ಶಿರಸಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗದಲ್ಲಿ ಬಸ್‌ಗಳು ಪದೇ ಪದೇ ಕೆಟ್ಟು ನಿಲ್ಲುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ. ಈ ವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಸಾರ್ವಜನಿಕರು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಅನಂತಮೂರ್ತಿ ಹೆಗಡೆ, ಬಸ್ಸುಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಎಷ್ಟೇ ಮನವಿ ಮಾಡಿದರೂ ಈ ಕುರಿತು ಸಂಬಂಧಪಟ್ಟವರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಂದಾಗಿನಿಂದ ಕೆಎಸ್‌ಆರ್‌ಟಿಸಿಗೆ ಗ್ರಹಣ, ಗ್ರಹಚಾರ ಹಿಡಿದಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ನೀಡಿದ ಆನಂತರದಲ್ಲಿ ರಸ್ತೆ ಸಾರಿಗೆ ಸಂಸ್ಥೆಗೆ ಶಕ್ತಿ ತುಂಬುವ ಕಾರ್ಯವನ್ನು ಸರ್ಕಾರ ಮಾಡಿಲ್ಲ. ಎಷ್ಟೋ ಗ್ರಾಮೀಣ ಪ್ರದೇಶದ ಬಸ್‌ಗಳು ವಾರದಲ್ಲಿ ಮೂರು ದಿನ ಕೆಟ್ಟು ನಿಲ್ಲುತ್ತಿವೆ. ರಸ್ತೆಯೂ ಸುಸ್ಥಿತಿಯಲ್ಲಿಲ್ಲ, ಬಸ್‌ಗಳು ಸರಿಯಾದ ಸ್ಥಿತಿಯಲ್ಲಿಲ್ಲ. ಸರ್ಕಾರ ಈ ಭಾಗದ ಜನರ, ವಿದ್ಯಾರ್ಥಿಗಳ ಜೀವನದ ಜತೆ ಆಟ ಆಡುತ್ತಿದೆ ಎಂದು ಆರೋಪಿಸಿದರು.ನಿವೃತ್ತ ಆರ್‌ಟಿಒ ಜಿ.ಎಸ್. ಹೆಗಡೆ ಮಾತನಾಡಿ, ಉತ್ತರ ಕನ್ನಡ ರಾಷ್ಟ್ರೀಕೃತ ಜಿಲ್ಲೆಯಾದ್ದರಿಂದ ಇಲ್ಲಿಂದ ಹೊಸ ಬಸ್ ಬಿಡಲು ಉಳಿದ ಜಿಲ್ಲೆಗಳಿಗೆ ಬೇಕಾದಂತೆ ಯಾವುದೇ ರೀತಿ ಅನುಮತಿ ಬೇಕಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಪ್ರಸ್ತುತ ಡಿಸಿ ಅವರು ಬಸ್‌ಗಳ ಅಗತ್ಯತೆ ಬಗ್ಗೆ ಸರ್ವೆಗೆ ಆದೇಶ ನೀಡಬೇಕು. ವಾಕರಸಾಸಂ ಈಗ ಯಾವ ಮಾರ್ಗದಲ್ಲಿ ಲಾಭ ಇದೆಯೋ ಆ ಮಾರ್ಗದಲ್ಲಿ ಮಾತ್ರ ಬಸ್ ಗಳನ್ನು ಓಡಿಸುತ್ತಿದೆ. ರಸ್ತೆ ಸಾರಿಗೆ ಸಂಸ್ಥೆಯ ಉದ್ದೇಶ ಲಾಭ ಗಳಿಸುವಿಕೆಯಲ್ಲ. ಬಸ್ ವ್ಯವಸ್ಥೆ ಸಮರ್ಪಕವಾಗಿದ್ದರೆ ಇಲ್ಲಿಯ ಪ್ರವಾಸೋದ್ಯಮವೂ ಬೆಳೆಯಲಿದೆ ಎಂದರು. ಬಿಸಿಲುಕೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ ರಾಘವೇಂದ್ರ ನಾಯ್ಕ ಮಾತನಾಡಿ, ಗ್ರಾಮೀಣ ಭಾಗಗಳಿಗೆ ಬಿಡುವ ಹಳೇ ಬಸ್ ಹೋದಲ್ಲೇ ಕೆಟ್ಟು ನಿಲ್ಲುತ್ತಿದೆ. ಉಚಿತ ಯೋಜನೆಯನ್ನು ಮಕ್ಕಳಿಗೆ ಮಾತ್ರ ನೀಡಿದರೆ ಸಾಕಿತ್ತು. ಯಾರು ಕೂಡ ಶಕ್ತಿ ಯೋಜನೆ ನೀಡಿ ಎಂದು ಹೇಳಿಲ್ಲ. ಸರ್ಕಾರ ಅವೈಜ್ಞಾನಿಕ ಯೋಜನೆಯನ್ನು ಜಾರಿ ಮಾಡಿದ್ದರಿಂದ ಜನರಿಗೆ ತೊಂದರೆಯಾಗುತ್ತಿದೆ. ಮತ್ತೆ ಇದೆ ರೀತಿ ಹಾಳಾದ ಬಸ್‌ಗಳನ್ನೇ ಗ್ರಾಮೀಣ ಭಾಗಕ್ಕೆ ಬಿಟ್ಟರೆ ತೀವ್ರ ಹೋರಾಟ ಕೈಗೊಳ್ಳುತ್ತೇವೆ ಎಂದರು.
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ್ ಕುಪ್ಪಳ್ಳಿ, ನಾರಾಯಣ ಹೆಗಡೆ ಮತ್ತಿಘಟ್ಟ, ಚಂದ್ರಕಾಂತ ಹೆಗಡೆ ನೇರ್ಲದ್ದ ಇತರರಿದ್ದರು. ಗುಣಮಟ್ಟದ ಸೇವೆಗೆ ಶ್ರಮಿಸುತ್ತೇವೆ: ಮನವಿ ಸ್ವೀಕರಿಸಿ ಮಾತನಾಡಿದ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮಣ್ಣನವರ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡಲು ಶ್ರಮಿಸುತ್ತಿದೆ. ಶೀಘ್ರವೇ ಶಿರಸಿ ವಿಭಾಗಕ್ಕೆ ೩೦೦ ಹೊಸ ಬಸ್‌ಗಳನ್ನು ಪೂರೈಸಲಾಗುತ್ತಿದೆ. ಮೆಕ್ಯಾನಿಕ್ ವಿಭಾಗದಲ್ಲಿ ಕೊರತೆ ಇರುವುದು ನಿಜ, ಇನ್ನೂ ೮೦ರಷ್ಟು ಮೆಕಾನಿಕ್‌ಗಳು ಶಿರಸಿ ವಿಭಾಗಕ್ಕೆ ಅಗತ್ಯತೆ ಇದೆ. ಶಿರಸಿ ವಿಭಾಗದಲ್ಲಿ ಖಾಲಿ ಇರುವ ೩೧೨ ಚಾಲಕರ ಹುದ್ದೆ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದರು.