ತಾಮ್ರ ಕಳ್ಳತನಕ್ಕೆ ಸಿಬ್ಬಂದಿ ಹೊಣೆ ಮಾಡಿದ ಕೆಪಿಟಿಸಿಎಲ್‌!

KannadaprabhaNewsNetwork |  
Published : Jul 17, 2026, 02:00 AM IST
16ಬ್ವದನವದ್ಜ | Kannada Prabha

ಸಾರಾಂಶ

ಕೆಪಿಟಿಸಿಎಲ್‌ ಉಪಕೇಂದ್ರದಲ್ಲಿ ಆದ ಕಳ್ಳತನಕ್ಕೆ ಅಲ್ಲಿನ ಅಧಿಕಾರಿ ಹೊರತುಪಡಿಸಿ ಸಿಬ್ಬಂದಿಯನ್ನಷ್ಟೇ ಹೊಣೆ ಮಾಡಿ ಎಫ್‌ಐಆರ್‌ ದಾಖಲಿಸಲಾಗಿದೆ. ಪ್ರಕರಣ ದಾಖಲಾದ ಸಿಬ್ಬಂದಿಯಲ್ಲಿ ಕೆಲವರು ನಿವೃತ್ತರಾದರೆ, ಮತ್ತೆ ಕೆಲವರು ಇತ್ತೀಚಿಗಷ್ಟೇ ವರ್ಗವಾಗಿ ಬಂದಿದ್ದಾರೆ. ಈ ಪ್ರಕರಣ ಕೆಲವರ ಪದೋನ್ನತಿಗೂ ಹೊಡೆತ ಬಿದ್ದಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಹುಬ್ಬಳ್ಳಿ ತಾಲೂಕು ತಾರಿಹಾಳದಲ್ಲಿನ ಕೆಪಿಟಿಸಿಎಲ್‌ 110 ಕೆವಿ ಉಪಕೇಂದ್ರದಲ್ಲಿ ಆದ ತಮ್ರದ ತಂತಿ ಕಳ್ಳತನಕ್ಕೆ ಅಲ್ಲಿನ ಅಧಿಕಾರಿಯನ್ನು ಹೊರತುಪಡಿಸಿ 16 ಜನ ಸಿಬ್ಬಂದಿಯನ್ನಷ್ಟೇ ಹೊಣೆ ಮಾಡಿ ಎಫ್‌ಐಆರ್‌ ದಾಖಲಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಉಪ ಕೇಂದ್ರದಲ್ಲಿ 09.10.2022 ರಿಂದ 27.06.2026 ಅವಧಿಯಲ್ಲಿ ಅಲ್ಲಿ ಸೇವೆ ಸಲ್ಲಿಸಿದ ಮತ್ತು ಇನ್ನೂ ಸೇವಾ ನಿರತರಾಗಿರುವ ವಿವಿಧ ಹುದ್ದೆಯ 16 ಜನ ಸಿಬ್ಬಂದಿ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಇವರಲ್ಲಿ ಕೆಲವರು ನಿವೃತ್ತರಾದರೆ, ಮತ್ತೆ ಕೆಲವರು ಇತ್ತೀಚಿಗಷ್ಟೇ ವರ್ಗವಾಗಿ ಬಂದಿದ್ದಾರೆ. ಓರ್ವ ಅನಾಮಿಕ (ಹೆಸರು ಇಲ್ಲದ) ಸಿಬ್ಬಂದಿ ಮೇಲೂ ಎಫ್‌ಐಆರ್‌ ದಾಖಲಿಸಲಾಗಿದೆ.

ಹೀಗೆ ಪ್ರಕರಣ ಎದುರಿಸುತ್ತಿರುವ ಸಿಬ್ಬಂದಿ "ಸರ್ಕಾರ ನಮ್ಮನ್ನು ಆಯಾ ಹುದ್ದೆಗೆ ನೇಮಕ ಮಾಡಿರುವುದು ಕೆಲಸ ಮಾಡಲು ಮಾತ್ರ. ಅದು ಬಿಟ್ಟು ಸ್ವತ್ತುಗಳನ್ನು ಕಾಯಲು ಅಲ್ಲ. ಸೇವೆಯ ಜೊತೆಗೆ ಸ್ವತ್ತುಗಳ ಕಾವಲು ಮಾಡಿ ಎಂದು ಎಲ್ಲೂ ಹೇಳಿಲ್ಲ. ಸಿಸಿ ಕ್ಯಾಮರಾ ಅಳವಡಿಸಿ, ಭದ್ರತಾ ಸಿಬ್ಬಂದಿ ನೇಮಿಸಿ ಸ್ವತ್ತು ರಕ್ಷಣೆ ಮಾಡಿಕೊಳ್ಳಬೇಕಾದವರು ನಮಗೆ ಕಳ್ಳರ ಪಟ್ಟ ಕಟ್ಟಿದ್ದಾರೆ. ನಮ್ಮ ಜೊತೆ ಸೇವೆ ಮಾಡಿದ ಉಪ ಕೇಂದ್ರದ ಮುಖ್ಯಸ್ಥರ ವಿರುದ್ಧವೂ ಎಫ್‌ಐಆರ್‌ ದಾಖಲು ಆಗಬೇಕಿತ್ತಲ್ಲ? " ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಕಳ್ಳತನದ ಆರೋಪದ ಎಫ್‌ಐಆರ್‌ ನಿಂದಾಗಿ ಕೆಲವರ ಪದೋನ್ನತಿಗೂ ಹೊಡೆತ ಬಿದ್ದಿದೆ. ತಮ್ಮ ಕೆಲಸದೊಂದಿಗೆ ಭದ್ರತಾ ಸಿಬ್ಬಂದಿಯ ಕೆಲಸವನ್ನೂ ಮಾಡಬೇತ್ತೇ? ಎಂಬ ಪ್ರಶ್ನೆಯನ್ನು ಸಿಬ್ಬಂದಿ ಎತ್ತಿದ್ದಾರೆ.

ಏನಿದು ಪ್ರಕರಣ?

ನಗರದ ಹೊರವಲಯದಲ್ಲಿ ಇರುವ ತಾರಿಹಾಳದ 110 ಕೆವಿ ಉಪಕೇಂದ್ರದಲ್ಲಿ ದುರಸ್ತಿಯಲ್ಲಿದ್ದ ವಿದ್ಯುತ್‌ ಪ್ರವರ್ತಕ (10ಎಂವಿಎ- ಟ್ರಾನ್ಸ್‌ಫಾರ್ಮರ್‌) ಇತ್ತು. ಅದನ್ನು ಕಚೇರಿಯ ವಿಶಾಲ ಆವರಣದ ಒಂದು ಮೂಲೆಯಲ್ಲಿ 2022ರಲ್ಲೇ ಇಡಲಾಗಿದೆ. 2026ರ ಜೂನ್‌ನಲ್ಲಿ ಅದರಲ್ಲಿನ ಒಂದು ವಸ್ತುವನ್ನು ಬಳಸಲು ಯೋಗ್ಯವೇ ಎಂದು ಪರಿಶೀಲಿಸಲು ಹೋದಾಗ ಅದರಲ್ಲಿನ ವೈಡಿಂಗ್‌ನಲ್ಲಿನ ತಾಮ್ರದ ತಂತಿ (ಕಾಪರ್‌ ವೈರ್‌) ಕಳ್ಳತನವಾಗಿರುವುದು ಗೊತ್ತಾಗಿದೆ. 10 ಎಂವಿಎ ವಿದ್ಯುತ್‌ ಪ್ರವರ್ತಕದಲ್ಲಿ ಕನಿಷ್ಠವೆಂದರೂ 3 ರಿಂದ 3.5 ಸಾವಿರ ಕೆಜಿ ವರೆಗೂ ತಾಮ್ರದ ವೈರ್‌ ಇದ್ದು ಅದರ ಈಗಿನ ಮಾರುಕಟ್ಟೆ ಬೆಲೆ ₹ 30ರಿಂದ ₹ 35 ಲಕ್ಷ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ದೂರು ದಾಖಲು:

ಇದೀಗ ಈ ಕಾಪರ್‌ ವೈರ್‌ ಕಳ್ಳತನವಾಗಿರುವುದಕ್ಕೆ ಕೇಂದ್ರದ ಸಹಾಯಕ ಇಂಜಿನಿಯರ್‌ ಶ್ರೀಕಾಂತ ಸಾಂಬ್ರಾಣಿ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದು, 16 ಜನ ಸಿಬ್ಬಂದಿ ಹಾಗೂ ಓರ್ವ ಅನಾಮಿಕ ಎಂದು ನಮೂದಿಸಲಾಗಿದೆ.

2022ರಿಂದ 2026ರ ಜೂ. 27ರೊಳಗೆ ಕಳ್ಳತನವಾಗಿದೆ ಎಂದು ತಿಳಿಸಲಾಗಿದೆ. ಈ ಅವಧಿಯಲ್ಲಿ ಸೇವೆ ಸಲ್ಲಿಸಿದ 16 ಜನ ಸಿಬ್ಬಂದಿ ಮೇಲೆ ಪ್ರಕರಣ ದಾಖಲಾಗಿದೆ. ಇವರಲ್ಲಿ ಕೆಲವರು ಕಳೆದ 6 ತಿಂಗಳ ಹಿಂದೆಯಷ್ಟೇ ವರ್ಗವಾಗಿ ಬಂದವರಿದ್ದರೆ, ಒಂದಿಬ್ಬರು ನಿವೃತ್ತರಾಗಿದ್ದಾರೆ. ಜ್ಯುನಿಯರ್‌ ಎಂಜಿನಿಯರ್‌, ಸ್ಟೇಷನ್‌ ಅಟೆಂಡರ್‌, ಕ್ಲರ್ಕ್‌ ಸೇರಿ ಕಸಗುಡಿಸುವವರೂ ಕೂಡ ಆರೋಪಿಗಳಾಗಿದ್ದಾರೆ.

ವಿಶಾಲವಾದ ಉಪಕೇಂದ್ರದಲ್ಲಿ ಸಿಸಿ ಕ್ಯಾಮೆರಾ, ಭದ್ರತಾ ಸಿಬ್ಬಂದಿ ಇಲ್ಲ. 110 ಕೆವಿ ಉಪಕೇಂದ್ರ ಆಗಿರುವುದರಿಂದ ಭದ್ರತಾ ಸಿಬ್ಬಂದಿ ಹಾಗೂ ಸಿಸಿ ಕ್ಯಾಮೆರಾ ಅಳವಡಿಸುವ ನಿಯಮವಿಲ್ಲವಂತೆ. 220 ಕೆವಿ ಉಪಕೇಂದ್ರಕ್ಕಷ್ಟೇ ಸಿಸಿ ಕ್ಯಾಮೆರಾ ಹಾಗೂ ಸೆಕ್ಯುರಿಟಿ ಒದಗಿಸಲು ಅವಕಾಶವುಂಟು. ಹಾಗಾದರೆ ಉಪಕೇಂದ್ರದಲ್ಲಿನ ವಸ್ತುಗಳಿಗೆ ಭದ್ರತೆ ಹೇಗೆ? 4 ವರ್ಷದ ಅವಧಿಯಲ್ಲಿ ಈ ಕಳ್ಳತನ ಆಗಿದೆ ಎಂದು ಹೇಳಲಾಗಿದೆ. 4 ವರ್ಷ ಅದು ಇದೆಯೋ ಇಲ್ಲವೋ ಎಂಬುದು ಪರಿಶೀಲಿಸುವ ಗೋಜಿಗೆ ಏಕೆ ಹೋಗಲಿಲ್ಲ? ಎಂಬೆಲ್ಲ ಪ್ರಶ್ನೆಗಳು ಕಾಡುತ್ತಿವೆ.

ಇದೀಗ ಅಲ್ಲಿನ ಸಿಬ್ಬಂದಿಯನ್ನು ಹೊಣೆ ಮಾಡಲಾಗಿದೆ. ಸಿಬ್ಬಂದಿಗಳು ತಮ್ಮ ಕೆಲಸ ಬಿಟ್ಟು ಕಚೇರಿಯಲ್ಲಿ ಏನು ಕಳ್ಳತನವಾಗಿದೆ? ಎಲ್ಲ ವಸ್ತುಗಳು ಸರಿಯಾಗಿ ಇವೆಯೇ? ಎಂಬುದನ್ನು ಪರಿಶೀಲಿಸುತ್ತಿರಬೇಕೇ? ಇನ್ನು ಇಲ್ಲಿನ ಸಹಾಯಕ ಅಭಿಯಂತರರ ಸಾಂಬ್ರಾಣಿ 2011ರಿಂದ ಇಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಅವರೇ ದೂರನ್ನು ಕೊಟ್ಟಿದ್ದಾರೆ. ತಮ್ಮನ್ನು ಬಿಟ್ಟು ಉಳಿದವರನ್ನಷ್ಟೇ ಆರೋಪಿಗಳನ್ನಾಗಿ ಮಾಡಿದ್ದಾರೆ. ಶಾಖಾಧಿಕಾರಿಯ ಹೊಣೆ ಏನು? ಕಳ್ಳತನವಾದಾಗ ಅವರೂ ಹೊಣೆಗಾರರಾಗುವುದಿಲ್ಲವೇ? ಎಂಬೆಲ್ಲ ಪ್ರಶ್ನೆಗಳು ಎದ್ದಿವೆ.

ಇಲಾಖಾ ವಿಚಾರಣೆ:

ಕಳ್ಳತನಕ್ಕೆ ಸಂಬಂಧಪಟ್ಟಂತೆ ಇಲಾಖೆ ವಿಚಾರಣೆ ಶುರುವಾಗಿದ್ದು, ತಪ್ಪಿಸ್ಥರ ವಿರುದ್ಧ ಕ್ರಮವಾಗಲಿದೆ. ಹಾಗಾದರೆ ಅಲ್ಲಿವರೆಗೂ ಅರ್ಹರಿಗೆ ಬಡ್ತಿ, ವೇತನ ಹೆಚ್ಚಳ ಇಲ್ಲ. ನಿವೃತ್ತರಾದರೆ ಪಿಂಚಣಿ ಕೂಡ ಸಿಗುವುದಿಲ್ಲವೇ? ಇದಕ್ಕೆ ಯಾರು ಹೊಣೆ? ಎಂಬ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ಕೊಡಬೇಕಿದೆ.ಕೋಟ್‌...

ತಾರಿಹಾಳ 110 ಕೆವಿ ಉಪಕೇಂದ್ರದಲ್ಲಿ 4 ವರ್ಷದ ಮಧ್ಯೆದಲ್ಲಿ ತಾಮ್ರದ ತಂತಿ ಕಳ್ಳತನವಾಗಿದೆ. ಅದರ ಮೌಲ್ಯ ಎಷ್ಟು ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಸಿಸಿ ಕ್ಯಾಮೆರಾ, ಭದ್ರತಾ ಸಿಬ್ಬಂದಿ ನಿಯೋಜಿಸುವ ನಿಯಮವಿಲ್ಲ. ಹೀಗಾಗಿ ಸಿಬ್ಬಂದಿ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ.

ಶ್ರೀಕಾಂತ ಸಾಂಬ್ರಾಣಿ, ಸಹಾಯಕ ಅಭಿಯಂತರರು(ವಿ) 110 ಕೆವಿ ಉಪಕೇಂದ್ರ, ತಾರಿಹಾಳ

ತಾರಿಹಾಳ ಉಪಕೇಂದ್ರದಲ್ಲಿ ನಡೆದಿರುವ ಕಳ್ಳತನದ ಬಗ್ಗೆ ಇಲಾಖಾ ವಿಚಾರಣೆ ನಡೆದಿದೆ. ವಿಚಾರಣೆ ಮುಗಿದ ಮೇಲೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಜತೆಗೆ ಪೊಲೀಸ್‌ ತನಿಖೆಯೂ ನಡೆದಿದೆ.

ರವೀಂದ್ರ ಬೇವಿನಮರದ, ಕಾರ್ಯನಿರ್ವಾಹಕ ಅಭಿಯಂತರ, ಕೆಪಿಟಿಸಿಎಲ್‌

ಎಇಇ ಸಾಂಬ್ರಾಣಿ ಮೇಲೆ ಕೇಸ್‌ಗೆ ಚಿಂತನೆ

ತಾರಿಹಾಳ 110 ಕೆವಿ ಉಪಕೇಂದ್ರದಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಪಟ್ಟಂತೆ ಸಿಬ್ಬಂದಿಗಳ ಮೇಲೆ ಎಫ್‌ಐಆರ್‌ ದಾಖಲಾಗಿದ್ದಕ್ಕೆ ಕೆಪಿಟಿಸಿಎಲ್‌ ನೌಕರರ ಸಂಘವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸಿಬ್ಬಂದಿಗಳ ವಿರುದ್ಧ ದೂರು ದಾಖಲಿಸಿರುವ ಸಹಾಯಕ ಅಭಿಯಂತರ (ವಿ) ಶ್ರೀಕಾಂತ ಸಾಂಬ್ರಾಣಿ ಅವರ ಮೇಲೆಯೇ ಸಿಬ್ಬಂದಿಗಳಿಂದ ಕೇಸ್‌ ದಾಖಲಿಸಲು ಯೋಚಿಸಿದೆ. ಸಿಬ್ಬಂದಿಗಳು ತಮ್ಮ ಕೆಲಸ ಬಿಟ್ಟು ಕಾವಲು ಕಾಯಬೇಕೇ ಎಂದು ಪ್ರಶ್ನಿಸಿರುವ ಸಂಘವು, ಯಾವುದೇ ಕಚೇರಿಯಲ್ಲಿ ಏನೇ ಆದರೂ ಅಲ್ಲಿನ ಅಧಿಕಾರಿಯೇ ಹೊಣೆಯಾಗುತ್ತಾರೆ. ಆದರೆ ಸಿಬ್ಬಂದಿಗಳ ಮೇಲೆ ಕೇಸ್‌ ದಾಖಲಿಸಿ, ತಮ್ಮನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ಈ ಕಾರಣದಿಂದ ಕಾನೂನು ತಜ್ಞರಿಂದ ಸಲಹೆ ಪಡೆದು ಕೇಸ್‌ ದಾಖಲಿಸಲಾಗುವುದು ಎಂದು ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೋನಂ ವಾಂಗ್ಚೂಕ್ ಹೋರಾಟಕ್ಕೆ ಗದುಗಿನಲ್ಲಿ ಬೆಂಬಲ
ಬೆಳೆವಿಮೆ ಯೋಜನೆ: ರೈತರಿಗೆ ಸಹಕಾರ ನೀಡದ ಬ್ಯಾಂಕ್ ಅಧಿಕಾರಿಗಳ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ