ವಿಕಲಚೇತನರ ಜತೆ ಕುಮಾರಸ್ವಾಮಿ ಸಂಕ್ರಾಂತಿ ಆಚರಣೆ

KannadaprabhaNewsNetwork |  
Published : Jan 16, 2026, 01:15 AM IST
15ಕೆಆರ್ ಎಂಎನ್ 10.ಜೆಪಿಜಿಬಿಡದಿ ತೋಟದ ಮನೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರೊಂದಿಗೆ ವಿಶೇಷ ಚೇತನರು ಸಂಕ್ರಾಂತಿ ಹಬ್ಬ ಆಚರಿಸಿದರು. | Kannada Prabha

ಸಾರಾಂಶ

ರಾಮನಗರ: ಬೆಸ್ಕಾಂ ಸೇರಿದಂತೆ ಕೆಪಿಟಿಸಿಎಲ್ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 600ಕ್ಕೂ ಹೆಚ್ಚು ವಿಕಲಚೇತನ ಉದ್ಯೋಗಿಗಳು ಬಿಡದಿಯ ತೋಟದ ಮನೆಯಲ್ಲಿ ತಮ್ಮೊಂದಿಗೆ ಸಂಕ್ರಾಂತಿ ಆಚರಿಸುವ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭಾವುಕರಾದರು.

ರಾಮನಗರ: ಬೆಸ್ಕಾಂ ಸೇರಿದಂತೆ ಕೆಪಿಟಿಸಿಎಲ್ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 600ಕ್ಕೂ ಹೆಚ್ಚು ವಿಕಲಚೇತನ ಉದ್ಯೋಗಿಗಳು ಬಿಡದಿಯ ತೋಟದ ಮನೆಯಲ್ಲಿ ತಮ್ಮೊಂದಿಗೆ ಸಂಕ್ರಾಂತಿ ಆಚರಿಸುವ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭಾವುಕರಾದರು.

ಕಳೆದ 7 ವರ್ಷಗಳಿಂದ ತಮ್ಮಲ್ಲಿಗೆ ಬಂದು ಸಂಕ್ರಾಂತಿ ಆಚರಿಸುತ್ತಿರುವ ಎಲ್ಲಾ ವಿಕಲಚೇತನ ಕುಟುಂಬ ಸದಸ್ಯರನ್ನು ಭೇಟಿಯಾದ ಸಚಿವರಿಗೆ ತಂದೆ ತಾಯಿ, ಮಕ್ಕಳ ಸಮೇತ ಬಂದ ವಿಶೇಷಚೇತನರು ಸಚಿವರಿಗೆ ಎಳ್ಳುಬೆಲ್ಲ ತಿನ್ನಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಅಷ್ಟು ಕುಟುಂಬಗಳನ್ನು ಕಂಡು ಭಾವುಕರಾದ ಸಚಿವರು, ವಿಶೇಷವಾಗಿ ಮಕ್ಕಳ ಜತೆ ಸಮಯ ಕಳೆದರು. ನಿಮ್ಮನ್ನು ನೋಡುತ್ತಿದ್ದರೆ ನನ್ನ ಹೃದಯ ತುಂಬಿ ಬರುತ್ತಿದೆ. ದೇವರು ಕೊಟ್ಟ ಸಣ್ಣ ಅವಕಾಶದಲ್ಲಿ ನಿಮಗೆ ಸಹಾಯ ಮಾಡುವ ಅವಕಾಶ ಸಿಕ್ಕಿತು. ಅದನ್ನೇ ನೀವೆಲ್ಲರೂ ಹೃದಯದಲ್ಲಿಟ್ಟುಕೊಂಡು ನನ್ನ ಮೇಲೆ ಪ್ರೀತಿ, ವಾತ್ಸಲ್ಯ ತೋರುತ್ತಿರುವುದು ನನ್ನ ಜೀವನಕ್ಕೆ ಸಾರ್ಥಕತೆ ತಂದಿದೆ ಎಂದು ಕುಮಾರಸ್ವಾಮಿ ಹೇಳಿದರು.

ಸಚಿವರ ಕಣ್ಣಲ್ಲಿ ನೀರು ತುಂಬಿಕೊಂಡಿದ್ದನ್ನು ಕಂಡ ಎಲ್ಲರೂ ಕ್ಷಣಕಾಲ ಸ್ತಬ್ಧರಾದಲ್ಲದೇ, ನಮಗೆ ನಿಮ್ಮ ಆರೋಗ್ಯ ಮುಖ್ಯ. ಸದಾಕಾಲ ನೀವು ಆರೋಗ್ಯವಂತರಾಗಿ ಇರಬೇಕು ಎಂದು ಹಾರೈಸಿದರು. ನಿಮ್ಮ ಜೀವನ ಎಲ್ಲರಿಗೂ ಮಾದರಿ. ಶ್ರಮ ವಹಿಸಿ ಕೆಲಸ ಮಾಡುತ್ತೀರಿ. ಸರ್ಕಾರ ನೀಡುವ ಸಂಬಳದಿಂದ ಉತ್ತಮ ಬದುಕು ಕಟ್ಟಿಕೊಂಡಿದ್ದೀರಿ. ನಿಮ್ಮ ಜೀವನ, ಬೆಳವಣಿಗೆ ಸಮಾಜಕ್ಕೆ ಮಾದರಿ. ನೀವು, ನಿಮ್ಮ ಕುಟುಂಬಗಳು, ನಿಮ್ಮ ಮಕ್ಕಳು ಇನ್ನೂ ಎತ್ತರದ ಸಾಧನೆ ಮಾಡಬೇಕು ಎಂದು ಸಚಿವರು ವಿಕಲಚೇತನ ಕುಟುಂಬ ಸದಸ್ಯರಿಗೆ ಶುಭ ಹಾರೈಸಿದರು.

ಈ ವಿಶೇಷಚೇತನರೆಲ್ಲರು ಯಾರು:

2006ರಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಜನತಾದರ್ಶನ ನಡೆಯುತ್ತಿದ್ದ ಸಂದರ್ಭದಲ್ಲಿ ಅಪಾರ ಪ್ರಮಾಣದ ವಿಕಲಚೇತನರು ಉದ್ಯೋಗ ಅರಸಿ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಲು ಬರುತ್ತಿದ್ದರು. ವಿಕಲಚೇತನರ ಬವಣೆಯನ್ನು ಕಣ್ಣಾರೆ ಕಂಡ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ, ಬೆಸ್ಕಾಂ ಸೇರಿ ಕೆಪಿಟಿಸಿಎಲ್ ವಿವಿಧ ವಿಭಾಗಗಳಲ್ಲಿ ಗುತ್ತಿಗೆ ಆಧಾರದ ಮೇಲೆ 600ಕ್ಕೂ ಹೆಚ್ಚು ವಿಕಲಚೇತನರನ್ನು ನೇಮಕ ಮಾಡಿದರು.

ಅದಾದ ನಂತರ 2018ರವರೆಗೂ ಇಷ್ಟು ಉದ್ಯೋಗಿಗಳ ಸೇವೆ ಕಾಯಂ ಆಗಲಿಲ್ಲ. ಅದುವರೆಗೂ ಯಾವುದೇ ಸರ್ಕಾರ ಈ ವಿಕಲಚೇತನರ ಕಷ್ಟಕ್ಕೆ ಸ್ಪಂದಿಸಿರಲಿಲ್ಲ. 2018ರಲ್ಲಿ ಮತ್ತೆ ಸಿಎಂ ಆಗಿಬಂದ ಕುಮಾರಸ್ವಾಮಿ ಅವರು, 2006ರಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲ್ಪಟ್ಟ ಎಲ್ಲ ವಿಕಲಚೇತನ ಉದ್ಯೋಗಿಗಳ ನೇಮಕಾತಿಯನ್ನು ಕಾಯಂ ಮಾಡಿದರು. ಎಸ್ಸೆಸ್ಸೆಲ್ಸಿ ಪಾಸಾಗಿದ್ದ 300, ಪದವಿ ಉತ್ತೀರ್ಣರಾಗಿದ್ದ 300 ವಿಕಲಚೇತನ ಅಭ್ಯರ್ಥಿಗಳಿಗೆ ಇಂಧನ ಇಲಾಖೆಯಲ್ಲಿ ಉದ್ಯೋಗವಕಾಶ ಕಲ್ಪಿಸಿದ್ದರು. 2019 ಜನವರಿ 14ರಂದು ಸಂಕ್ರಾಂತಿ ಹಬ್ಬದ ದಿನದಂದೇ ಎಚ್ಡಿಕೆ ಅವರು ಸೇವೆ ಕಾಯಂ ಮಾಡಿ ಆದೇಶ ಹೊರಡಿಸಿದರು. ಇದು 600ಕ್ಕೂ ಹೆಚ್ಚು ವಿಕಲಚೇತನ ಕುಟುಂಬಗಳಲ್ಲಿ ಸಂಭ್ರಮ ತಂದಿತು.

ನಿಮ್ಮ ಪ್ರೀತಿಯೇ ಶ್ರೀರಕ್ಷೆ :

ಈ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರಿದ ಸಚಿವರು, ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ. ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಕ್ಕೆ ನಾನು ಆಭಾರಿ. ನಿಮ್ಮ ಹಾರೈಕೆ ಪ್ರೀತಿಯೇ ನನಗೆ ಶ್ರೀರಕ್ಷೆ ಎಂದು ಭಾವುಕರಾದರು.

ಅವಕಾಶ ಸಿಕ್ಕಿದಾಗ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ವಿಕಲಚೇತನರಿಗೆ ಸಾಧ್ಯವಾದಷ್ಟು ನೆರವು ಕೊಟ್ಟಿದ್ದೇನೆ. ಮುಂದೆಯೂ ದೈಹಿಕವಾಗಿ ಶಕ್ತಿ ಇಲ್ಲದ ಯಾರೇ ಇದ್ದರೂ ಅವರಿಗಾಗಿ ನನ್ನ ಹೃದಯ ಮಿಡಿಯುತ್ತದೆ. ಪ್ರಾಮಾಣಿಕವಾಗಿ ಅಂತಹವರ ಒಳಿತಿಗಾಗಿ ಪ್ರಯತ್ನಿಸುತ್ತೇನೆ ಎಂದರು.

ಸಮಾಜದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಕಷ್ಟದಲ್ಲಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಮುಂದಿನ ದೇವರು ಅವಕಾಶ ಕೊಡಬಹುದು ಎಂದು ನಂಬಿದ್ದೇನೆ. ನಿಮ್ಮ ಮಕ್ಕಳಿಗೆ ಶುಭವಾಗಲಿ, ಅವರನ್ನು ಚೆನ್ನಾಗಿ ಓದಿಸಿ ಎಂದು ಕುಮಾರಸ್ವಾಮಿ ಕಿವಿಮಾತು ಹೇಳಿದರು.

ಕೇಂದ್ರ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ಉದ್ಯೋಗಿಗಳು, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವಾಗ ನಮ್ಮ ವೇತನ 3 ಸಾವಿರ ಇತ್ತು. ನಮ್ಮ ಸೇವೆ ಕಾಯಂ ಆದ ಮೇಲೆ 80ರಿಂದ 90 ಸಾವಿರ, ಒಂದು ಲಕ್ಷ ಮೀರಿ ವೇತನ ಪಡೆಯುತ್ತಿದ್ದೇವೆ. ನಾವು ಸ್ವಂತ ಮನೆ ಕಟ್ಟಿಕೊಂಡಿದ್ದೇವೆ, ಸ್ವಂತ ಕಾರು ಖರೀದಿ ಮಾಡಿದೇವೆ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಮಾಡಿಸುತ್ತಿದ್ದೇವೆ. ಇದೆಲ್ಲವೂ ಸಾಧ್ಯವಾಗಿದ್ದು ಕುಮಾರಸ್ವಾಮಿ ಅವರಿಂದ. ಹೀಗಾಗಿ ನಾವು ಸಂಕ್ರಾಂತಿ ಹಬ್ಬವನ್ನು ಪ್ರತಿ ವರ್ಷ ಅವರ ಜತೆಯಲ್ಲಿ ಆಚರಿಸುತ್ತೇವೆ ಎಂದು ವಿಕಲಚೇತನ ಉದ್ಯೋಗಿಗಳು ಹೇಳಿದರು.

15ಕೆಆರ್ ಎಂಎನ್ 10.ಜೆಪಿಜಿ

ಬಿಡದಿ ತೋಟದ ಮನೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರೊಂದಿಗೆ ವಿಶೇಷ ಚೇತನರು ಸಂಕ್ರಾಂತಿ ಹಬ್ಬ ಆಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಯೂಟದಲ್ಲಿ ಶುಚಿತ್ವಕ್ಕೆ ಆದ್ಯತೆ ಇರಲಿ: ಡಾ. ಈಶ್ವರ ಉಳ್ಳಾಗಡ್ಡಿ
ಶಿರಸಂಗಿ ಲಿಂಗರಾಜರ ಜೀವನ ಮಹಾಕಾವ್ಯಕ್ಕಿಂತಲೂ ಮಿಗಿಲು: ಡಾ. ವಿ.ಕೆ. ದ್ಯಾಮನಗೌಡ್ರ