ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಮಹೋತ್ಸವ

KannadaprabhaNewsNetwork |  
Published : Sep 26, 2024, 10:11 AM IST
ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಮಹೋತ್ಸವ | Kannada Prabha

ಸಾರಾಂಶ

ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಬುಧವಾರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಮಹೋತ್ಸವ ಉದ್ಘಾಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಪ್ರಸಕ್ತ ದಿನಗಳಲ್ಲಿ ಬ್ಲಾಕ್ ಮೇಲ್ ಪತ್ರಕರ್ತರಿಂದಾಗಿ ನೈಜ ಪತ್ರಕರ್ತ ತನ್ನ ಅಸ್ತಿತ್ವ ಕಳೆದುಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಬುಧವಾರ ನಡೆದ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜಕ್ಕೆ ಕಳಂಕ ತರುತ್ತಿರುವ ವ್ಯಕ್ತಿಗಳನ್ನು ಪತ್ರಿಕೋದ್ಯಮದಿಂದ ದೂರ ಇಡುವ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಗಾಂಧಿ ಪತ್ರಿಕೋದ್ಯಮದ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರು. ಡಾ.ಅಂಬೇಡ್ಕರ್ ಅವರು ಐದು ಪತ್ರಿಕೆಗಳ ಸಂಪಾದಕರಾಗಿದ್ದರು. ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ದುಲ್ ಕಲಾಂ ಪತ್ರಿಕಾ ವಿತಕರರಾಗಿ ಹೋರಾಟದ ಬದುಕು, ಬೆಳೆದು ಬಂದ ದಾರಿ ನಮ್ಮೆಲ್ಲರ ಸ್ಪೂರ್ತಿಯಾಗಬೇಕು. ಇಂತಹ ಮಹಾನ್‌ ನಾಯಕರ ಆದರ್ಶ ನಮಗೆ ಬೆಳಕಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಹೋಬಳಿ ಸಂಘದ ಬೆಳ್ಳಿ ಮಹೋತ್ಸವ ಅಂಗವಾಗಿ ಹೊರತರಲು ಉದ್ದೇಶಿರುವ ‘ಬೆಳ್ಳಿ ಪಯಣ’ ಸ್ಮರಣ ಸಂಚಿಕೆಯ ಮುಖಪುಟ ಬಿಡುಗಡೆ ಮಾಡಿದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಕುಶಾಲನಗರದಲ್ಲಿ ಪತ್ರಕರ್ತ ಭವನ ನಿರ್ಮಾಣ ಮಾಡಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಪತ್ರಕರ್ತರು ನೈಜ ಹಾಗೂ ವಸ್ತು ಸ್ಥಿತಿ ವರದಿಗಳನ್ನು ಮಾಡುವ‌ ಮೂಲಕ ಸಮಾಜದ ಏಳಿಗೆಗೆ ಒತ್ತು ನೀಡಬೇಕು ಎಂದರು. ಇಂದಿನ ಕಂಪ್ಯೂಟರ್ ಹಾಗೂ ಹೈಟೆಕ್ ತಂತ್ರಜ್ಞಾನ ವ್ಯವಸ್ಥೆಯಲ್ಲಿ

ಪತ್ರಕರ್ತರು ವೃತ್ತಿ ನೈಪುಣ್ಯತೆಯನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಸಂಘದ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿ, ಪತ್ರಕರ್ತರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಹಾಗೂ ಸಮಸ್ಯೆಗಳನ್ನು ಬಿಂಬಿಸುವಂತಹ ಲೇಖನಗಳನ್ನು ಪ್ರಕಟಿಸುವಂತಾಗಬೇಕು ಎಂದು ಸಲಹೆ ನೀಡಿದರು.

ತಮ್ಮ ವೃತ್ತಿಯೊಂದಿಗೆ ಪ್ರತಿಯೊಬ್ಬರು ಪರಿಸರ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಶಕ್ತಿ ಪ್ರಧಾನ ಸಂಪಾದಕ ಜಿ ರಾಜೇಂದ್ರ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿ, ಸಂವಿಧಾನದ ನಾಲ್ಕನೇ ಅಂಗವಾಗಿರುವ ಮಾದ್ಯಮ ರಂಗ ತುಂಬಾ ಮಹತ್ವದ್ದಾಗಿದೆ, ಸಮಾಜದ ಏಳಿಗೆಯಲ್ಲಿ ಪತ್ರಿಕಾ ಕ್ಷೇತ್ರ ತನ್ನದೇ ಆದ ಛಾಪು ಮೂಡಿಸಿದೆ. ಕಾಲಕ್ಕೆ ತಕ್ಕಂತೆ ಪ್ರತಿಯೊಬ್ಬರೂ ಬದಲಾಗಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಕಳೆದ 25 ವರ್ಷಗಳ ಸುದೀರ್ಘ ಅವಧಿಯ ಬೆಳವಣಿಗೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ ಆರ್ ಸವಿತಾ ರೈ ಸಾಧಕರನ್ನು ಸನ್ಮಾನಿಸಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಸಂಘದ ರಾಷ್ಟ್ರೀಯ ಸಮಿತಿ ಸದಸ್ಯರಾದ ಸುನಿಲ್ ಪೊನ್ನೆಟ್ಟಿ ಅವರು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ನಡುವೆ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತ ತಂಡಗಳ ಸದಸ್ಯರಿಗೆ ನಗದು ಬಹುಮಾನ ವಿತರಿಸಿದರು.

ಸನ್ಮಾನ:

ಹೋಬಳಿ ಸಂಘದ ಅಧ್ಯಕ್ಷರಾಗಿ 25 ವರ್ಷಗಳ ಅವಧಿಯಲ್ಲಿ ದುಡಿದು ಸಂಘದ ಏಳಿಗೆಗಾಗಿ ಶ್ರಮಿಸಿದ ಸ್ಥಾಪಕ ಅಧ್ಯಕ್ಷ ಬಿ.ಆರ್.ನಾರಾಯಾಣ, ಕೆ.ಕೆ.ನಾಗರಾಜ ಶೆಟ್ಟಿ, ಎಂ.ಎನ್.ಚಂದ್ರಮೋಹನ್, ಸಬಲಂ ಬೋಜಣ್ಣ ರೆಡ್ಡಿ, ರಘು ಹೆಬ್ಬಾಲೆ ಅವರನ್ನು ಗೌರವಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಡಾ.ಕಿಶೋರ್ ಕುಮಾರ್, ಪುರಸಭೆಯ ದಫೆದಾರ್ ಮೋಹನ್‌ಕುಮಾರ್, ಸಮಾಜ ಸೇವಕ ಮುನೀರ್, ಮಹಿಳಾ ಭಜನಾ ಮಂಡಳಿ ಪ್ರಮುಖರಾದ ಪದ್ಮಾ ಪುರುಷೋತ್ತಮ್, ಹಿರಿಯ ಪತ್ರಿಕಾ ವಿತರಕ ವಿ.ಪಿ.ಪ್ರಕಾಶ್ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ನಜೀರ್ ಅಹ್ಮದ್, ಕರ್ನಾಟಕ ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷರೂ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ, ಕುದುಪಜೆ ಬಸಪ್ಪ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ಕೊಡವ ಸಮಾಜದ ನಿರ್ದೇಶಕಿ ಧರಣಿ ಸೋಮಯ್ಯ ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್ ಸ್ವಾಗತಿಸಿದರು. ಕೊಡಗು ವಿವಿ ಉಪನ್ಯಾಸಕ ಡಾ.ಜಮೀರ್ ಅಹಮ್ಮದ್ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಟಿ.ಆರ್.ಪ್ರಭುದೇವ್ ನಿರೂಪಿಸಿದರು. ಕೆ.ಕೆ.ನಾಗರಾಜ್ ಶೆಟ್ಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!