ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಕೊಪ್ಪಳ ಜಿಲ್ಲೆಯ ಗಂಗಾವತಿ, ಕುಕನೂರು ಹಾಗೂ ಕನಕಗಿರಿ ತಾಲೂಕುಗಳು ಬರಪೀಡಿತ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಆದರೆ ಮಳೆ ಕೊರತೆ, ಬೆಳೆ ನಷ್ಟ ಹಾಗೂ ಕೃಷಿ ಚಟುವಟಿಕೆಗಳ ಮೇಲಿನ ಪ್ರತಿಕೂಲ ಪರಿಣಾಮದಿಂದ ಸಂಕಷ್ಟ ಎದುರಿಸುತ್ತಿರುವ ಕುಷ್ಟಗಿಗೆ ಪಟ್ಟಿಯಲ್ಲಿ ಸ್ಥಾನ ಸಿಗದಿರುವುದು ಇದೀಗ ಕುಷ್ಟಗಿಗೆ ಬರ ಇಲ್ಲವೇ? ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ತಾಲೂಕಿನ ಹಲವು ಭಾಗಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ರೈತರ ಕೃಷಿ ಚಟುವಟಿಕೆಗಳು ತೊಂದರೆಗೀಡಾಗಿವೆ. ಬೆಳೆಗಳ ಇಳುವರಿ ಕುಸಿತ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಹಾಗೂ ಕುಡಿಯುವ ನೀರಿನ ಆತಂಕವೂ ಎದುರಾಗಿದೆ. ಇಂತಹ ವಾಸ್ತವ ಪರಿಸ್ಥಿತಿಯ ನಡುವೆಯೂ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕುಷ್ಟಗಿಯನ್ನು ಹೊರಗಿಟ್ಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.ಬರಪೀಡಿತ ತಾಲೂಕುಗಳಿಗೆ ಸರ್ಕಾರದಿಂದ ದೊರೆಯುವ ಬೆಳೆ ನಷ್ಟ ಪರಿಹಾರ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ವಿವಿಧ ಪರಿಹಾರ ಕ್ರಮಗಳಿಂದ ಕುಷ್ಟಗಿ ವಂಚಿತವಾಗುವ ಆತಂಕ ರೈತರಲ್ಲಿ ಮೂಡಿದೆ.
ಕುಷ್ಟಗಿ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆ ಬೆಳೆಗಳು ಹಾಳಾಗಿವೆ. ಈ ವಾಸ್ತವಾಂಶ ಅಧಿಕಾರಿಗಳು ಹಾಗೂ ಸಚಿವರಿಗೂ ತಿಳಿದಿದೆ. ಹೀಗಿದ್ದರೂ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿರುವುದು ಸರಿಯಲ್ಲ. ಕೂಡಲೇ ಕುಷ್ಟಗಿಯನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ರೈತರನ್ನು ಸಂಘಟಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತಪರ ಹೋರಾಟ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಅಡವಿಭಾವಿ ಆಗ್ರಹಿಸಿದ್ದಾರೆ.
ಕುಷ್ಟಗಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕಾಗಿತ್ತು. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಸಚಿವರೊಂದಿಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ತಿಳಿಸಿದ್ದಾರೆ.