ಜನಸ್ನೇಹಿ‌ ಪೊಲೀಸ್ ಅಧಿಕಾರಿಗೆ ಸಹಸ್ರಾರು ಅಭಿಮಾನಿಗಳ ಕಂಬನಿ

KannadaprabhaNewsNetwork |  
Published : Mar 02, 2026, 03:15 AM IST
police

ಸಾರಾಂಶ

ಭಾನುವಾರ ಬೆಳಗ್ಗೆ ಉಡುಪಿ‌ ಜಿಲ್ಲಾ ಪೊಲೀಸ್‌ ಮ್ಯಾರಥಾನ್ ನಲ್ಲಿ ಓಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಉಪ ನಿರೀಕ್ಷಕ ನಾಸಿರ್ ಹುಸೇನ್ ಅವರ ಅಂತಿಮ ದರ್ಶನದಲ್ಲಿ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿ ಕಂಬನಿ‌ ಮಿಡಿದರು.

ಕುಂದಾಪುರ: ಭಾನುವಾರ ಬೆಳಗ್ಗೆ ಉಡುಪಿ‌ ಜಿಲ್ಲಾ ಪೊಲೀಸ್‌ ಮ್ಯಾರಥಾನ್ ನಲ್ಲಿ ಓಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಉಪ ನಿರೀಕ್ಷಕ ನಾಸಿರ್ ಹುಸೇನ್ ಅವರ ಅಂತಿಮ ದರ್ಶನದಲ್ಲಿ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿ ಕಂಬನಿ‌ ಮಿಡಿದರು.ಜನಾನುರಾಗಿ ಅಧಿಕಾರಿಯಾಗಿ ಸಿಬ್ಬಂದಿಗಳು ಹಾಗೂ ಸಾರ್ವಜನಿಕರೊಂದಿಗೆ ಉತ್ತಮ‌ ಸಂಬಂಧ ಹೊಂದಿದ್ದ‌ ಅವರ ಸಾವಿನ ವಾರ್ತೆಯನ್ನು ಅರಗಿಸಿಕೊಳ್ಳಲಾಗದ ಅವರೊಂದಿಗೆ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗಳು ಹಾಗೂ ಆತ್ಮೀಯರು ಕಣ್ಣೀರಿಡುತ್ತಿದ್ದ ದೃಶ್ಯ ಮನಕರಗಿಸುತ್ತಿತ್ತು. 

ಉಡುಪಿಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿದ ಬಳಿಕ ಮಧ್ಯಾಹ್ನ 2:45ರ ವೇಳೆಗೆ ಕಂಡ್ಲೂರು ಪೊಲೀಸ್ ಠಾಣೆ ಸಮೀಪದ‌ ಮೈದಾನಕ್ಕೆ ಪಾರ್ಥೀವ ಶರೀರವನ್ನು ತರಲಾಯಿತು. ಸರದಿಯಲ್ಲಿ ಬಂದ ಜನಸಾಗರ ಜಾತಿ- ಮತ, ಪಕ್ಷ-ಭೇದಗಳನ್ನು‌ ಮರೆತು ಅಂತಿಮ ದರ್ಶನ ಪಡೆದರು. 

ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ, ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಡಿವೈಎಸ್ಪಿ ಬೆಳ್ಳಿಯಪ್ಪ, ಜಿಲ್ಲಾ ಗೃಹರಕ್ಷಕ ದಳದ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ., ಜಿಲ್ಲಾ ಪೊಲೀಸ್ ಕಚೇರಿಯ ಅಧೀಕ್ಷಕ ಗೋಪಾಲ ಕೃಷ್ಣ, ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್, ರಾಮಚಂದ್ರ ನಾಯ್ಕ್, ಜಯರಾಮ್ ಗೌಡ, ಸಂತೋಷ್ ಕಾಯ್ಕಿಣಿ, ಶಿವಕುಮಾರ್, ಉಪ ನಿರೀಕ್ಷಕರಾದ ನಂಜಾ ನಾಯ್ಕ್, ಭೀಮಾ ಶಂಕರ್, ಯೂನಸ್ ಗಡ್ಡೇಕರ್, ವಿನಯ್ ಕೊರ್ಲಹಳ್ಳಿ, ಅಶೋಕ್ ಕುಮಾರ್, ಚಂದ್ರಕಲಾ, ಪ್ರಸನ್ನ, ಸುಧಾ ಪ್ರಭು, ಸ್ಥಳೀಯ ಪ್ರಮುಖರಾದ ಮಲ್ಯಾಡಿ ಶಿವರಾಮ್ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಮೊಹಮ್ಮದ್ ಫಝಲ್, ಅಫ್ಝಲ್ ಹೈಕಾಡಿ, ಹನೀಫ್ ಗುಲ್ವಾಡಿ, ಇಬ್ರಾಹಿಂ ಗಂಗೊಳ್ಳಿ, ಮೊಹಮ್ಮದ್ ಮುನಾಫ್, ಅಬು ಮೊಹಮ್ಮದ್ ಕುಂದಾಪುರ, ವಿಜಯ ಪುತ್ರನ್, ಸದಾನಂದ ಬಳ್ಕೂರು, ಸಾಮ್ರಾಟ್ ಶೆಟ್ಟಿ, ಜಾಯ್ ಕರ್ವೆಲ್ಲೊ, ಹರೀಶ್ ತೋಳಾರ್, ದಿನೇಶ್ ಆಚಾರ್ಯ, ಮನ್ಸೂರ್ ಮರವಂತೆ, ಮುನಾಫ್ ಕೋಡಿ, ಸದಾನಂದ ಉಪ್ಪಿನಕುದ್ರು, ಸುನಿಲ್ ಶೆಟ್ಟಿ ಹೇರಿಕುದ್ರು, ಕಿರಣ್ ಹೆಗ್ಡೆ ಅಂಪಾರು, ಸದಾಶಿವ ಶೆಟ್ಟಿ ಶಂಕರನಾರಾಯಣ, ಪ್ರಕಾಶ್ ಶೆಟ್ಟಿ ಬಲಾಡಿ, ಉದಯ್ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಹುಸೇನ್ ಹೈಕಾಡಿ ಮತ್ತಿತರರು ಗೌರವ ಸಲ್ಲಿಸಿದರು.

ಸರ್ಕಾರಿ ಗೌರವ 

: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ನೇತೃತ್ವದಲ್ಲಿ ಜಿಲ್ಲಾ ಶಸಸ್ತೃ ಪಡೆಯ ನಿರೀಕ್ಷಕ ರವಿ ಮತ್ತು ತಂಡವದವರು ಅಗಲಿದ ಅಧಿಕಾರಿಗೆ ಇಲಾಖೆ ವತಿಯಿಂದ ಗೌರವ ವಂದನೆ ಸಲ್ಲಿಸಿದರು. ಮೃತ ಅಧಿಕಾರಿಯ ಗೌರವಾರ್ಥ ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಹಾರಿಸಲಾಯಿತು‌. ಇಲಾಖೆ ಗೌರವ ರಕ್ಷೆ ಬಳಿಕ ಮುಸ್ಲಿಂ ಬಾಂಧವರು ದುಆ ಪ್ರಾರ್ಥನೆ ಮೂಲಕ ನಾಸಿರ್ ಹುಸೇನ್ ಅವರಿಗೆ ಅಂತಿಮ ವಿದಾಯ ಹೇಳಿದರು. ಕಂಡ್ಲೂರಿನಲ್ಲಿ ಗೌರವ ವಿಧಿಗಳು ಮುಕ್ತಾಯವಾದ ಬಳಿಕ ಪಾರ್ಥೀವ ಶರೀರವನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡುಗೆರೆ ತಾಲೂಕಿನ ಗೋಣಿಬೀಡಿಗೆ ಕೊಂಡೊಯ್ಯಲಾಯಿತು. ಗೋಣಿಬೀಡಿನಲ್ಲಿ ಭಾನುವಾರ ಸಂಜೆ ದಫನ ಕಾರ್ಯಗಳನ್ನು ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ‌. 

ಜನಸ್ನೇಹಿ ಅಧಿಕಾರಿ: 

19 ವರ್ಷಗಳ‌ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಬಳಿಕ ಕರ್ನಾಟಕ ಪೊಲೀಸ್ ಇಲಾಖೆಯ ಪಶ್ಚಿಮ ವಲಯಕ್ಕೆ ಉಪ ನಿರೀಕ್ಷಕರಾಗಿ ನಿಯೋಜನೆಗೊಂಡಿದ್ದ‌ ನಾಸಿರ್ ಹುಸೇನ್ ತಮ್ಮ‌ ಕರ್ತವ್ಯದ ಅವಧಿಯಲ್ಲಿ ಜನಸ್ನೇಹಿಯಾಗಿ ಹೆಸರು ಗಳಿಸಿದ್ದರು. ಚಿಕ್ಕಮಗಳೂರು, ಉಡುಪಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದ ಅವರು, ಕುಂದಾಪುರ ಪೊಲೀಸ್ ಉಪ ವಿಭಾಗದಲ್ಲಿ ಹೆಚ್ಚು ಅವಧಿಯ ಸೇವೆ ಸಲ್ಲಿಸಿದ್ದರು. ಅಮಾಸೆಬೈಲು, ಬೈಂದೂರು, ಕುಂದಾಪುರ, ಅಜೆಕಾರು, ಕಾರ್ಕಳ ಗ್ರಾಮಾಂತರ, ಶಂಕರನಾರಾಯಣ, ಕೊಲ್ಲೂರು, ಸಂಚಾರಿ ಠಾಣೆ ಕುಂದಾಪುರ, ಕುಂದಾಪುರ ಗ್ರಾಮಾಂತರ ಠಾಣೆಗಳಲ್ಲಿ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅವರು ಜನಾನುರಾಗಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಉತ್ತಮ ಆರೋಗ್ಯವಂತ‌ ದೇಹ ಕಾಯವನ್ನು ಹೊಂದಿದ್ದ ಅವರ ಇಲಾಖಾ‌ ಸೇವೆಯ ನಿವೃತ್ತಿಗೆ ಇನ್ನು ಕೆಲವೇ ತಿಂಗಳುಗಳು‌ ಉಳಿದಿದ್ದವು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ‌ ಇದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮೊಸರಲ್ಲಿ ಕಲ್ಲು ಹುಡುಕುವ ಯತ್ನ : ಬಿ.ವೈ.ವಿಜಯೇಂದ್ರ
ವೈಜ್ಞಾನಿಕವಾಗಿ ಕ್ಷೇತ್ರಗಳ ಮರುವಿಂಗಡಣೆ ಆಗಬೇಕು - ಜನಸಂಖ್ಯೆ ಆಧಾರದಲ್ಲಿ ಮಾಡಿದರೆ ಅನ್ಯಾಯ