ಕನ್ನಡಪ್ರಭ ವಾರ್ತೆ ಮಡಿಕೇರಿ
ಕರ್ನಾಟಕ ಸುವರ್ಣ ಸಂಭ್ರಮ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ಸಂಘ ಸಂಸ್ಥೆಗಳು, ಕನ್ನಡ ಅಭಿಮಾನಿಗಳು ಹಾಗೂ ನಾಗರಿಕರ ಸಹಭಾಗಿತ್ವದಲ್ಲಿ ಹಾಗೂ 69 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ 11ರಂದು ಕುಶಾಲನಗರದಲ್ಲಿ 5 ಸಾವಿರ ಮಂದಿ ಪಾಲ್ಗೊಂಡು ‘ಕನ್ನಡ ಕಂಠ ಗಾಯನ’ ಕಾರ್ಯಕ್ರಮ ನಡೆಯಲಿದೆ.ಕುಶಾಲನಗರದ ರಥ ಬೀದಿಯಲ್ಲಿ ಏಕಕಾಲದಲ್ಲಿ ಐದು ಸಹಸ್ರ ಮಂದಿಯಿಂದ ‘ಕನ್ನಡ ನಾಡಗೀತೆ, ರೈತಗೀತೆ ಮತ್ತು ಹುಟ್ಟದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತ ಗಾಯನ’ ನಡೆಯಲಿದೆ.
ಡಿ.20ರಿಂದ ಮೂರು ದಿನಗಳ ಕಾಲ ಮಂಡ್ಯ ನಗರದಲ್ಲಿ ನಡೆಯಲಿರುವ ‘87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ಪ್ರಯುಕ್ತ ಕೊಡಗು ಜಿಲ್ಲೆಗೆ ಆಗಮಿಸುವ ‘ಕನ್ನಡ ಜ್ಯೋತಿ ರಥ’ ದ ಅದ್ಧೂರಿ ಮೆರವಣಿಗೆಯನ್ನು 11ರಂದು ಬೆಳಗ್ಗೆ 10.30ಕ್ಕೆ ಬೈಚನಹಳ್ಳಿ ಮಾರಿಯಮ್ಮನ ದೇವಾಲಯದಿಂದ ರಥದ ಬೀದಿಯವರೆಗೆ ಆಯೋಜಿಸಲಾಗಿದೆ.ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ನಾಗೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಕುಶಾಲನಗರ ಪುರಸಭೆ ಅಧ್ಯಕ್ಷ ಜಯಲಕ್ಷ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ, ಕುಶಾಲನಗರ ಡಿವೈಎಸ್‌ಪಿ ಆರ್.ವಿ .ಗಂಗಾಧರಪ್ಪ, ಕುಶಾಲನಗರ ಪುರಸಭೆ ಮುಖ್ಯನಿರ್ವಾಹಣಾಧಿಕಾರಿ ಕೃಷ್ಣಪ್ರಸಾದ್, ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮದ್, ರೇವತಿ ರಮೇಶ್, ಜಿಲ್ಲಾ ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್, ತಾಲೂಕು ಗೌರವ ಕಾರ್ಯದರ್ಶಿ ಎಸ್.ನಾಗರಾಜು, ಟಿ.ವಿ.ಶೈಲಾ, ತಾಲೂಕು ಕೋಶಾಧಿಕಾರಿ ಕೆ.ವಿ.ಉಮೇಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಅಖಿಲ ಭಾರತ 87 ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಕನ್ನಡ ಜ್ಯೋತಿ ಹೊತ್ತ ರಥ ಯಾತ್ರೆ 10 ಮತ್ತು 11 ರಂದು ಕೊಡಗು ಜಿಲ್ಲೆಯಾದ್ಯಂತ ಸಂಚರಿಸಲಿದ್ದು, ಜಿಲ್ಲೆಯಲ್ಲಿ ಸಂಚರಿಸುವ ವೇಳಾ ಪಟ್ಟಿ ವಿವರ ಇಂತಿದೆ:10ರಂದು ಬೆಳಗ್ಗೆ 9.30ಕ್ಕೆ ಸಂಪಾಜೆಯಲ್ಲಿ ಗೌರವಪೂರ್ವಕವಾಗಿ ಸ್ವಾಗತಿಸಲಾಗುತ್ತದೆ. ಬಳಿಕ ಬೆಳಗ್ಗೆ 11 ಗಂಟೆಗೆ ಮಡಿಕೇರಿಗೆ ಆಗಮಿಸಲಿದೆ. ಮಧ್ಯಾಹ್ನ 12 ಗಂಟೆಗೆ ಮೂರ್ನಾಡಿಗೆ ತೆರಳಲಿದೆ. ಮಧ್ಯಾಹ್ನ 2.30ಕ್ಕೆ ವಿರಾಜಪೇಟೆಯಲ್ಲಿ ಸ್ವಾಗತಿಸಲಾಗುತ್ತದೆ. ಮಧ್ಯಾಹ್ನ 4 ಗಂಟೆಗೆ ಗೋಣಿಕೊಪ್ಪದಲ್ಲಿ ಸ್ವಾಗತಿಸಲಾಗುತ್ತದೆ. ಸಂಜೆ 5.30ಕ್ಕೆ ಪೊನ್ನಂಪೇಟೆಯಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಲಿದೆ.
11ರಂದು ಬೆಳಗ್ಗೆ 10 ಗಂಟೆಗೆ ಕುಶಾಲನಗರದಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3.30 ಗಂಟೆಗೆ ಸೋಮವಾರಪೇಟೆಯಲ್ಲಿ ಬರಮಾಡಿಕೊಳ್ಳಲಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ತಿಳಿಸಿದ್ದಾರೆ.