ಕೆಆರ್‌ಎಸ್ ಹಿನ್ನೀರಿನ ರಸ್ತೆ ಬದಿ ಮಣ್ಣು ಕುಸಿತ: ವಾಹನ ಚಾಲಕರಿಗೆ ಅಪಾಯದ ಆತಂಕ

KannadaprabhaNewsNetwork | Published : Jul 30, 2024 12:30 AM

ಸಾರಾಂಶ

ನಿತ್ಯ ನೂರಾರು ಪ್ರವಾಸಿಗರು ಗಂಜೀಗೆರೆ ಬಳಿಯ ಹಿನ್ನೀರು ಪ್ರದೇಶದ ರಸ್ತೆಯಲ್ಲಿ ಸಂಚರಿಸುತ್ತಾರೆ. ಹಿನ್ನೀರಿನ ಅಲೆಗಳು ರಸ್ತೆ ಬದಿಗೆ ಅಪ್ಪಳಿಸುತ್ತಿರುವುದರಿಂದ ರಸ್ತೆಯ ಒಂದು ಭಾಗದ ಮಣ್ಣು ಕುಸಿತವಾಗುತ್ತಿದೆ. ಮಣ್ಣು ಕುಸಿತವಾಗುವ ಅರಿವಿಲ್ಲದೆ ವಾಹನ ಚಾಲಕರು ರಸ್ತೆ ಬದಿಗೆ ಬಂದರೆ ವಾಹನ ಸಮೇತ ಹಿನ್ನೀರಿಗೆ ಬೀಳುವ ಅಪಾಯ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಗಂಜೀಗೆರೆ ಬಳಿ ಕೆಆರ್‌ಎಸ್ ಹಿನ್ನೀರಿಗೆ ಹೊಂದಿಕೊಂಡಂತೆ ಇರುವ ರಸ್ತೆ ಬದಿ ಮಣ್ಣು ಕುಸಿತವಾಗಿ ವಾಹನ ಚಾಲಕರಿಗೆ ಅಪಾಯದ ಆತಂಕ ಎದುರಾಗಿದೆ.

ಕೆಆರ್‌ಎಸ್ ಭರ್ತಿಯಾದ ಪರಿಣಾಮ ಜಲಾಶಯದ ಹಿನ್ನೀರು ತಾಲೂಕಿನ ಗಂಜೀಗೆರೆ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೂ ವ್ಯಾಪಿಸಿದೆ. ಹಿನ್ನೀರಿಗೆ ಹೊಂದಿಕೊಂಡಂತೆ ಬಸ್ತಿ ಗೊಮ್ಮಟ ಕ್ಷೇತ್ರ, ಭೂ ವರಾಹನಾಥ ಕ್ಷೇತ್ರ, ಅಂಬಿಗರಹಳ್ಳಿಯ ತ್ರಿವೇಣಿ ಸಂಗಮ ಕ್ಷೇತ್ರಗಳಿವೆ.

ನಿತ್ಯ ನೂರಾರು ಪ್ರವಾಸಿಗರು ಗಂಜೀಗೆರೆ ಬಳಿಯ ಹಿನ್ನೀರು ಪ್ರದೇಶದ ರಸ್ತೆಯಲ್ಲಿ ಸಂಚರಿಸುತ್ತಾರೆ. ಹಿನ್ನೀರಿನ ಅಲೆಗಳು ರಸ್ತೆ ಬದಿಗೆ ಅಪ್ಪಳಿಸುತ್ತಿರುವುದರಿಂದ ರಸ್ತೆಯ ಒಂದು ಭಾಗದ ಮಣ್ಣು ಕುಸಿತವಾಗುತ್ತಿದೆ. ಮಣ್ಣು ಕುಸಿತವಾಗುವ ಅರಿವಿಲ್ಲದೆ ವಾಹನ ಚಾಲಕರು ರಸ್ತೆ ಬದಿಗೆ ಬಂದರೆ ವಾಹನ ಸಮೇತ ಹಿನ್ನೀರಿಗೆ ಬೀಳುವ ಅಪಾಯ ಎದುರಾಗಿದೆ.

2022 ರಲ್ಲಿ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ನಡೆದ ಐತಿಹಾಸಿಕ ಕುಂಬಮೇಳ ಹಾಗೂ ಧಾರ್ಮಿಕ ಸಮ್ಮೇಳನದ ಸಂದರ್ಭದಲ್ಲಿ ಕಿರಿದಾಗಿದ್ದ ಇಲ್ಲಿನ ರಸ್ತೆಯ ಅಗಲೀಕರಣ ಮಾಡಲಾಗಿತ್ತು. ಅಗಲೀಕರಣದ ವೇಳೆ ರಸ್ತೆ ಬದಿಗೆ ಮಣ್ಣು ಸುರಿಯಲಾಯಿತಾದರೂ ಣ್ಣು ಕುಸಿಯದಂತೆ ಲೋಕೋಪಯೋಗಿ ಇಲಾಖೆ ಪಿಚಿಂಗ್(ಕಲ್ಲಿನ ಕಾಂಕ್ರೀಟ್) ಮಾಡಿರಲಿಲ್ಲ.

ಇದರ ಪರಿಣಾಮ ಕೆ ಆರ್ ಎಸ್ ಜಲಾಶಯದ ಹಿನ್ನೀರಿನ ಅಲೆಗಳ ರಭಸಕ್ಕೆ ರಸ್ತೆ ಬದಿ ಮಣ್ಣು ಕುಸಿಯುತ್ತಿದೆ.

ಈ ರಸ್ತೆಯಲ್ಲಿ ನಿತ್ಯ ನೂರಾರು ಪ್ರವಸಿಗರ ವಾಹನಗಳು ಸಂಚರಿಸುತ್ತಿದ್ದರೂ ಲೋಕೋಪಯೋಗಿ ಇಲಾಖೆ ಹಿನ್ನೀರಿನ ಭಾಗದಲ್ಲಿ ರಕ್ಷಣಾ ತಡೆಗೋಡೆಗಳನ್ನು ನಿರ್ಮಿಸಿಲ್ಲ. ತಡೆಗೋಡೆಗಳಿಲ್ಲದ ಪರಿಣಾಮ ವಾಹನ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಕುಸಿಯುತ್ತಿರುವ ಮಣ್ಣಿನ ಮೂಲಕ ಹಿನ್ನೀರಿನಲ್ಲಿ ವಾಹನ ಸಮೇತ ಬೀಳುವ ಆತಂಕ ಎದುರಾಗಿದೆ.

ಗಂಜೀಗೆರೆ ವ್ಯಾಪ್ತಿ ಹಲವು ಪ್ರವಾಸಿ ತಾಣಗಳಿವೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಇವರು ಪ್ರವಾಸಿ ತಾಣಗಳಿಗೆ ತಲುಪಲು ಅಗತ್ಯವಾದ ಮಾರ್ಗಸೂಚಿ ನಾಮಫಲಕಗಳಿಲ್ಲ. ರಾತ್ರಿ ಸಮಯ ವಾಹನ ಸವಾರರು ಅಪಘಾತಕೀಡಾಗಿ ಹಲವು ಸಾವು ನೋವು ಘಟನೆಗಳು ಸಂಭವಿಸಿವೆ.ಬಿಡುಗಡೆಯಾದ ಅನುದಾನಕ್ಕೆ ತಕ್ಕಂತೆ ಕಾಮಗಾರಿ ನೆರವೇರಿಸಿದ್ದೇವೆ. ಹಿನ್ನೀರಿನ ರಸ್ತೆ ಬದಿ ಮಣ್ಣು ಕುಸಿಯುತ್ತಿರುವುದನ್ನು ಪರಿಶೀಲನೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ಶೀಘ್ರವೇ ಕ್ರಮ ವಹಿಸುತ್ತೇನೆ. ರಸ್ತೆ ಬದಿಗೆ ಶಾಶ್ವತವಾಗಿ ತಡೆಗೋಡೆ ನಿರ್ಮಾಣ ಮಾಡಲು ಕ್ರಮ ವಹಿಸುತ್ತೇನೆ.

- ಮಂಜುನಾಥ್, ಸಹಾಯಕ ಕಾರ್ಯಪಾಲಕ ಅಭಿಯಂತರು,ಲೋಕೋಪಯೋಗಿ ಇಲಾಖೆ

ಹೇಮಾವತಿ ಎಡದಂತೆ 54ನೇ ವಿತರಣಾ ನಾಲೆ ಕಾಮಗಾರಿ ಕಳಪೆ: ರೈತ ಹೋರಾಟಗಾರ ಆರೋಪ

ಕೆ.ಆರ್.ಪೇಟೆ:ತಾಲೂಕಿನ ವ್ಯಾಪ್ತಿ ಹಾದುಹೋಗಿರುವ ಹೇಮಾವತಿ ಜಲಾಶಯದ ಎಡದಂಡೆ ನಾಲೆಯ 54ನೇ ವಿತರಣಾ ನಾಲೆ ನವೀಕರಣ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ರೈತ ಹೋರಾಟಗಾರ ಕರೋಟಿ ತಮ್ಮೇಗೌಡ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾಲೂಕಿನ ಕುಂದೂರು ಗ್ರಾಮ ವ್ಯಾಪ್ತಿಯಿಂದ ಮಲ್ಲೇನಹಳ್ಳಿಯಲ್ಲಿ ಕೊನೆಗೊಳ್ಳುವ ಈ ವಿತರಣಾ ನಾಲೆಯನ್ನು ಸುಮಾರು 55 ಕೋಟಿ ರು. ವೆಚ್ಚದಲ್ಲಿ ನವೀಕರಣ ಕಾಮಗಾರಿ ಆರಂಭಿಸಲಾಗಿತ್ತು.ಗುತ್ತಿಗೆದಾರ ಲೆಕ್ಕಶೀರ್ಷಿಕೆಯಂತೆ ಗುಣಮಟ್ಟ ಕಾಪಾಡದೆ ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ. 31.25 ಕಿ.ಮೀ. ಉದ್ದ ಮಾಡಬೇಕಾಗಿದ್ದ ಕಾಮಗಾರಿಯನ್ನು ಗುತ್ತಿಗೆದಾರ 25 ಕಿ.ಮೀ ಗೆ ಮಿತಿಗೊಳಿಸಿಕೊಂಡು ಸರ್ಕಾರದ ಹಣವನ್ನು ನಷ್ಟ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಮಳೆ ನಡುವೆ ನಾಲಾ ಲೈನಿಂಗ್ ಮಾಡುತ್ತಿದ್ದು ಎಲ್ಲಿಯೂ ಕಬ್ಬಿಣದ ಬಳಕೆ ಮಾಡುತ್ತಿಲ್ಲ. ಕೇವಲ ಮೂರ್‍ನಾಲ್ಕು ಇಂಚಿನಷ್ಟು ಸಿಮೆಂಟ್ ಲೈನಿಂಗ್ ಮಾಡುತ್ತಿದ್ದು ಕಾಮಗಾರಿ ಹೀಗೆ ಸಾಗಿದರೆ ಒಂದು ವರ್ಷವೂ ಬಾಳಿಕೆ ಬರುವ ಲಕ್ಷಣ ಕಾಣುತ್ತಿಲ್ಲ. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಇಲಾಖೆಗೆ ಸಂಬಂಧಪಟ್ಟ ಇಂಜಿನಿಯರಾಗಲಿ ಅಥವಾ ಇತರೆ ಯಾವುದೇ ಅಧಿಕಾರಿಗಳಾಗಲಿ ಸ್ಥಳದಲ್ಲಿದ್ದು ಕಾಮಗಾರಿಯ ಗುಣಮಟ್ಟ ಪರೀಕ್ಷಿಸುತ್ತಿಲ್ಲ ಎಂದು ತಿಳಿಸಿದ್ದಾರೆ.ಗುತ್ತಿಗೆದಾರ ತನಗಿಷ್ಟ ಬಂದಂತೆ ಕಳಪೆ ಕಾಮಗಾರಿ ನಡೆಸುತ್ತಿದ್ದರೂ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ. ಗುತ್ತಿಗೆದಾರನ ಜೊತೆ ಅಧಿಕಾರಿಗಳು ಶಾಮೀಲಾಗಿರುವ ಅನುಮಾನವಿದೆ. ಶಾಸಕ ಹೆಚ್.ಟಿ.ಮಂಜು ರೈತಪರ ಕಾಳಜಿಯುಳ್ಳವರಾಗಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

Share this article