ಅಮರೇಶ್ವರಸ್ವಾಮಿ ಕಂದಗಲ್ಲಮಠ
ಕುಷ್ಟಗಿ-ಹುಬ್ಬಳ್ಳಿ ರೈಲಿನಲ್ಲಿ ಮೇ 15ರಿಂದ ಮೇ 22ರ ವರೆಗೆ ಐದು ಸಾವಿರಕ್ಕೂ ಹೆಚ್ಚು ಜನರು ಪ್ರಯಾಣ ಬೆಳೆಸಿದ್ದಾರೆ. ಕುಷ್ಟಗಿ, ಯಲಬುರ್ಗಾ ಭಾಗದಿಂದ ಹುಬ್ಬಳ್ಳಿ ಪ್ರಯಾಣ ಈಗ ಸರಳವಾಗಿದ್ದು, ರೈಲಿಗೆ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ.
ಗದಗ-ವಾಡಿ ರೈಲ್ವೆ ಯೋಜನೆಯ ಕುಷ್ಟಗಿ-ಹುಬ್ಬಳ್ಳಿ ರೈಲಿಗೆ ಮೇ ೧೫ರಂದು ಕುಷ್ಟಗಿಯಲ್ಲಿ ಕೇಂದ್ರದ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಚಾಲನೆ ನೀಡಿದ್ದರು. ಕುಷ್ಟಗಿ ವರೆಗೆ ರೈಲ್ವೆ ಕಾಮಗಾರಿ ಪೂರ್ಣಗೊಂಡಿದ್ದು, ಕುಷ್ಟಗಿಯಿಂದ ಹುಬ್ಬಳ್ಳಿ ವರೆಗೆ ರೈಲು ಸಂಚಾರ ಆರಂಭವಾಗಿದೆ. ಏಳು ದಿನಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಜನ ಪ್ರಯಾಣ ಬೆಳೆಸಿರುವುದು, ಜನರಿಗೆ ಈ ರೈಲು ಸಂಚಾರದಿಂದ ಅನುಕೂಲ ಆಗಿರುವುದನ್ನು ತೋರಿಸುತ್ತದೆ.ಕುಷ್ಟಗಿ ತಾಲೂಕಿನ ಜನರು ಹುಬ್ಬಳ್ಳಿಗೆ ಗಜೇಂದ್ರಗಡ, ಗದಗ ಮೂಲಕ ತೆರಳಬೇಕಿತ್ತು. ಅಲ್ಲದೇ ಬಸ್ಸಿನಲ್ಲಿ ಪ್ರಯಾಣಿಸಲು ಹೆಚ್ಚಿನ ವೆಚ್ಚ ಸಹ ಆಗುತ್ತಿತ್ತು. ಆದರೆ ಸದ್ಯ ಕುಷ್ಟಗಿ ಭಾಗದ ಜನರು ನೇರವಾಗಿ ಬೆಳಗ್ಗೆ 6.40ಕ್ಕೆ ತಮ್ಮೂರಿಂದ ಕುಷ್ಟಗಿ ರೈಲು ಹತ್ತಿದರೆ ಗದಗ, ಹುಬ್ಬಳ್ಳಿಗೆ ಹೋಗಬಹುದಾಗಿದೆ. ಹಾಗೆ ಹನುಮಾಪುರ, ಯಲಬುರ್ಗಾ ತಾಲೂಕಿನ ಲಿಂಗನಬಂಡಿ, ಯಲಬುರ್ಗಾ, ಸಂಗನಹಾಳ, ಕುಕನೂರು, ತಳಕಲ್ ರೈಲ್ವೆ ನಿಲ್ದಾಣಗಳಲ್ಲಿ ನೂರಕ್ಕೂ ಹೆಚ್ಚು ಜನ ಹತ್ತುತ್ತಾರೆ. ಹಾಗೆ ಹುಬ್ಬಳ್ಳಿಯಿಂದ ಬರುವವರ ಸಂಖ್ಯೆಯೂ ಅಷ್ಟೇ ಪ್ರಮಾಣದ್ದಾಗಿದೆ.
ಬಟ್ಟೆ ವ್ಯಾಪಾರ, ಕೃಷಿ ದಲ್ಲಾಳಿ, ತರಕಾರಿ ಹಾಗೂ ನಾನಾ ವಾಣಿಜ್ಯ ವ್ಯಾಪಾರಸ್ಥರು ವ್ಯಾಪಾರಕ್ಕೆಂದು ಹೆಚ್ಚು ಗದಗ-ಹುಬ್ಬಳ್ಳಿ ನಗರ ಅವಲಂಬಿಸಿದ್ದಾರೆ. ಅಂತಹ ವ್ಯಾಪಾರಸ್ಥರಿಗೆ ಈ ನೂತನ ಕುಷ್ಟಗಿ-ಹುಬ್ಬಳ್ಳಿ ರೈಲಿನಿಂದ ಭಾರಿ ಅನುಕೂಲ ಆಗಿದೆ.
ಕುಷ್ಟಗಿ-ಹುಬ್ಬಳ್ಳಿ ರೈಲು ಜನರಿಗೆ ಅಚ್ಚುಮೆಚ್ಚು ಆಗುತ್ತಿದೆ ಎನ್ನುವುದಕ್ಕೆ ಪ್ರಯಾಣಿಕರ ಸಂಖ್ಯೆಯೇ ಸಾಕ್ಷಿ. ಕಡಿಮೆ ದರದಲ್ಲಿ ಹಾಗೂ ಸ್ಥಳೀಯವಾಗಿ ಸರಳವಾಗಿ ಪ್ರಯಾಣ ಬೆಳೆಸಲು ಅನುಕೂಲ ಆಗಿದೆ. ಆರೋಗ್ಯ ಸಮಸ್ಯೆ ಇರುವವರು ಚಿಕಿತ್ಸೆಗೆ ಗದಗ, ಹುಬ್ಬಳ್ಳಿಗೆ ಸಾಮಾನ್ಯವಾಗಿ ಹೋಗುತ್ತಿದ್ದು, ಆರಾಮದಾಯಕ ಪ್ರಯಾಣ ಕೈಗೊಳ್ಳಬಹುದು.
ಕುಷ್ಟಗಿಯಿಂದ ಸಂಚರಿಸುವ ರೈಲಿನಿಂದ ಗದಗ-ಹುಬ್ಬಳ್ಳಿ ಮಾರ್ಗದ ಹಳೆ ರೈಲ್ವೆ ನಿಲ್ದಾಣಗಳ ಗ್ರಾಮಗಳ ಜನರಿಗೂ ಅನುಕೂಲ ಆಗಿದೆ. ಕುಷ್ಟಗಿಯಿಂದ ತಳಕಲ್ ವರೆಗೆ ನೂತನ ರೈಲು ಮಾರ್ಗದ ಮೂಲಕ ಬನ್ನಿಕೊಪ್ಪ, ಹರ್ಲಾಪುರ, ಗದಗ, ಹುಬ್ಬಳ್ಳಿಗೆ ರೈಲು ಹೋಗುವುದರಿಂದ ಆ ಭಾಗದ ಜನರಿಗೆ ಹೆಚ್ಚುವರಿ ರೈಲು ಯೋಜನೆ ಒದಗಿಸಿದಂತಾಗಿದೆ.
ಕುಷ್ಟಗಿಯಿಂದ ತಳಕಲ್ಲಿನ ವರೆಗೆ ಬೆಳಗ್ಗೆ, ಸಂಜೆ ಸೇರಿ 800ಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಾರೆ. ಹಾಗೆ ತಳಕಲ್ಲ, ಬನ್ನಿಕೊಪ್ಪ, ಹರ್ಲಾಪುರ, ಗದಗ ಮಾರ್ಗದ ಜನರಿಗೆ ಸಹ ಪ್ರಯಾಣಕ್ಕೆ ಹೆಚ್ಚು ಅನುಕೂಲ ಆಗಿದೆ. ಅಲ್ಲಿ ಸಹ ನೂರಾರು ಪ್ರಯಾಣಿಕರು ನಿತ್ಯ ಸಂಚರಿಸುತ್ತಾರೆ. 9 ಬೋಗಿಗಳು ಸಹ ಭರ್ತಿಯಾಗುತ್ತವೆ.
ಬಸವರಾಜ ರಾಯರಡ್ಡಿ, ಸಿಎಂ ಆರ್ಥಿಕ ಸಲಹೆಗಾರರುಕುಕನೂರಿನಿಂದ ಗದಗ, ಹುಬ್ಬಳ್ಳಿಗೆ ರೈಲಿನಲ್ಲಿ ಸಂಚರಿಸಲು ಅನುಕೂಲ ಆಗಿದೆ. ವಾಣಿಜ್ಯ ಕ್ಷೇತ್ರದ ಕೆಲಸಗಳಿಗೆ ಹಾಗೂ ಆರೋಗ್ಯ, ನಾನಾ ಕೆಲಸಗಳಿಗೆ ಸಂಚರಿಸಲು ಕುಷ್ಟಗಿ-ಹುಬ್ಬಳ್ಳಿ ರೈಲು ಅನುಕೂಲ ಕಲ್ಪಿಸಿದೆ. ಇದರಿಂದ ಪ್ರಯಾಣ ಕಡಿಮೆ ವೆಚ್ಚದಾಯಕ ಹಾಗೂ ಸರಳವಾಗಿದೆ.