ಕುರುಗೋಡು: ಪಟ್ಟಣದಲ್ಲಿ ಮೊದಲ ಬಾರಿಗೆ ಫೆ.೧೫, ೧೬ ಎರಡು ದಿನ ನಡೆಯುತ್ತಿರುವ ಕುರುಗೋಡು ಉತ್ಸವದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಉತ್ಸಾಹದಿಂದ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಶಾಸಕ ಜೆ.ಎನ್. ಗಣೇಶ್ ಸಲಹೆ ನೀಡಿದರು.
ಗತವೈಭವದ ಇತಿಹಾಸವನ್ನು ಮರುಕಳಿಸುವ ಉತ್ಸವ ಆಚರಣೆಗೆ ತಯಾರಿಸಿದ ರೂಪುರೇಷೆಗಳ ಜವಾಬ್ದಾರಿ ವಹಿಸಿಕೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ರಾಜಿ ಮಾಡಿಕೊಳ್ಳದೇ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕು ಎಂದು ಎಚ್ಚರಿಸಿದರು.
ನಗರದ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ರಸ್ತೆ ಗುಂಡಿ ಮುಚ್ಚುವುದು ಸೇರಿ ಕುಡಿಯುವ ನೀರು, ಪ್ರಚಾರ ವಾಹನದ ವ್ಯವಸ್ಥೆ ನೋಡಿಕೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆಗೆ ತಿಳಿಸಿದರು.ಕಲಾ ತಂಡಗಳ ಜನಪದ ವಾಹಿನಿ ಸಂಚರಿಸುವ ರಸ್ತೆಯುದ್ದಕ್ಕೂ ಆಕರ್ಷಕ ರಂಗವಲ್ಲಿ ಚಿತ್ತಾರ, ವಿದ್ಯುತ್ ದೀಪ ಮತ್ತು ತಳಿರು-ತೋರಣಗಳಿಂದ ಅಲಂಕರಿಸುವ ಕಾರ್ಯ ಅಚ್ಚುಕಟ್ಟಾಗಿ ನಡೆಯಬೇಕು. ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು.
ಉತ್ಸವದ ಅಂಗವಾಗಿ ಪಟ್ಟಣದ ಎಲ್ಲ ಪ್ರಮುಖ ದೇವಾಲಯಗಳಿಗೆ ಹೂವಿನ ಅಲಂಕಾರ ಮಾಡುವುದು, ಆನೆ ಅಂಬಾರಿ ಮೆರವಣಿಗೆ, ಫಲ-ಪುಷ್ಪ ಪ್ರದರ್ಶನ, ಪೌಷ್ಠಿಕ ಆಹಾರ ಪ್ರದರ್ಶನ ಮೇಳ, ಗಾಳಿಪಟ ಉತ್ಸವ, ಮ್ಯಾರಥಾನ್, ವಿವಿಧ ತಳಿಯ ಜಾನುವಾರು ಪ್ರದರ್ಶನ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಉತ್ಸವದಲ್ಲಿ ಎಲ್ಲರೂ ಭಾಗವಹಿಸಿ: ಹಂಪಿ ಉತ್ಸವದ ಮಾದರಿಯಲ್ಲಿ ಪ್ರತಿವರ್ಷ ಕುರುಗೋಡು ಮತ್ತು ಕಂಪ್ಲಿ ಉತ್ಸವಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಯಲ್ಲಿ ಮನವಿ ಮಾಡಿಕೊಂಡಿದ್ದೆ ಎಂದು ಶಾಸಕ ಜೆ.ಎನ್.ಗಣೇಶ್ ತಿಳಿಸಿದರು.
ಸಂಘ-ಸಂಸ್ಥೆ ಪದಾಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಮುಖಂಡರು ಉತ್ಸಾಹದಿಂದ ಭಾಗವಹಿಸಿ ಉತ್ಸವ ಯಶಸ್ವಿಗೊಳಿಸಬೇಕು ಎಂದರು.
ಪಟ್ಟಣದಲ್ಲಿ ಪ್ರಾಚೀನ ವೈಭವ ಮರುಕಳಿಸುವಂತೆ ಹಲವು ಬಗೆಯ ಅಲಂಕಾರಕ್ಕೆ ಯೋಜನೆ ರೂಪಿಸಲಾಗಿದೆ. ಕ್ರೀಡೆ, ನೃತ್ಯ, ಸಂಗೀತ ಸೇರಿ ಇತರ ವೇದಿಕೆ ಕಾರ್ಯಕ್ರಮ ಆಯೋಜಿಸಿದ್ದು ಉತ್ಸವಕ್ಕೆ ಬರುವ ೩೦ಸಾವಿರ ಜನರಿಗೆ ಭೂಜನಾ ವ್ಯವಸ್ಥೆ ಮಾಡಲಾಗುವುದು. ಉತ್ಸವ ಯಾವುದೇ ಪಕ್ಷ, ವ್ಯಕ್ತಿ, ಸಮುದಾಯಕ್ಕೆ ಸೀಮಿತವಾಗದೇ ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.