ಮೇ 20ರಿಂದ ಕೆಎಸ್ಸಾರ್ಟಿಸಿ ನೌಕರರ ಅನಿರ್ದಿಷ್ಟ ಮುಷ್ಕರ: ಅವರಗೆರೆ ಉಮೇಶ

KannadaprabhaNewsNetwork |  
Published : May 16, 2026, 02:00 AM IST
15ಕೆಡಿವಿಜಿ3-ದಾವಣಗೆರೆಯಲ್ಲಿ ಶುಕ್ರವಾರ ಕೆಎಸ್ಸಾರ್ಟಿಸಿ ಸ್ಟ್ಯಾಫ್ ಅಂಡ್ ವರ್ಕರ್ಸ್ ಯೂನಿಯನ್‌ ದಾವಣಗೆರೆ ವಿಭಾಗೀಯ ಅಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಸಾರಿಗೆ ನೌಕರರ 26 ತಿಂಗಳ ಬಾಕಿ ಹಣ 1272 ಕೋಟಿ ರು.ಗಳನ್ನು ಒಂದೇ ಕಂತಿನಲ್ಲಿ ಪಾವತಿಸುವುದೂ ಸೇರಿದಂತೆ ಪ್ರಮುಖ 6 ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮೇ 20ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಸಮಸ್ತ ನೌಕರರು ಅನಿರ್ದಿಷ್ಟಾವದಿ ಮುಷ್ಕರ ನಡೆಸಲಿದ್ದಾರೆ ಎಂದು ಕೆಎಸ್ಸಾರ್ಟಿಸಿ ಸ್ಟ್ಯಾಪ್ ಅಂಡ್ ವರ್ಕರ್ಸ್ ಯೂನಿಯನ್‌ ದಾವಣಗೆರೆ ವಿಭಾಗೀಯ ಅಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಾರಿಗೆ ನೌಕರರ 26 ತಿಂಗಳ ಬಾಕಿ ಹಣ 1272 ಕೋಟಿ ರು.ಗಳನ್ನು ಒಂದೇ ಕಂತಿನಲ್ಲಿ ಪಾವತಿಸುವುದೂ ಸೇರಿದಂತೆ ಪ್ರಮುಖ 6 ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮೇ 20ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಸಮಸ್ತ ನೌಕರರು ಅನಿರ್ದಿಷ್ಟಾವದಿ ಮುಷ್ಕರ ನಡೆಸಲಿದ್ದಾರೆ ಎಂದು ಕೆಎಸ್ಸಾರ್ಟಿಸಿ ಸ್ಟ್ಯಾಪ್ ಅಂಡ್ ವರ್ಕರ್ಸ್ ಯೂನಿಯನ್‌ ದಾವಣಗೆರೆ ವಿಭಾಗೀಯ ಅಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ಏಕಪಕ್ಷೀಯ ಮತ್ತು ಅನ್ಯಾಯದ ಧೋರಣೆ ಖಂಡಿಸಿ ಹಾಗೂ ಸಾರಿಗೆ ಕಾರ್ಮಿಕರ ಮತ್ತು ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಲ್ಕೂ ಸಾರಿಗೆ ನಿಗಮಗಳ ಸಮಸ್ತ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದು, ನೌಕರರ ಬೇಡಿಕೆ ಈಡೇರಿಸದ ಹೊರತು ಹೋರಾಟ ನಿಲ್ಲದು ಎಂದರು.

ಸರ್ಕಾರಿ ನೌಕರರಿಗೆ 4 ವರ್ಷ ಮೊದಲೇ 7ನೇ ವೇತನ ಆಯೋಗ ನೇಮಿಸಿ, ಶೇ.27.5ರಷ್ಟು ವೇತನ ಹೆಚ್ಚಿಸಿದ ಸರ್ಕಾರ, ಸಾರಿಗೆ ನೌಕರರ ವಿಷಯದಲ್ಲಿ ತೀವ್ರ ತಾರತಮ್ಯ ಮಾಡುತ್ತಿದೆ. ನಾಲ್ಕೈದು ದಶಕದಿಂದ ಪಾಲಿಸಿಕೊಂಡು ಬಂದಿದ್ದ ಸಂವಿಧಾನಬದ್ಧ ಕಾನೂನಾತ್ಮಕ ಹಕ್ಕುಗಳಿಗೆ ಈ ನಿರ್ಧಾರದಿಂದ ಚ್ಯುತಿ ಬಂದಿದೆ. ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾದರೆ ಎಸ್ಮಾ ಜಾರಿಗೊಳಿಸುವ ಬೆದರಿಕೆ ಹಾಕುವುದನ್ನು ರಾಜ್ಯ ಸರ್ಕಾರ, ಕೆಎಸ್ಸಾರ್ಟಿಸಿ ಅಧಿಕಾರಿಗಳು ಇನ್ನಾದರೂ ಬಿಡಲಿ ಎಂದರು.

ರಾಜ್ಯ ಸಾರಿಗೆ ನೌಕರರ ​ವೇತನ ಪರಿಷ್ಕರಣೆ ತಿದ್ದುಪಡಿಯಾದ ಸರ್ಕಾರವು ಫೆ.18ರಂದು ಏಕಪಕ್ಷೀಯ ಆದೇಶ ತಿದ್ದುಪಡಿ ಮಾಡಿ, 2023ರ ಡಿ.31ರಲ್ಲಿದ್ದ ಮೂಲವೇತನವನ್ನು ಶೇ.25ರಷ್ಟು ಹೆಚ್ಚಿಸಿ, 1.1.2024ರಿಂದ 4 ವರ್ಷದ ಅವದಿಗೆ ಜಾರಿಗೊಳಿಸಬೇಕು. ಕೈಗಾರಿಕಾ ಒಪ್ಪಂದಗಳ ಪ್ರಕಾರ 2020ರ ಜು.1ರಲ್ಲಿದ್ದ ಶೇ.31ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸಿ, ಹೊಸ ವೇತನ ಶ್ರೇಣಿ ರಚಿಸಬೇಕು ಎಂದು ಒತ್ತಾಯಿಸಿದರು.

ಅಲ್ಲದೇ, 2020ರ ಜ.1ರಿಂದ 2020ರ ಡಿ.31ರ ವರೆಗಿನ ಬಾಕಿ ಹಣವನ್ನು ಸೇವೆಯಲ್ಲಿರುವ ಮತ್ತು ನಿವೃತ್ತ ನೌಕರರಿಗೆ ತಕ್ಷಣ ಪಾವತಿಸಬೇಕು. 26 ತಿಂಗಳ ಬಾಕಿ ಹಣ 1,272 ಕೋಟಿ ರು.ಗಳನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು. ಫಾರಂ-4 ಸೇರಿದಂತೆ ಇತರೆ ಬೇಡಿಕೆಗಳನ್ನು ಜಂಟಿ ಕ್ರಿಯಾ ಸಮಿತಿ ಜತೆಗೆ ಚರ್ಚಿಸಿ ಒಂದು ತಿಂಗಳ ಕಾಲಮಿತಿಯಲ್ಲಿಯೇ ಪರಿಹರಿಸಬೇಕು ಎಂದರು.

ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ಏ.29ರ ಸಭೆಯ ತೀರ್ಮಾನದಂತೆ 38 ತಿಂಗಳ ಹಿಂಬಾಕಿ ಹಣದಲ್ಲಿ 26 ತಿಂಗಳ ಬಾಕಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಉಳಿದ 12 ತಿಂಗಳ ಬಾಕಿ ಹಣ ನೀಡಲು ಹಾಗೂ ಶೇ.25ರಷ್ಟು ವೇತನ ಹೆಚ್ಚಳಕ್ಕೆ ಜಂಟಿ ಕ್ರಿಯಾ ಸಮಿತಿ ಒತ್ತಾಯಿಸಿತ್ತು. ಸಚಿವರು ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ, ಇನ್ನೊಮ್ಮೆ ಸಭೆ ಕರೆಯುವುದಾಗಿ ಭರವಸೆ ನೀಡಿದ್ದರು. ಆದರೆ, ಸರ್ಕಾರ ನೀಡಿದ ಭರವಸೆಯನ್ನೇ ಮರೆತಿತು ಎಂದು ದೂರಿದರು.

ಮೇ 12ರಂದು ಏಕಪಕ್ಷೀಯವಾಗಿ ಮೂಲವೇತನದಲ್ಲಿ ಕೇವಲ ಶೇ.12.5ರಷ್ಟು ಹೆಚ್ಚಳವನ್ನು 1.4.2025ರಿಂದ ಅನ್ವಯವಾಗುವಂತೆ ಘೋಷಿಸಿ ಆದೇಶ ಹೊರಡಿಸಿದೆ. ಇದು ಸಾರಿಗೆ ನೌಕರರಿಗೆ ಮಾಡಿದ ದ್ರೋಹವಾಗಿದೆ. ​ಸರ್ಕಾರ ಹಠಮಾರಿ ಧೋರಣೆ ಕೈಬಿಟ್ಟು, ಹೊರಡಿಸಿರುವ ಎರಡೂ ಏಕಪಕ್ಷೀಯ ಆದೇಶ ಹಿಂಪಡೆಯಲಿ. ಜಂಟಿ ಕ್ರಿಯಾ ಸಮಿತಿ ಜತೆ ಪ್ರಾಮಾಣಿಕ ಚರ್ಚೆ ನಡೆಸಿ ನ್ಯಾಯಸಮ್ಮತ ಬೇಡಿಕೆ ಈಡೇರಿಸಲಿ. ಇಲ್ಲದಿದ್ದರೆ ಮೇ 20ರಿಂದ ನಾಲ್ಕೂ ನಿಗಮದ ವ್ಯಾಪ್ತಿಯಲ್ಲಿ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಎಚ್ಚರಿಸಿದರು.

ಸಂಘಟನೆಯ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಮಿರ್ಜಾ ರಹಮತ್ ಉಲ್ಲಾ, ಉಪಾಧ್ಯಕ್ಷ ಪ್ರಕಾಶ, ಸಂಘಟನಾ ಕಾರ್ಯದರ್ಶಿ ಆನಂದ ನಾಯ್ಕ, ಹರಿಹರದ ಈಶ್ವರ ಬಣವಿ, ದಿಳ್ಯಪ್ಪ ಕಾಂಬ್ಳೇರ್‌ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿಯುವ ನೀರು, ಮೂಲ ಸೌಲಭ್ಯಕ್ಕೆ ಸೂಚನೆ: ಸಮರ್ಥ
ತುಷ್ಟೀಕರಣದ ಹಿಜಾಬ್ ಅನುಮತಿ ಹಿಂಪಡೆಯಿರಿ: ಶ್ರೀರಾಮ ಸೇನೆ