಸದರು, ಅವರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚನೆ ನೀಡಿದರು. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಬಿಎಸ್ಎನ್ಎಲ್ ನೆಟ್‌ವರ್ಕ್ ಸಮಸ್ಯೆ ಉಂಟಾಗುತ್ತಿದೆ. ಈಗಾಗಲೇ 196 ಟವರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ 115 ಟವರ್ ಗಳನ್ನು 4ಜಿಗೆ ಉನ್ನತೀಕರಿಸಲಾಗಿದೆ. ಬಾಕಿ ಉಳಿದವುಗಳನ್ನು ಶೀಘ್ರದಲ್ಲೇ ಕೈಗೊಳ್ಳಬೇಕು ಎಂದ ಅವರು, ವಿದ್ಯುಚ್ಛಕ್ತಿ ಕಡಿತದ ಸಂದರ್ಭದಲ್ಲಿ ಬಿಎಸ್ಎನ್ಎಲ್ ನೆಟ್‌ವರ್ಕ್ ಲಭ್ಯವಾಗುತ್ತಿಲ್ಲ. ಆದ್ದರಿಂದ ಟವರ್‌ಗಳಿಗೆ ಬ್ಯಾಟರಿ ಅಳವಡಿಕೆ ಆದ್ಯತೆಯಲ್ಲಿ ನಡೆಸಬೇಕು, ಈಗಾಗಲೇ 80 ಟವರ್‌ಗಳಿಗೆ 46 ಹೊಸ ಬ್ಯಾಟರಿಗಳು ಅಳವಡಿಸಲಾಗಿದ್ದು, ಉಳಿದವುಗಳಿಗೆ ಕೂಡಲೇ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಮನೆ ಮನೆಗೆ ಎಲ್ ಪಿಜಿ ಗ್ಯಾಸ್ ಸಂಪರ್ಕ ನೀಡುವ ಕಾಮಗಾರಿಯನ್ನು ಅದಾನಿ ಕಂಪನಿ ಕೈಗೆತ್ತಿಕೊಂಡಿತ್ತು. ಕಳೆದ 10 ವರ್ಷಗಳಿಂದ ಕಾಮಗಾರಿ ನಡೆಯುತಿದ್ದರೂ, ಇನ್ನೂ ಅನುಷ್ಠಾನವಾಗಿಲ್ಲ ಎಂದು ಬೇಸರಿಸಿದ ಸಂಸದರು, ಜೂನ್ ತಿಂಗಳೊಳಗಾಗಿ ಪೈಪ್‌ಲೈನ್ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಗ್ಯಾಸ್ ಸಂಪರ್ಕ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯು ಉತ್ತಮ ಫಲಿತಾಂಶ ಲಭಿಸಿರುವ ಹಿನ್ನೆಲೆ, ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಇಲಾಖೆ ಅಧಿಕಾರಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಸಭೆಯಲ್ಲಿ ಶಾಸಕರಾದ ಯಶ್‌ಪಾಲ್ ಎ. ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಶಾಸಕ ಡಾ. ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಪಂ ಸಿಇಒ ಪ್ರತೀಕ್ ಬಾಯಲ್, ಡಿಎಫ್ಓ ರುಥ್ರೇನ್ ಪಿ,, ವೈಲ್ಡ್ ಲೈಫ್ ಡಿಎಫ್ಓ ಶಿವರಾಮ್ ಎಂ. ಬಾಬು, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

9ಕ್ಕೆ ಚಿತ್ರದುರ್ಗದಲ್ಲಿ ಬಿಎಸ್‌ವೈ ಅಭಿಮಾನೋತ್ಸವ
ರಾಯಲ್‌ ಸ್ಕೂಲ್‌ ಸೌಲಭ್ಯಗಳು ರಾಜ್ಯಕ್ಕೆ ಮಾದರಿ