ಕನ್ನಡಪ್ರಭ ವಾರ್ತೆ ಕುಶಾಲನಗರ
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಥೋತ್ಸವದ ಅಂಗವಾಗಿ ಉತ್ಸವಾದಿಗಳು ನ.15 ರಿಂದ 25 ರವರೆಗೆ ನಡೆಯಲಿದೆ ಎಂದರು.
ಸೇವಾಕರ್ತರ ಸಹಕಾರದೊಂದಿಗೆ ಬೆಳಗ್ಗೆ ಹಾಗೂ ಸಂಜೆ ವಿವಿಧ ಪೂಜಾ ವಿಧಿಗಳು, ಸಂತರ್ಪಣೆಗಳು ನೆರವೇರಲಿವೆ. ರಥೋತ್ಸವದ ಅಂಗವಾಗಿ ಡಿ.7,8 ಮತ್ತು 9 ರಂದು ರಾಸುಗಳ ಜಾತ್ರೆ ಮತ್ತು ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಡೆಯುವ ಗೋಜಾತ್ರೆಯಲ್ಲಿ ಜಿಲ್ಲೆ ಹಾಗೂ ನೆರೆ ಜಿಲ್ಲೆಯಿಂದ ರೈತರು ಪಾಲ್ಗೊಳ್ಳಲಿದ್ದು ತಳಿಯ ರಾಸುಗಳ ಪ್ರದರ್ಶನ ನಡೆಯಲಿದೆ. ರೈತರಿಗೆ ಹಾಗೂ ರಾಸುಗಳಿಗೆ ಬೇಕಾದ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು.ದೇವಾಲಯದ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಮಾತನಾಡಿ, ನ.16 ರಿಂದ 25 ರವರೆಗೆ ನಡೆಯುವ ಉತ್ಸವಾದಿಗಳ ಬಗ್ಗೆ ಮಾಹಿತಿ ಒದಗಿಸಿದರು. ದಕ್ಷಿಣ ಕನ್ನಡದಲ್ಲಿ ಆಚರಿಸುವ ಮಾದರಿಯಲ್ಲಿ ದಟ್ಟೋತ್ಸವದಂದು ವಿಶೇಷ ರಂಗಪೂಜೆ ನೆರವೇರಿಸಲಾಗುವುದು, ಚಂದ್ರಬಿಂಬೋತ್ಸವ ಮತ್ತಿತರ ಉತ್ಸವಾದಿಗಳಿಗೆ ವಿಶೇಷ ಹೂವಿನ ಅಲಂಕಾರಕ್ಕೆ ಪ್ರತ್ಯೇಕ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ.
ಪದ್ಧತಿಯಂತೆ ಈ ಬಾರಿ 7 ದಿನಗಳ ಪೈಕಿ ಮೂರು ದಿನಗಳ ಕಾಲ ಮಾತ್ರ ಪಲ್ಲಕ್ಕಿ ಹೊರುವವರಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ತಾಂತ್ರಿಕತೆ ಬಳಸಿಕೊಂಡು ಆಯಾ ಉತ್ಸವಗಳ ರೂಪಕ್ಕೆ ಒತ್ತು ನೀಡಿ ‘ಛಾಯಾ ವಾಹನೋತ್ಸವ’ ಎಂಬ ಕಲ್ಪನೆಗೆ ಚಾಲನೆ ನೀಡಲಿದ್ದೇವೆ ಎಂದು ತಿಳಿಸಿದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ವಿ.ಪಿ.ಶಶಿಧರ್ ಮಾತನಾಡಿ, ಜಾತ್ರೋತ್ಸವ ಅಂಗವಾಗಿ ಪ್ರತಿದಿನ ಸಂಜೆ 7 ರಿಂದ 10 ಗಂಟೆ ತನಕ ಜಾತ್ರಾ ಮೈದಾನದಲ್ಲಿ ಸಾಂಸ್ಕೃತಿಕ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ 13 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಪ್ರತಿಭೆಗಳು ಒಳಗೊಂಡಂತೆ ಪ್ರಸಿದ್ದ ಕಲಾವಿದರು ಭಾಗಿಯಾಗಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಆರ್.ಬಾಬು, ಪ್ರಧಾನ ಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ಖಜಾಂಚಿ ಎಸ್.ಕೆ.ಸತೀಶ್, ನಿರ್ದೇಶಕರಾದ ಕೆ.ಎನ್.ದೇವರಾಜ್, ಎಚ್.ಎಂ.ಚಂದ್ರು, ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸ್ ರಾವ್ ಇದ್ದರು.