ಮನುಷ್ಯನ ಬೆಳವಣಿಗೆಗೆ ಶ್ರೀ ಕೃಷ್ಣನ ಜಾಣ್ಮೆ ಅವಶ್ಯಕ

KannadaprabhaNewsNetwork |  
Published : Aug 17, 2025, 01:33 AM IST

ಸಾರಾಂಶ

ಇಂದಿನ ಸಮಾಜದಲ್ಲಿ ಮನುಷ್ಯ ಬೆಳೆಯಬೇಕೆಂದರೆ ಶ್ರೀಕೃಷ್ಣನ ತಾಳ್ಮೆ ಮತ್ತು ಜಾಣ್ಮೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಮುಂದೆ ಬರಲು ಸಾಧ್ಯ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಇಂದಿನ ಸಮಾಜದಲ್ಲಿ ಮನುಷ್ಯ ಬೆಳೆಯಬೇಕೆಂದರೆ ಶ್ರೀಕೃಷ್ಣನ ತಾಳ್ಮೆ ಮತ್ತು ಜಾಣ್ಮೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಮುಂದೆ ಬರಲು ಸಾಧ್ಯ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತುಮಕೂರು ಜಿಲ್ಲಾ ಗೊಲ್ಲ (ಯಾದವ) ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರೀಕೃಷ್ಣನ ಜಾಣ್ಮೆ ಮತ್ತು ತಾಳ್ಮೆ ಎದುರು ಕುರು ವಂಶವನ್ನು ಬೆಂಬಲಿಸಿದ್ದ 11 ಅಕ್ಷೋಹಿಣಿ ಸೈನ್ಯ, ಅತಿರಥ, ಮಹಾರಥರು ಮಣ್ಣು ಮುಕ್ಕಬೇಕಾಯಿತು. ಶ್ರೀಕೃಷ್ಟ ಧರ್ಮವನ್ನು ಕಾಪಾಡುವ ನಿಟ್ಟಿನಲ್ಲಿ ಪಾಂಡವರ ಪರ ವಹಿಸಿ, ಇಡೀ ಕುರುಕ್ಷೇತ್ರ ಯುದ್ಧವನ್ನು ಮುನ್ನಡೆಸಿ, ಧರ್ಮಕ್ಕೆ ಜಯ ದೊರೆಯುವಂತೆ ಮಾಡಿದ.ಹಾಗೆಯೇ ನಾವುಗಳು ಅ ಧರ್ಮವನ್ನು ಬಹಳ ಉಪಾಯದಿಂದಲೇ ಮೆಟ್ಟಿ ನಿಲ್ಲಬೇಕಾಗಿದೆ. ಭಗವಂತ ಬೋಧಿಸಿದ ಭಗವದ್ಗೀತೆಯಲ್ಲಿ ಇಂದಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ. ಅದು ದಿನ ನಿತ್ಯ ಎಲ್ಲರನ್ನು ಮಾರ್ಗದರ್ಶನ ಮಾಡಲಿದೆ ಎಂದು ತಿಳಿಸಿದರು.

ಗೊಲ್ಲ ಸಮುದಾಯದ ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ ಮಾತನಾಡಿ, ಇತಿಹಾಸ ಪುರುಷ ಶ್ರೀಕೃಷ್ಣ ಓರ್ವ ರಾಜನೀತಿ ನಿಪುಣ. ಸಾವಿರಾರು ವರ್ಷಗಳ ಹಿಂದೆ ಆತ ಬೋಧಿಸಿದ ಭಗವದ್ಗೀತೆ ಇಂದಿನ ರಾಜಕೀಯ ವ್ಯವಸ್ಥೆಗೆ ಪೂರಕವಾಗಿದೆ. ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಒಳ್ಳೆಯ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಕುರುಕ್ಷೇತ್ರ ಯುದ್ದವೇ ಸಾಕ್ಷಿ. ಭೂಮಿಗೆ ಬರುವ ಪ್ರತಿ ವ್ಯಕ್ತಿಯೂ ತನ್ನ ಜವಾಬ್ದಾರಿ ಅರಿತು, ಸ್ವಜಾತಿ, ಸ್ವಧರ್ಮ ಎಲ್ಲವನ್ನು ಬದಿಗಿಟ್ಟು ಕೆಲಸ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಜಿಲ್ಲಾಡಳಿತದ ಸಹಕಾರದೊಂದಿಗೆ ಇಂದು ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲು ಸಿದ್ದರಾಗೋಣ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಗೊಲ್ಲ(ಯಾದವ) ಸಂಘದ ಜಿಲ್ಲಾಧ್ಯಕ್ಷ ಜಿ.ಚಂದ್ರಶೇಖರಗೌಡ ಮಾತನಾಡಿ, ಇಂದು ಇಡೀ ವಿಶ್ವದಲ್ಲಿರುವ ಭಾರತೀಯರೆಲ್ಲರೂ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸುತ್ತಿದ್ದಾರೆ. ಇಷ್ಟೆಲ್ಲಾ ಐತಿಹಾಸಿಕ,ಸಾಂಸ್ಕೃತಿಕ ಶ್ರೀಮಂತಿಕೆ ಇದ್ದರೂ ಇಂದಿಗೂ ಗೊಲ್ಲರಹಟ್ಟಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತ ವಾಗಿವೆ. ಕುಡಿಯುವ ನೀರು,ರಸ್ತೆ ಹೀಗೆ ಹಲವು ಕೊರತೆಗಳನ್ನು ಹೊಂದಿದೆ. ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕೆಲಸ ನೆನೆಗುದಿಗೆ ಬಿದ್ದಿದೆ. ಇದು ಮರೆಯಾಗಬೇಕೆಂದರೆ ನಾವುಗಳು ವಿಶಾಲ ಮನೋಭಾವನೆ ಬೆಳೆಸಿಕೊಳ್ಳಬೇಕಿದೆ ಎಂದರು.

ಮುಖಂಡರಾದ ಮಹಾಲಿಂಗಯ್ಯ ಮಾತನಾಡಿ, ನ್ಯಾಯಾಲಯಗಳಲ್ಲಿ ಸತ್ಯ ಹೊರತರಲು ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿಸಲಾಗುತ್ತದೆ. ಇಂತಹ ಭಗವದ್ಗೀತೆ ಮಕ್ಕಳಿಗೆ ಪಠ್ಯವಾದರೆ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ರಾಜಕೀಯವಾಗಿ, ಅರ್ಥಿಕವಾಗಿ, ಸಾಮಾಜಿಕವಾಗಿ,ಶೈಕ್ಷಣಿವಾಗಿ ಬಹಳ ಹಿಂದೆ ಉಳಿದಿರುವ ಗೊಲ್ಲ ಸಮುದಾಯ ಕಾಲಕ್ಕೆ ತಕ್ಕಂತೆ ಬದಲಾವಣೆಯಾದರೆ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.

ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಜಯಣ್ಣ ಬೆಳಗೆರೆ ಮಾತನಾಡಿ, ಸರಕಾರ ಶ್ರೀಕೃಷ್ಣ ಜಯಂತಿ ಆಚರಣೆ ಮಾಡುವುದರಿಂದ ಸಮಾಜ ಅನುಭವಿಸುತ್ತಿರುವ ಕಷ್ಟಗಳು ದೂರವಾಗುವುದಿಲ್ಲ. ಶೋಷಿತ ವರ್ಗದಲ್ಲಿರುವ ಈ ಸಮುದಾಯ ಮೇಲೆ ಬರಲು ಎಲ್ಲರೂ ಕೈಜೋಡಿಸಬೇಕು. ಗೊಲ್ಲರಹಟ್ಟಿಗೆ ಮೂಲಭೂತ ಸೌಕರ್ಯದ ಜೊತೆಗೆ, ಶೈಕ್ಷಣಿಕ ಅಭಿವೃದ್ದಿಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಿದೆ. ಯಾದವ-ಗೊಲ್ಲ, ಕಾಡುಗೊಲ್ಲ-ಊರು ಗೊಲ್ಲ ಇರುವ ಗೊಂದಲ ಬಗೆಹರಿಸಿಕೊಂಡು ಎಲ್ಲರೂ ಒಂದೇ ವೇದಿಕೆಗೆ ಬಂದಾಗ ಇತರೆ ಸಮಾಜಗಳಂತೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ.ಈ ನಿಟ್ಟಿನಲ್ಲಿ ಹಿರಿಯರು ಪ್ರಯತ್ನಿಸಬೇಕೆಂದರು.

ಗೊಲ್ಲ ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ ಹಿರಿಯರಾದ ಪೂಜಾರ್ ಚಿತ್ತಯ್ಯ, ಬಿ.ವಿ.ವೆಂಕಟರಮರಣಪ್ಪ, ನೀಲಮ್ಮ, ಸಣ್ಣಪ್ಪ, ಪತ್ರಕರ್ತ ಜಯಣ್ಣ ಬೆಳಗೆರೆ ಅವರುನ್ನು ಈ ವೇಳೆ ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಹಿರಿಯರಾದ ಷಣ್ಮುಖಪ್ಪ, ಚೆಂಗಾವರ ಕರಿಯಪ್ಪ, ವೀರಣ್ಣಗೌಡ, ಚಿಕ್ಕೇಗೌಡ, ಅಕ್ಕಪ್ಪ, ಚಿಕ್ಕಪ್ಪಯ್ಯ, ಎಸ್.ಚಿಕ್ಕರಾಜು, ಸುವರ್ಣಮ್ಮ, ಚಂದ್ರಕಲಾ, ಪುಟ್ಟರಾಜು, ರಂಗನಾಥ್, ಕುಣಿಹಳ್ಳಿ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಶ್ರೀಕೃಷ್ಣರ ಮೂರ್ತಿಯನ್ನು ಅಲಂಕೃತ ರಥದಲ್ಲಿರಿಸಿ, ನಗರದ ಟೌನ್‌ಹಾಲ್ ವೃತ್ತದಿಂದ ಡಾಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೆ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನದ ಮೂಲಕ ಮೆರವಣಿಗೆ ನಡೆಸಲಾಯಿತು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌