ಕನ್ನಡಪ್ರಭ ವಾರ್ತೆ ಆಲೂರು
ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿ ಅವರ ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ನಂತರ ಮಾತನಾಡಿದ ರೈತ ಮುಖಂಡ ಎಚ್ ಬಿ ಧರ್ಮರಾಜ್ ಸರ್ಕಾರದ ಬೊಕ್ಕಸಕ್ಕೆ ಅತ್ಯಂತ ಹೆಚ್ಚು ತೆರಿಗೆ ಹಣವನ್ನು ನೀಡುತ್ತಿದ್ದ ಸಾರಾಯಿ ಹಾಗೂ ಲಾಟರಿ ನಿಷೇಧವನ್ನು ಕೆಚ್ಚೆದೆಯಿಂದ ಮಾಡಿದ ಮುಖ್ಯಮಂತ್ರಿ ಕುಮಾರಣ್ಣನವರು ನೂರು ಕಾಲ ಬಾಳಬೇಕು, ತಮ್ಮ ಅಧಿಕಾರವಧಿಯಲ್ಲಿ ಬಡಜನರು, ದೀನದಲಿತರ ಪರ ಹಲವಾರು ಯೋಜನೆಗಳನ್ನು ಕೈಗೊಂಡ ಇಂತಹ ಜನಾನುರಾಗಿ ಮುಖಂಡ ಮತ್ತೊಮ್ಮೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕೆಂದು ನಮ್ಮೆಲ್ಲರ ಆಶಯವಾಗಿದೆ. ದೇವರು ಇವರಿಗೆ ಆಯುರ್ ಆರೋಗ್ಯವನ್ನು ಕಲ್ಪಿಸಲೆಂದು ಎಲ್ಲಾ ಅಭಿಮಾನಿಗಳ ಪರವಾಗಿ ಬೇಡಿಕೊಳ್ಳುವುದಾಗಿ ತಿಳಿಸಿದರು.
ಜೆಡಿಎಸ್ ಮುಖಂಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಲೋಕೇಶ್ ಮಾತನಾಡಿ, ಕುಮಾರಣ್ಣನವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರೈತ ಸಾಲಮನ್ನಾ, ಗ್ರಾಮ ವಾಸ್ತವ್ಯ, ಜನತಾದರ್ಶನ ಮತ್ತು ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಬೈಸಿಕಲ್ ವಿತರಣೆ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಕೈಗೊಂಡಿದ್ದರು. ಬಡಜನರ ಅಭ್ಯುದಯಕ್ಕಾಗಿ ಉತ್ತಮ ಯೋಜನೆಗಳನ್ನು ರೂಪಿಸುವ ಇಂತಹ ರಾಜಕಾರಣಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂದು ತಿಳಿಸಿದರು.ಜೆಡಿಎಸ್ ಮುಖಂಡ ಕಿರಳ್ಳಿ ಕುಮಾರ್ ಮಾತನಾಡಿ ಕೇಂದ್ರ ಸಚಿವರಾಗಿ ಭದ್ರಾವತಿಯ ಉಕ್ಕಿನ ಕಾರ್ಖಾನೆಯನ್ನು ಪ್ರಾರಂಭಿಸಲು ಅವಿರತ ಶ್ರಮಿಸುತ್ತಿರುವ ಇಂತಹ ಒಬ್ಬ ಜನಾನುರಾಗಿ ಮುಖಂಡರಿಗೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತಮವಾದ ಖಾತೆಯನ್ನೇ ನೀಡಿದ್ದಾರೆ. ಆದರೆ ಕುಮಾರಣ್ಣ ಕೇಂದ್ರದಲ್ಲಿರುವುದಕ್ಕಿಂತ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವುದು ನಮ್ಮೆಲ್ಲರ ಆಶಯವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಶಾಸಕರನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ಅವರು ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದು ಜನಪ್ರಕಾರಗಳನ್ನು ಮಾಡಲು ದೇವರು ಅವರಿಗೆ ಆರೋಗ್ಯ ಭಾಗ್ಯವನ್ನು ನೀಡಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹುಣಸವಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜೈಪಾಲ್ ತಾಲೂಕು ಎಚ್ ಡಿ ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಅಧ್ಯಕ್ಷ ಸುದರ್ಶನ್ ಪಾಣಿ, ಮಂಜ, ಕೃಷ್ಣ, ಶ್ರೀ ವಿನಾಯಕ ಯುವಕರ ಬಳಗದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.